ADVERTISEMENT

ಬರ: ನಿಲುವಳಿ ಸೂಚನೆ ಮಂಡನೆಗೆ ಸಜ್ಜಾದ ವಿಪಕ್ಷ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:07 IST
Last Updated 4 ಡಿಸೆಂಬರ್ 2023, 16:07 IST
ಸಚಿವ ಆರ್. ಅಶೋಕ
ಸಚಿವ ಆರ್. ಅಶೋಕ   

ವಿಧಾನಸಭೆ: ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜೆಡಿಎಸ್‌ ಜತೆಯಾಗಿ ನಿಲುವಳಿ ಸೂಚನೆ ಮಂಡಿಸಲು ಸಜ್ಜಾಗಿರುವ ಬಿಜೆಪಿ, ಪ್ರಾಸ್ತಾವಿಕ ಚರ್ಚೆಗೆ ಸೋಮವಾರವೇ ಅವಕಾಶ ನೀಡುವಂತೆ ಆಗ್ರಹಿಸಿತು.

ಪ್ರಶ್ನೋತ್ತರ ಕಲಾಪಕ್ಕೂ ಮುನ್ನವೇ ನಿಲುವಳಿ ಸೂಚನೆ ಮಂಡನೆ ಮೇಲಿನ ಪ್ರಾಸ್ತಾವಿಕ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು. ಪ್ರಶ್ನೋತ್ತರ ಕಲಾಪ ಮತ್ತು ಶೂನ್ಯವೇಳೆಗೂ ಮುನ್ನ ಚರ್ಚೆಗೆ ಅವಕಾಶ ನೀಡಲಾಗದು ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

‘ಚರ್ಚೆಗೆ ಸರ್ಕಾರವೇ ಆತುರದಲ್ಲಿದೆ. ಪ್ರಶ್ನೋತ್ತರದ ಬಳಿಕ ಅವಕಾಶ ನೀಡಲಾಗುವುದು. ವಿರೋಧ ಪಕ್ಷದವರ ಮಾತನ್ನು ಆಲಿಸೋಣ ಎಂದು ಮುಖ್ಯಮಂತ್ರಿಯವರೂ ಹೇಳಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಬಿಜೆಪಿಯವರಿಗೆ ಪ್ರತಿಕ್ರಿಯಿಸಿದರು.

ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ‘ನಾವೇ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಲು ತೀರ್ಮಾನಿಸಿದ್ದೆವು. ನಿಯಮಾವಳಿ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದರು.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ಬೇರೆ ಕಲಾಪ ಬದಿಗೊತ್ತಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಕೋರಿದ್ದ ಉದಾಹರಣೆ ಇದೆ. ಈಗ ಏಕೆ ವಿರೋಧ ಎಂದು ಅಶೋಕ ಕೇಳಿದರು.

ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ವಿರೋಧ ಪಕ್ಷಗಳ ಸದಸ್ಯರನ್ನು ಸಮಾಧಾನಪಡಿಸಿದ ಸಭಾಧ್ಯಕ್ಷರು, ಪ್ರಶ್ನೋತ್ತರ ಕಲಾಪ ಆರಂಭಿಸಿದರು.

ಪರಿಷತ್‌ನಲ್ಲೂ ಪ್ರಸ್ತಾಪ: ಇದೇ ವಿಷಯದ ಕುರಿತು ವಿಧಾನ ಪರಿಷತ್‌ನಲ್ಲೂ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಬಿಜೆಪಿ ಆಗ್ರಹಿಸಿತು.

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಅದನ್ನು ವಿರೋಧಿಸಿದ ಕಾಂಗ್ರೆಸ್‌ ಸದಸ್ಯರು, ‘ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿಲ್ಲ’ ಎಂದು ತಿರುಗೇಟು ನೀಡಿದರು.

‘ಸರ್ಕಾರ ಪ್ರತಿ ರೈತನಿಗೆ ₹10 ಸಾವಿರ ಮೊದಲು ನೀಡಲಿ. ಆ ಬಳಿಕ, ಕೇಂದ್ರಕ್ಕೆ ಕರೆದೊಯ್ಯುವ ನಿಯೋಗದಲ್ಲಿ ನಾವು ಬರುತ್ತೇವೆ’ ಎಂದು ಕೋಟ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.