ADVERTISEMENT

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರೂ ಕಾರಣ: ಸಿದ್ದರಾಮಯ್ಯ

ಮತ್ತೆ ಮುಖ್ಯಮಂತ್ರಿ ಆಗಬಾರದೆಂಬ ಹೊಟ್ಟೆ ಉರಿ ನಮ್ಮಲ್ಲೇ ಕೆಲವರಿಗೆ ಇತ್ತು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:43 IST
Last Updated 18 ಡಿಸೆಂಬರ್ 2020, 19:43 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಮೈಸೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ಬಿಜೆಪಿ–ಜೆಡಿಎಸ್‌ನ ಒಳ ಒಪ್ಪಂದ ಮಾತ್ರವಲ್ಲದೇ, ನಮ್ಮ ಪಕ್ಷದವರೂ ಕಾರಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಬೇಸರ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಗ್ರಾಮ್‌ ಜನಾಧಿಕಾರ’ ಸಮಾವೇಶದಲ್ಲಿ ಮಾತನಾಡಿ, ‘ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದುಕೊಂಡಿರಲಿಲ್ಲ. ಹಳ್ಳಿಗಳಿಗೆ ಹೋದಾಗ ಜನರು ಪ್ರೀತಿಯಿಂದ ಕಂಡರು. ಆದರೆ, ನನಗೆ ಮತ ಹಾಕಲಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬಾರದೆಂಬಹೊಟ್ಟೆಉರಿ ನಮ್ಮಲ್ಲೇ ಕೆಲವರಿಗೆ ಇತ್ತು. ಅವರಿಂದಾಗಿ ನಾನು ಸೋಲಬೇಕಾಯಿತು’ ಎಂದರು.

‘ಕಳೆದ ಚುನಾವಣೆಯಲ್ಲಿ ನನ್ನ ಹಾಗೂ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದವರು ಅವರಾಗಿಯೇ ಆತ್ಮಾವಲೋಕನ ಮಾಡಿಕೊಂಡು ಪಕ್ಷ ಬಿಟ್ಟು ಹೋಗಲಿ. ಪಕ್ಷದಲ್ಲಿದ್ದುಕೊಂಡು ದ್ರೋಹ ಬಗೆದರೆ ಅವರಂತಹ ಖಳನಾಯಕರು ಯಾರೂ ಇಲ್ಲ’ ಎಂದು ಹೇಳಿದರು.

ADVERTISEMENT

ಎಚ್‌ಡಿಕೆಮುಖ್ಯಮಂತ್ರಿ ಆಗುತ್ತಿರಲಿಲ್ಲ: ‘ಎಚ್‌.ಡಿ.ಕುಮಾರಸ್ವಾಮಿ ಮಾತೆತ್ತಿದರೆ ಸಿದ್ದರಾಮಯ್ಯ ನಮ್ಮ ಸರ್ಕಾರ ಬೀಳಿಸಿಬಿಟ್ಟರು ಎನ್ನುತ್ತಾರೆ. ಸರ್ಕಾರವನ್ನು ಬೀಳಿಸಲೇಬೇಕು ಎಂದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ನಾನು ಬಿಡುತ್ತಿರಲಿಲ್ಲ’ ಎಂದು ತಿರುಗೇಟು ನೀಡಿದರು.

‘ನಾವು 80 ಮಂದಿ ಇದ್ದೆವು. ಅವರು 37 ಜನ ಇದ್ದರು. ಮೈತ್ರಿಮಾಡಿಕೊಳ್ಳುವುದಿಲ್ಲವೆಂದುನಾನು ಪಟ್ಟುಹಿಡಿದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿದ್ದರಾ’ ಎಂದು ಪ್ರಶ್ನಿಸಿದರು.

‘ಹೋಟೆಲ್‌ನಲ್ಲಿ ಕುಳಿತು ರಾಜ್ಯಭಾರ ಮಾಡುತ್ತಿದ್ದ ಗಿರಾಕಿ ಆತ. ಕಚೇರಿಗೂ ಬರುತ್ತಿರಲಿಲ್ಲ. ಶಾಸಕರ ಕೈಗೆ ಸಿಗುತ್ತಿರಲಿಲ್ಲ. ಒಂದು ವೇಳೆ ಮೈತ್ರಿ ಆಗದೆ, ಅವರು ಮುಖ್ಯಮಂತ್ರಿ ಆಗದೇ ಇದ್ದಿದ್ದರೆ ನಮ್ಮ 14 ಶಾಸಕರು ಕಾಂಗ್ರೆಸ್‌ ಪಕ್ಷದಲ್ಲೇ ಇರುತ್ತಿದ್ದರು’ ಎಂದರು.

