ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಅರಣ್ಯವಾಸಿಗಳನ್ನು ಸ್ಥಳಾಂತರಿಸಿ ಹುಲಿಗಳಿಗೆ ಮಾನವ ಚಟುವಟಿಕೆರಹಿತ ಪ್ರದೇಶ ಸೃಷ್ಟಿಸಿದ್ದೇವೆ ಎಂದು ಬಿಂಬಿಸಿಕೊಂಡಿದ್ದ ಅರಣ್ಯ ಇಲಾಖೆಯು ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ 39 ಚಾರಣ ಪಥಗಳನ್ನು ಗುರುತಿಸಿದೆ. ಅರಣ್ಯ ಇಲಾಖೆಯ ಈ ನಡೆಗೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
‘2024-34ರ ಕರಡು ಹುಲಿ ಸಂರಕ್ಷಣಾ ಯೋಜನೆ’ಯನ್ನು ಹುಲಿ ಯೋಜನೆಯ ಹಿಂದಿನ ನಿರ್ದೇಶಕ ಮರಿಯಾ ಕ್ರಿಸ್ತು ರಾಜ ಸಿದ್ಧಪಡಿಸಿ ಅನುಮೋದನೆಗಾಗಿ ಅರಣ್ಯ ಇಲಾಖೆಗೆ ಕಳುಹಿಸಿದ್ದರು. ಇದಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಹಮತ ವ್ಯಕ್ತಪಡಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ಸಲ್ಲಿಸಿದ್ದಾರೆ. ಪ್ರಾಧಿಕಾರದ ಅನುಮತಿ ಸಿಕ್ಕ ಬಳಿಕ ಹುಲಿ ಕಾಡಿನಲ್ಲಿ ಚಾರಣಕ್ಕೆ ‘ರಹದಾರಿ’ ಸಿಗಲಿದೆ.
ಸಂರಕ್ಷಿತ ಪ್ರದೇಶದ ಕುಂಬಾರವಾಡ ವಲಯದಲ್ಲಿ ಹೊಸದಾಗಿ 20 ಚಾರಣ ಪಥಗಳನ್ನು ಗುರುತು ಮಾಡಲಾಗಿದೆ. ಅರಣ್ಯವಾಸಿಗಳು ಸಂಪೂರ್ಣ ಸ್ಥಳಾಂತರಗೊಂಡಿರುವ ಸುಳಾವಳಿ ಪ್ರದೇಶದಲ್ಲಿ ಎರಡು ಚಾರಣ ಪಥಗಳನ್ನು ಅಂತಿಮಗೊಳಿಸಲಾಗಿದೆ. ಕೆಲ ಕುಟುಂಬಗಳು ಸ್ಥಳಾಂತರಗೊಂಡಿರುವ ಡೇರಿಯ ಮತ್ತು ಕರಂಜೆ ಗ್ರಾಮಗಳ ಅರಣ್ಯಗಳಲ್ಲೂ ಐದು ಕಡೆಗಳಲ್ಲಿ ಚಾರಣಕ್ಕೆ ಅನುವು ಮಾಡಿಕೊಡಲು ಅರಣ್ಯ ಇಲಾಖೆ ತೀರ್ಮಾನಿಸಿದೆ.
ಕರಂಜೆ ಚಾರಣ ಪಥ 21.1 ಕಿ.ಮೀ, ಕ್ಯಾಸಲ್‌ರಾಕ್ ಚಾರಣಪಥ 12 ಕಿ.ಮೀ, ಮರ್ಡಿ–ವಾಕಿ ಚಾರಣಪಥ 10 ಕಿ.ಮೀ. ಉದ್ದ ಇವೆ. ಉಳಿದೆಲ್ಲವೂ 2 ಕಿ.ಮೀ.ಯಿಂದ 8 ಕಿ.ಮೀ. ವರೆಗೆ ಇವೆ.
ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಹತ್ತಾರು ಹಳ್ಳಿಗಳಿದ್ದು ಗವಳಿ, ಕುಣಬಿ, ಮರಾಠಾ, ಹವ್ಯಕ ಸೇರಿದಂತೆ ವಿವಿಧ ಸಮುದಾಯಗಳ ಸಾವಿರಾರು ಕುಟುಂಬಗಳು ವಾಸಿಸುತ್ತಿವೆ. ಹುಲಿ ಯೋಜನೆಯ ಬಿಗಿ ನಿಯಮಗಳ ಕಾರಣದಿಂದ ಅನೇಕ ಗ್ರಾಮಗಳ ನಿವಾಸಿಗಳು ಸಮರ್ಪಕ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಇಲ್ಲದೆ ಪಡಿಪಾಟಲು ಪಡುತ್ತಿದ್ದಾರೆ. ಅನೇಕ ಗ್ರಾಮಗಳಿಗೆ 4ನೇ ತಲೆಮಾರಿನ (4ಜಿ) ಇಂಟರ್‌ನೆಟ್ ಸೇವೆ ಈವರೆಗೆ ಲಭ್ಯವಾಗಿಲ್ಲ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳ ಅಳವಡಿಕೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಅನುಮತಿ ನಿರಾಕರಿಸಿದ್ದುಂಟು. ಹುಲಿಗಳ ನಿರ್ಭೀತ ಸಂಚಾರಕ್ಕೆ ಅನುವು ಮಾಡಿಕೊಡಲು ಸ್ವಯಂಪ್ರೇರಿತ ಪುನರ್ವಸತಿ ಯೋಜನೆಯಡಿ ಅನೇಕ ಕುಟುಂಬಗಳಿಗೆ ಪ್ಯಾಕೇಜ್ ನೀಡಿ ಸ್ಥಳಾಂತರಿಸಲಾಗಿತ್ತು. ಅರಣ್ಯದ ಸುತ್ತಲಿನ ಸಾವಿರಾರು ಹೆಕ್ಟೇರ್ ಪ್ರದೇಶವು ಮಾನವ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದರು.
