
.ಅಂಗಾಂಗ ದಾನ
ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ 198 ಮಂದಿಯಿಂದ 564 ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿದೆ. ಈವರೆಗೆ ವರ್ಷವೊಂದರಲ್ಲಿ ನಡೆದ ಗರಿಷ್ಠ ಅಂಗಾಂಗ ದಾನ ಇದಾಗಿದೆ.
ಅಂಗಾಂಗಕ್ಕಾಗಿ ಸಾವಿರಾರು ಮಂದಿ ಎದುರು ನೋಡುತ್ತಿರುವ ಕಾರಣ, ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಜತೆಗೆ ವಿವಿಧ ಸರ್ಕಾರೇತರ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಕೂಡ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಇದರಿಂದಾಗಿ 2025ರಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆಯು ಅಂಗಾಂಗ ದಾನಕ್ಕೆ ಪ್ರೋತ್ಸಾಹಿಸುವ ಜತೆಗೆ, ಅಂಗಾಂಗ ವೈಫಲ್ಯಕ್ಕೊಳಗಾದವರಿಗೆ ಅಂಗಾಂಗಗಳನ್ನು ಒದಗಿಸಲು ನೆರವಾಗುತ್ತಿದೆ. 2023ರಲ್ಲಿ 178 ಮಂದಿಯಿಂದ 469 ಅಂಗಾಂಗಗಳನ್ನು ದಾನವಾಗಿ ಪಡೆಯಲಾಗಿತ್ತು. 2024ರಲ್ಲಿ ದಾನಿಗಳ ಸಂಖ್ಯೆ ಇಳಿಕೆಯಾಗಿತ್ತು.
ಅಂಗಾಂಗಗಳ ಜತೆಗೆ ಅಂಗಾಂಶವನ್ನೂ ದಾನಿಗಳಿಂದ ಪಡೆದು ಒದಗಿಸಲಾಗುತ್ತಿದೆ. 288 ಕಣ್ಣಿನ ಕಾರ್ನಿಯಾ ಸೇರಿ ಒಟ್ಟು 397 ಅಂಗಾಂಶಗಳನ್ನು ದಾನವಾಗಿ ಪಡೆಯಲಾಗಿದೆ. ಇವು ವರ್ಷವೊಂದರಲ್ಲಿ ದಾನವಾಗಿ ಸ್ವೀಕರಿಸಲಾದ ಗರಿಷ್ಠ ಅಂಗಾಂಶಗಳಾಗಿವೆ. ರಾಜ್ಯ ಸರ್ಕಾರವು ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದ್ದು, ಅಂಗಾಂಗ ದಾನಿಗಳ ಕುಟುಂಬಸ್ಥರಿಗೆ ಪ್ರಶಂಸನಾ ಪತ್ರಗಳನ್ನು ನೀಡಲಾಗುತ್ತಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಗೌರವಿಸಲಾಗುತ್ತಿದೆ.
‘ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ, ಅಂಗಾಂಗಕ್ಕಾಗಿ ಎದುರುನೋಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಮಾನವ ಅಂಗಾಂಗ ದಾನ ಕಸಿ ಕಾಯ್ದೆ 1994, ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಒಬ್ಬ ದಾನಿಯು ಹೃದಯ, ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು, ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿ ದಾನದ ಮೂಲಕ ಎಂಟು ಜೀವಗಳಿಗೆ, ಹೃದಯದ ಕವಾಟ, ಚರ್ಮ, ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ 50 ಮಂದಿಗೆ ನೆರವಾಗಬಹುದಾಗಿದೆ’ ಎಂದು ಜೀವಸಾರ್ಥಕತೆ ಸಂಸ್ಥೆ ತಿಳಿಸಿದೆ.
ಮೂರನೇ ಸ್ಥಾನದಲ್ಲಿ ರಾಜ್ಯ
ರಾಜ್ಯವಾರು ಅಂಗಾಂಗ ದಾನದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ (2025) ತಮಿಳುನಾಡಿನಲ್ಲಿ 267 ಮಂದಿಯ ಅಂಗಾಂಗವನ್ನು ದಾನವಾಗಿ ಪಡೆಯಲಾಗಿತ್ತು. ತೆಲಂಗಾಣ ಎರಡನೇ ಸ್ಥಾನ (205) ಕರ್ನಾಟಕ ಮೂರನೇ ಸ್ಥಾನ (198) ಮಹಾರಾಷ್ಟ್ರ ನಾಲ್ಕನೇ ಸ್ಥಾನ (153) ಹಾಗೂ ಗುಜರಾತ್ ಐದನೇ ಸ್ಥಾನದಲ್ಲಿದೆ (152) ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.