ಲಂಚ ಪಡೆಯುವವನಿಗೆ ಜಿಂದಾಬಾದ್: ‘ಯಡಿಯೂರಪ್ಪ ಚೆಕ್‌ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರೆ, ಮಗ ವಿಜಯೇಂದ್ರ ಒಂದು ಹೆಜ್ಜೆ ಮುಂದೆ ಹೋಗಿ ಆರ್‌ಟಿಜಿಎಸ್‌ ಮೂಲಕ ಲಂಚ ಪಡೆಯುತ್ತಿದ್ದಾನೆ. ಆರ್‌ಟಿಜಿಎಸ್‌ ಮೂಲಕ ವಿಜಯೇಂದ್ರ ಖಾತೆಗೆ ₹ 7.40 ಕೋಟಿ ಬಂದಿದೆ. ಅಂತಹ ವ್ಯಕ್ತಿಗೆ ಹೋದಲ್ಲೆಲ್ಲಾ ಜನರು ಜಿಂದಾಬಾದ್‌ ಎನ್ನುತ್ತಿದ್ದಾರೆ. ಏನ್ರೀ ಇದು?ಸಮಾಜ ಯಾವ ದಿಕ್ಕಿನತ್ತ ಹೋಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪರ್ಧೆಕುರಿತುಚಿಂತಿಸಿಲ್ಲ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಸಂಬಂಧಚಿಂತಿಸಿಲ್ಲ. ಎಲ್ಲಿ ಸ್ಪರ್ಧಿಸಬೇಕು ಎನ್ನುವುದರ ಕುರಿತು 6 ತಿಂಗಳವರೆಗೆ ತೀರ್ಮಾನ ಕೈಗೊಳ್ಳುವುದಿಲ್ಲ. ಸದ್ಯಕ್ಕೆ, ಯಾವುದೇ ಆಸೆಗಳಿಲ್ಲ’ ಎಂದು ತಿಳಿಸಿದರು.

ವಿಧಾನ ಪರಿಷತ್‌ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಕಳ್ಳರು ಯಾವತ್ತೂ ತಾವು ಕಳ್ಳರು ಎಂದು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿಯವರು ಖಳನಾಯಕರು, ಸಭಾಪತಿಬರದಂತೆ ಬಾಗಿಲು ಹಾಕಿದ ಇವರನ್ನು ಪ್ರಜಾಪ್ರಭುತ್ವವಾದಿಗಳು ಎಂದು ಕರೆಯಬೇಕಾ’ ಎಂದು ಪ್ರಶ್ನಿಸಿದರು.‌

‘ಮುಸ್ಲಿಮರು ಮಾತ್ರ ಬೀಫ್ ತಿನ್ನುತ್ತಾರಾ’
‘ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿದರೆ ಸಿದ್ದರಾಮಯ್ಯ ಗೋಹತ್ಯೆ ಪರವಾಗಿದ್ದಾರೆ. ಮುಸ್ಲಿಮರ, ಕ್ರೈಸ್ತರ ಪರ ಇದ್ದಾರೆ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಅವರು ಏನು ಮನುಷ್ಯರಲ್ಲವೇ? ಬೀಫ್‌ ತಿನ್ನುವವರು ಬರೀ ಮುಸ್ಲಿಮರು ಮಾತ್ರನಾ? ದಲಿತರು, ಕ್ರೈಸ್ತರು, ಕೊಡವರೂ ತಿನ್ನುತ್ತಾರೆ. ಬೇರೆ ಬೇರೆ ಕಡೆಯಲ್ಲೂ ತಿನ್ನುತ್ತಾರೆ. ಹಿಂದುಳಿದವರೂ ತಿನ್ನುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

2ನೇ ಬಾರಿಗೆ ಸಿಎಂ ಆಗಲೆಂದು ಬಯಸಿದ್ದೆ: ಡಿ.ಕೆ. ಶಿವಕುಮಾರ್
ಬೆಳಗಾವಿ:
‘ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗಲೆಂಬ ಬಯಕೆ ನಮಗಂತೂ ಇತ್ತು. ಆ ಬಗ್ಗೆ ಮೈಸೂರು ಜಿಲ್ಲೆಯ ಹುಣಸೂರಲ್ಲಿ ನಾನೇ ಭಾಷಣ ಮಾಡಿದ್ದೆ. ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಸಂಪೂರ್ಣ ಆಶೀರ್ವಾದ ಮಾಡಿದ್ದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಲ್ಲಿ ಶುಕ್ರವಾರ ನೆನಪಿಸಿಕೊಂಡರು.

‘2ನೇ ಬಾರಿಗೆ ನಾನು ಮುಖ್ಯಮಂತ್ರಿ ಆಗುವುದು ನಮ್ಮವರಿಗೇ ಬೇಡವಾಗಿತ್ತು’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದವರು ನಾವು. ಯಾಕೆ ಹಾಗೆ ಹೇಳಿದರು, ಆಂತರಿಕವಾಗಿ ಏನಾಯಿತೋ ಗೊತ್ತಿಲ್ಲ. ಅಧ್ಯಯನ ಮಾಡಲು ಹೋಗಿಲ್ಲ’ ಎಂದರು.

