ADVERTISEMENT

ಬಂಡೀಪುರ: ಕೊನೆಗೂ ಸೆರೆ ಸಿಕ್ಕ ವ್ಯಾಘ್ರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 19:24 IST
Last Updated 13 ಅಕ್ಟೋಬರ್ 2019, 19:24 IST
ಸೆರೆಯಾದ ಹುಲಿ
ಸೆರೆಯಾದ ಹುಲಿ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಹುಂಡೀಪುರ ಹಾಗೂ ಚೌಡಹಳ್ಳಿ ಗ್ರಾಮಗಳಲ್ಲಿ ಇಬ್ಬರು ರೈತರನ್ನು ಕೊಂದಿದೆ ಎನ್ನಲಾದ ಹುಲಿ ಐದು ದಿನಗಳ ಕಾರ್ಯಾಚರಣೆಯ ನಂತರ ಭಾನುವಾರ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಸೆರೆ ಹಿಡಿದಿರುವ ಹುಲಿ ನರಹಂತಕನೇ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್‌ ಹೇಳಿದ್ದಾರೆ.

ಅಂದಾಜು ಏಳು ವರ್ಷ ವಯಸ್ಸಿನ ಗಂಡು ಹುಲಿಯನ್ನು ಮೈಸೂರಿನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ನಾಲ್ಕು ದಿನಗಳಿಂದ ಪಶುವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣಿಗೆ ಬೀಳದಿದ್ದ ವ್ಯಾಘ್ರ ಭಾನುವಾರ ಬೆಳಿಗ್ಗೆ ಗೋಪಾಲಸ್ವಾಮಿ ಬೆಟ್ಟ ವಲಯದಮಗುವಿನಹಳ್ಳಿ ಬೀಟ್‌ನಲ್ಲಿರುವ ಸಿದ್ದಿಕಿ ಎಂಬುವವರ ಜಮೀನಿನಲ್ಲಿ ಪತ್ತೆಯಾಯಿತು. ತಕ್ಷಣ ಗುರಿಕಾರ ಅಕ್ರಂ ಎನ್ನುವವರು ಅರಿವಳಿಕೆ ಗನ್‌ನಿಂದ ಚುಚ್ಚುಮದ್ದು ಹೊಡೆದರು. ನಂತರ ಹುಲಿಯ ಸುಳಿವು ಸಿಗಲಿಲ್ಲ. ಆ ಬಳಿಕ 1.45ಕ್ಕೆ ಮತ್ತೆ ಕಂಡಾಗ ವೆಂಕಟೇಶ್ ಅವರು ಚುಚ್ಚುಮದ್ದು ಹೊಡೆದರು.

ADVERTISEMENT

ಚುಚ್ಚುಮದ್ದು ದೇಹಕ್ಕೆ ನಾಟುತ್ತಲೇ ಹುಲಿ ಸಮೀಪದಲ್ಲೇ ಇದ್ದ ಲಂಟಾನ ಪೊದೆಯೊಳಗೆ ಹೋಯಿತು. ಎರಡು ಗಂಟೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. 3.50ರ ಹೊತ್ತಿಗೆ ಹುಲಿ ಪತ್ತೆಯಾಯಿತು. ತಕ್ಷಣವೇ ಬಲೆ ಬೀಸಿ ಸೆರೆ ಹಿಡಿಯಲಾಯಿತು. ನೀರು ಕುಡಿಸಿದಾಗ ಎಚ್ಚರಗೊಂಡ ಹುಲಿಗೆ, ಮತ್ತೆ ಅರಿವಳಿಕೆ ನೀಡಿ ಆನೆಗಳ ಸಹಾಯದಿಂದ ಜೀಪಿಗೆ ಹಾಕಲಾಯಿತು. ಅಲ್ಲಿಂದ ಮೇಲುಕಾಮನಹಳ್ಳಿ ಬಳಿ ಇರುವ ಜಂಗಲ್ ರೆಸಾರ್ಟ್‌ ಬಳಿಗೆ ತರಲಾಯಿತು. ಅಲ್ಲಿ ತಂಗಿದ್ದ ಅರಣ್ಯ ಸಚಿವ ಸಿ.ಸಿ ಪಾಟೀಲ, ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಮತ್ತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುಣಟಿ ಶ್ರೀಧರ್ ಅವರು ಹುಲಿಯನ್ನು ವೀಕ್ಷಿಸಿದರು.

ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಹುಲಿ:ಎರಡು ತಿಂಗಳುಗಳಿಂದ ಹುಂಡೀಪುರ–ಚೌಡಹಳ್ಳಿ ಭಾಗದಲ್ಲಿ ಹುಲಿಯ ಉಪಟಳ ಮಿತಿ ಮೀರಿತ್ತು. 14ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದ್ದ ಹುಲಿ, ಆಗಸ್ಟ್‌ 31ರಂದು ಚೌಡಹಳ್ಳಿ ಭಾಗದಲ್ಲಿ ಶಿವಮಾದಯ್ಯ ಎಂಬ ರೈತನ ಮೇಲೆ ದಾಳಿ ಮಾಡಿ ಕೊಂದಿತ್ತು. ಈ ಘಟನೆ ಮಾಸುವ ಮುನ್ನವೇ ಅಕ್ಟೋಬರ್‌ 6ರಂದು ಹುಂಡೀಪುರದಲ್ಲಿ ಶಿವಲಿಂಗಪ್ಪ ಎಂಬ ರೈತನ ಮೇಲೆರಗಿ ಬಲಿ ಪಡೆದಿತ್ತು.

ಮೊದಲ ಸಲ ರೈತನನ್ನು ಬಲಿ ತೆಗೆದುಕೊಂಡ ನಂತರ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಪಶುವೈದ್ಯರ ಕೊರತೆಯಿಂದಾಗಿ ಅದು ಯಶಸ್ವಿಯಾಗಿರಲಿಲ್ಲ. ಎರಡನೇ ರೈತ ಬಲಿಯಾದ ನಂತರ ಇಲಾಖೆ ಎಚ್ಚೆತ್ತುಕೊಂಡು ತೀವ್ರ ಕಾರ್ಯಾಚರಣೆಗೆ ಮುಂದಾಯಿತು.ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯಲು ಅಥವಾ ಗುಂಡಿಕ್ಕಿ ಕೊಲ್ಲಲು ನಿರ್ಧರಿಸಿತ್ತು. ಕೊಲ್ಲಲು ವಿರೋಧ ವ್ಯಕ್ತವಾಗಿದ್ದರಿಂದ ಸೆರೆ ಹಿಡಿಯಲು ನಿರ್ಧರಿಸಿತ್ತು.

ಆರು ಪಶು ವೈದ್ಯರು, 60ಕ್ಕೂ ಹೆಚ್ಚು ಸಿಬ್ಬಂದಿ, ಏಳು ಆನೆಗಳು, 200ಕ್ಕೂ ಹೆಚ್ಚು ಕ್ಯಾಮೆರಾ ಹಾಗೂ ಡ್ರೋನ್‌ ಕ್ಯಾಮೆರಾಗಳನ್ನು ಬಳಸಿ ಐದು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ನಿಪುಣ ಸೋಲಿಗರ ನೆರವನ್ನೂ ಪಡೆಯಲಾಗಿತ್ತು. ಆದರೆ, ಹುಲಿಯ ಸುಳಿವು ಸಿಕ್ಕಿರಲಿಲ್ಲ.

