ನರೇಂದ್ರ ಮೋದಿ
(ಪಿಟಿಐ ಚಿತ್ರ)
ಬೆಂಗಳೂರು: ಪಾಕಿಸ್ತಾನ ವಿರುದ್ಧ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಯಶಸ್ಸಿನ ಹಿಂದೆ 'ಭಾರತೀಯ ತಂತ್ರಜ್ಞಾನ' ಹಾಗೂ 'ಮೇಕ್ ಇನ್ ಇಂಡಿಯಾ'ದ ಬಲ ಅಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿ ಹಳದಿ ಮೆಟ್ರೊ ಮಾರ್ಗದ ಉದ್ಘಾಟನೆ ಮತ್ತು ಬಹುನಿರೀಕ್ಷಿತ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮಾತನಾಡಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಮೂಲಕ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕ ನೆಲೆಗಳನ್ನು ನಾಶಮಾಡಿದ ಭಾರತದ ಸಾಮರ್ಥ್ಯದ ಹೊಸ ಮುಖವನ್ನು ಇಡೀ ಜಗತ್ತೇ ಕಂಡಿತು ಎಂದು ಅವರು ಉಲ್ಲೇಖಿಸಿದ್ದಾರೆ.
ಇಂದು ಭಾರತವು ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆಯಾಗಿದೆ. ಕಳೆದ 11 ವರ್ಷಗಳಲ್ಲಿ ನಮ್ಮ ಆರ್ಥಿಕತೆಯು 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇದೇ ವೇಗದೊಂದಿಗೆ ನಾವು ಮೂರನೇ ಆರ್ಥಿಕತೆಯತ್ತ ಪ್ರಗತಿ ಸಾಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಶ್ವದ ಮೂರನೇ ಅತಿ ದೊಡ್ಡ ಮೆಟ್ರೊ ಜಾಲ ಈಗ ಭಾರತದಲ್ಲಿದೆ. 2014ರಲ್ಲಿ ದೇಶದಲ್ಲಿ ಐದು ನಗರಗಳಲ್ಲಿ ಮಾತ್ರ ಮೆಟ್ರೊ ಸೇವೆ ಲಭ್ಯವಿತ್ತು. ಅದು ಈಗ 24 ನಗರಗಳಿಗೆ ವಿಸ್ತರಿಸಿದೆ. ಕಳೆದ 11 ವರ್ಷಗಳಲ್ಲಿ 40 ಸಾವಿರ ಕಿ.ಮೀ.ಗಿಂತಲೂ ಹೆಚ್ಚು ಉದ್ದದ ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.