‘ಸಿದ್ದರಾಮಯ್ಯ ಅವರನ್ನು ಎಲ್ಲರೂ ಬೆಂಬಲಿಸಿದ್ದರಿಂದಲೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಧ್ಯವಾಯಿತು. ಎಸ್.ಎಂ. ಕೃಷ್ಣ ಅವರು ಎರಡು ಕಡೆ ನಿಲ್ಲೋಕೆ ಬಿಟ್ಟಿರಲಿಲ್ಲ’ ಎಂದರು.

‘ಅವರು ಹಿರಿಯ ರಾಜಕಾರಣಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಕಾರಣವನ್ನು ಅವರೇ ಹುಡುಕುತ್ತಾರೆ. ಕರ್ಮಭೂಮಿಯಲ್ಲಿ ಸಹಾಯ ಮಾಡಿದವರಿಂದಲೇ ತೊಂದರೆ ಆದಾಗ ನೋವಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ನನ್ನದು ಬಸವ ಕೃಪ, ಬಿಜೆ‍ಪಿಯದು ಕೇಶವ ಕೃಪ: ಸಿ.ಎಂ. ಇಬ್ರಾಹಿಂ
ಬೆಳಗಾವಿ:
‘ಬಿಜೆಪಿ ಸೇರುವುದಿಲ್ಲ. ನನ್ನದು ಬಸವ ಕೃಪ; ಅದು ಕೇಶವ ಕೃಪ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ತಮ್ಮ ಮುಂದಿನ ರಾಜಕೀಯ ನಡೆ ನಿರ್ಧರಿಸುವುದಕ್ಕಾಗಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲು ಶುಕ್ರವಾರ ಇಲ್ಲಿಗೆ ಬಂದಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದರು.

‘ಬಿಜೆಪಿಯೊಂದಿಗೆ ನನಗೆ ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಅಲ್ಲಿ ಕೆಲವರು ಒಳ್ಳೆಯವರಿದ್ದಾರೆ. ಆದರೆ, ಅಲ್ಲಿಗೆ ಹೋಗಲು ಕಷ್ಟ’ ಎಂದರು.

‘ಜನರು ಕಾಂಗ್ರೆಸ್ ಪಕ್ಷ ಕೈ ಬಿಟ್ಟಿದ್ದಾರೆ. ನಾಯಕರು ಬೆಂಗಳೂರು, ದೆಹಲಿಯಲ್ಲಿ ಕುಳಿತು ಚರ್ಚಿಸುತ್ತಾರೆ. ಹೀಗಾಗಿ, ಆ ಪಕ್ಷ ಜನರಿಂದ ದೂರವಾಗಿದೆ’ ಎಂದು ವಿಶ್ಲೇಷಿಸಿದರು.

‘ಕಾಂಗ್ರೆಸ್‌ನವರು ರಾಜಕೀಯವಾಗಿ ನಿಮ್ಮನ್ನು ತುಳಿದರೇ’ ಎಂಬ ಪ್ರಶ್ನೆಗೆ, ‘ತುಳಿಯಲು ನಾನು ಹಗುರವಾಗಿಲ್ಲ. 110 ಕೆ.ಜಿ. ಇದ್ದೇನೆ. ಆದರೆ, ಕಾಂಗ್ರೆಸ್‌ನಲ್ಲಿ ನನಗೆ ಪರದೆ ಹಾಕಿದ್ದರು. ಆ ಪರದೆಯಿಂದ ಹೊರ ಬಂದಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ನನ್ನ ಸ್ನೇಹಿತರು. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಆದರೆ, ಮನೆ ಕಟ್ಟಿದವರು ಮನೆಯಲ್ಲಿ ಇರಲ್ಲ. ಕಟ್ಟಿದವರನ್ನು ಒಂದೆರಡು ಮೋಸಂಬಿ ಕೊಟ್ಟು; ಶಾಲು ಹೊದಿಸಿ ಹೊರ ಹಾಕುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ದೆಹಲಿ ಬಹಳ ದೂರ ಎನ್ನುವಂತಹ ಸ್ಥಿತಿ ರಾಷ್ಟ್ರೀಯ ಪಕ್ಷಗಳಲ್ಲಿದೆ. ಪ್ರಾದೇಶಿಕ ಪಕ್ಷದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಇಬ್ಬರ ವ್ಯಕ್ತಿತ್ವವೂ ಒಂದೇ’ ಎಂದರು.

*
ಕೋವಿಡ್ ಇದೇ ರೀತಿ ಕಡಿಮೆಯಾದರೆ ಶಾಲೆ, ಕಾಲೇಜು ಆರಂಭ ಮಾಡಬಹುದು. 2ನೇ ಅಲೆ ಬಂದರೆ ಬೇಡ. ಮಾಸ್ಕ್, ಅಂತರ ಕಾಯ್ದುಕೊಂಡರೆ ಏನೂ ಆಗುವುದಿಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.