‘ದಶಕಗಳಿಂದ ಅರಣ್ಯ ಸಂರಕ್ಷಣೆಯ ಕಾಯಕದಲ್ಲಿ ತೊಡಗಿದ್ದ ಅರಣ್ಯವಾಸಿಗಳನ್ನು ಮುಲಾಜಿಲ್ಲದೆ ಎತ್ತಂಗಡಿ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಇದೀಗ ಕಾಡಿನಲ್ಲಿ ಮೋಜುಮಸ್ತಿಗೆ ಅವಕಾಶ ನೀಡಲು ಹೊರಟಿರುವುದು ನಾಚಿಕೆಗೇಡಿತನದ ಸಂಗತಿ. ಇದು ವನವಾಸಿಗಳಿಗೆ ಮಾಡಿದ ಮಹಾ ವಂಚನೆ. ಕಾಡಿನಲ್ಲಿ ಇಂತಹ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ವಿವಾದ ಇದೇ ಮೊದಲಲ್ಲ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಧಿಕೃತವಾಗಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಆರೋಪಿಸಿ ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಈ ಹಿಂದೆ ದೂರುಗಳು ಸಲ್ಲಿಕೆಯಾಗಿದ್ದವು. ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
‘ನುಜ್ಜಿ ನರ್ಸರಿ ಪ್ರದೇಶದಲ್ಲಿ ಆರ್ಕಿಡೇರಿಯಂ ನಿರ್ಮಾಣ, ಕ್ಯಾಸಲ್ ರಾಕ್ ವಲಯದಲ್ಲಿ ಜಂಗಲ್ ರೈಡ್ ಹೆಸರಿನಲ್ಲಿ ಕೆನೋಪಿ ವಾಕ್ ಪ್ರದೇಶ, ಪಾಪುಲ್ವಾಡಿ ಜಲಪಾತ ಪ್ರದೇಶದಲ್ಲಿ ಜಂಗಲ್ ಸಫಾರಿ ಆರಂಭ, ಶಿವಪುರ ಬಳಿ ತೂಗು ಸೇತುವೆ ನಿರ್ಮಾಣ –ಎಲ್ಲವೂ ನಿಯಮಬಾಹಿರವಾಗಿವೆ. ಹಲವು ಕಡೆಗಳಲ್ಲಿ ಅನಧಿಕೃತವಾಗಿ ಚಾರಣಕ್ಕೆ ಅವಕಾಶ ನೀಡಲಾಗಿದೆ. ನೀಲಿ ಜಲಪಾತದ ಬಳಿಯಲ್ಲಿ ಅನಧಿಕೃತವಾಗಿ ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಲಭ್ಯರಾಗಲಿಲ್ಲ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿಗೆ ಹಾನಿ ಮಾಡುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳೇ ಹೊರತು ಜನರಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳು ಅರಣ್ಯ ನಾಶಕ್ಕೆ ಕಾರಣವಾಗಿವೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶ ಮಾಡಿ ಕೊಟ್ಟಿರುವುದು ಅಕ್ಷಮ್ಯ. ಇದರ ವಿರುದ್ಧ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತೇವೆ.-ರವೀಂದ್ರ ರೇಡ್ಕರ್, ಸಂಸ್ಥಾಪಕ ಅಧ್ಯಕ್ಷ, ಸಂಜೀವಿನಿ ಸೇವಾ ಟ್ರಸ್ಟ್
ಹುಲಿ ಯೋಜನೆ ಮಾರ್ಗಸೂಚಿಗಳ ಪ್ರಕಾರ ವನವಾಸಿಗಳು ಸ್ಥಳಾಂತರಗೊಂಡು ಬಿಟ್ಟುಹೋದ ಅರಣ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ. ಕರಡು ಯೋಜನೆಯ ಲೋಪದೋಷ ಗುರುತಿಸಿ ಎನ್‌ಟಿಸಿಎಗೆ ದೂರು ಸಲ್ಲಿಸುತ್ತೇವೆ.-ಚೇತನ್ ಕುಮಾರ್, ಕುಂಬಾರವಾಡಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.