ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಪಂಚಮಸಾಲಿ ಲಿಂಗಾಯತರ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಅನ್ನು ವಿರೋಧಿಸಿ ಪ್ರತಿಭಟನೆ ಮಾಡಿದರು
ಬೆಳಗಾವಿ (ಸುವರ್ಣ ವಿಧಾನಸೌಧ): ‘ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರವಾಗಿ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ತಿಳಿಸದೆ, ಅಡ್ಡಗೋಡೆ ಮೇಲೆ ದೀಪ ಇಡುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್‌ನಲ್ಲಿ ಧರಣಿ ನಡೆಸಲು ಮುಂದಾದಾಗ, ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಸೋಮವಾರಕ್ಕೆ (ಡಿ.16) ಮುಂದೂಡಿದರು.
ಶುಕ್ರವಾರ ಭೋಜನ ವಿರಾಮದ ಬಳಿಕ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಎನ್. ರವಿಕುಮಾರ್, ಹಣಮಂತ ನಿರಾಣಿ ಮತ್ತಿತರರು ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವ ವಿಚಾರದ ಕುರಿತು ಗಮನ ಸೆಳೆದರು.
ಅದಕ್ಕೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ‘ಹಿಂದಿನ ಬಿಜೆಪಿ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬದಲು ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಆಧಾರದಲ್ಲಿ ಪ್ರವರ್ಗ 2ಸಿ, 2ಡಿ ಸೃಷ್ಟಿಸಿತ್ತು. ಬಳಿಕ ತನ್ನ ಆದೇಶವನ್ನು ಮುಂದಿನ ಆದೇಶದವರೆಗೆ ಜಾರಿ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಎಸ್.ವಿ. ಸಂಕನೂರು, ‘ಹಿಂದಿನ ಸರ್ಕಾರದ್ದು ಬಿಡಿ. ಈಗ ನಿಮ್ಮ ಸರ್ಕಾರದ ಯಾವ ಕ್ರಮಕೈಗೊಳ್ಳುತ್ತದೆ. ಸುಪ್ರೀಂ ಕೋರ್ಟ್‌ಗೆ ಸೂಕ್ತ ವಕೀಲರನ್ನು ನೇಮಿಸಿ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆಯೇ’ ಎಂದು ಪ್ರಶ್ನಿಸಿದರು.
ಹಣಮಂತ ನಿರಾಣಿ, ಎನ್. ರವಿಕುಮಾರ್ ಮತ್ತಿತರರು, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಕ್ಕೆ ಮುಖ್ಯಮಂತ್ರಿ ಕ್ಷಮೆ ಕೋರಬೇಕು ಎಂದೂ ಆಗ್ರಹಿಸಿದರು.
ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ, ‘ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಲು ಅಲ್ಲ. ಗೋಲಿಬಾರ್ ಮಾಡಲು ಪೊಲೀಸರು ಬಂದಿದ್ದರು’ ಎಂದು ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
ಆಗ ಸಚಿವ ಶಿವರಾಜ ತಂಗಡಗಿ, ‘ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಕೇಂದ್ರ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರ ₹ 48 ಲಕ್ಷ ಕೋಟಿ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಕೇವಲ ₹ 68 ಸಾವಿರ ಕೋಟಿ ನೀಡಿದೆ’ ಎಂದು ಟೀಕಿಸಿದರು.
ಅದಕ್ಕೆ ಎನ್. ರವಿಕುಮಾರ್, ‘ಸುಳ್ಳು ಮಾಹಿತಿ ನೀಡಬೇಡಿ. ಆ ವರ್ಗಕ್ಕೆ ಕೇಂದ್ರ ಸರ್ಕಾರ ₹ 1.24 ಲಕ್ಷ ಕೋಟಿ ಮೀಸಲಿಟ್ಟಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ’ ಎಂದಾಗ ಸದನದಲ್ಲಿ ಗದ್ದಲ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.