ಭಾರಿ ಜನ: ಹುಲಿಗೆ ಅರಿವಳಿಕೆ ಚುಚ್ಚುಮದ್ದು ಹೊಡೆಯಲಾಗಿದೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹುಲಿಯನ್ನು ತೋರಿಸಿ ಎಂದು ರೈತರು ಮತ್ತು ಸಾರ್ವಜನಿಕರು ಜಂಗಲ್ ಲಾಡ್ಜಸ್‌ ಮತ್ತು ರೆಸಾರ್ಟ್‌ ಬಳಿ ರಸ್ತೆ ನಡೆಸಿ ಪ್ರತಿಭಟಿಸಿದರು.

ಸೆರೆಯಾದ ಹುಲಿ

ಸುಳಿವು ನೀಡಿದ ಸೋಲಿಗರು

ಹುಲಿಯ ಇರುವಿಕೆಯ ಸುಳಿವು ನೀಡಿದ್ದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸೋಲಿಗರು.

ಅರಣ್ಯಕ್ಕೆ ಹೊಂದಿಕೊಂಡಂತಿರುವಸಿದ್ದಿಕಿ ಅವರ ಜಮೀನಿನ ಬಳಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಶುಕ್ರವಾರ ಮುಂಜಾನೆ ಶನಿವಾರ ಮುಂಜಾನೆ 4.42ರ ಹೊತ್ತಿಗೆ ಸೆರೆಯಾಗಿತ್ತು. ಇದರ ಆಧಾರದಲ್ಲಿ ಶನಿವಾರ ಪೂರ್ತಿ ಒಂದು ತಂಡ ಜಮೀನಿನ ಸುತ್ತಮುತ್ತ ಕಾರ್ಯಾಚರಣೆ ಮಾಡಿತ್ತು. ಆದರೆ, ಪತ್ತೆಯಾಗಿರಲಿಲ್ಲ. ಸಂಜೆ ಮತ್ತೆ ಅದೇ ಜಮೀನಿನಲ್ಲೇ ಹುಲಿ ಇರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಭಾನುವಾರ ಮತ್ತೆ ಏಳು ಆನೆಗಳ ಸಹಾಯದಿಂದ ಸಿಬ್ಬಂದಿ ಹುಂಡೀಪುರ ಹಾಗೂ ಚೌಡಹಳ್ಳಿ ಗ್ರಾಮಗಳಲ್ಲಿ ನಾಲ್ಕು ತಂಡಗಳಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಒಂದು ತಂಡ ಸಿದ್ದಿಕಿ ಅವರ ಜಮೀನಿನ ಸುತ್ತ ಹುಡಕಾಟ ಆರಂಭಿಸಿತ್ತು. ಜಮೀನಿನಲ್ಲಿರುವ ಬೃಹತ್‌ ಪೊದೆಯ ಬಳಿ ಹೆಜ್ಜೆಗುರುತುಗಳು ಇರುವುದನ್ನು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನಾಲ್ವರು ಸೋಲಿಗರ ತಂಡ ಪತ್ತೆ ಹಚ್ಚಿತು. ಆ ಸ್ಥಳದಿಂದ ಬೇರೆ ಕಡೆಗೆ ಹೋದ ಹೆಜ್ಜೆ ಗುರುತುಗಳು ಕಾಣದೇ ಇದ್ದುದರಿಂದ ಹುಲಿ ಅಲ್ಲೇ ಅವಿತುಕೊಂಡಿದೆ ಎಂಬುದನ್ನು ಅವರು ಖಚಿತವಾಗಿ ಹೇಳಿದರು. ಆ ನಂತರಉಳಿದ ತಂಡಗಳನ್ನೂ ಅಲ್ಲಿಗೇ ಕರೆಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಸೆರೆ ಹಿಡಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬೋನಿಗೆ ಹಾಕಿದರು.
ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿತ್ತು.

ಇಬ್ಬರು ರೈತರನ್ನು ಕೊಂದಿದ್ದ ಹುಲಿಯನ್ನೇ ಸೆರೆ ಹಿಡಿಯಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ
ಸಿ.ಸಿ.ಪಾಟೀಲ, ಅರಣ್ಯ ಸಚಿವ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.