ADVERTISEMENT

ವಿಧ್ವಂಸಕ ಕೃತ್ಯಕ್ಕೆ ಜೈಲಿನಲ್ಲೇ ತಯಾರಿ; ಲಷ್ಕರ್‌ ಎ ತೊಯ್ಬಾ ಮುಖಂಡನಿಂದ ತರಬೇತಿ

ಐಎಸ್‌ ಸಂಘಟನೆಯಿಂದ ಶಸ್ತ್ರಾಸ್ತ್ರಗಳ ಪೂರೈಕೆ, ಆರ್ಥಿಕ ನೆರವು?

ಅದಿತ್ಯ ಕೆ.ಎ.
Published 20 ಜುಲೈ 2023, 9:41 IST
Last Updated 20 ಜುಲೈ 2023, 9:41 IST
ಜುನೈದ್‌, ಟಿ. ನಜೀರ್‌
ಜುನೈದ್‌, ಟಿ. ನಜೀರ್‌   

ಬೆಂಗಳೂರು: ಕೊಲೆ, ದರೋಡೆ ಯತ್ನ, ರಕ್ತಚಂದನ ಕಳವು ಪ್ರಕರಣದಲ್ಲಿ 2017ರಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿದ್ದ ಶಂಕಿತರು, ಜೈಲಿನಲ್ಲಿದ್ದ ಟಿ. ನಜೀರ್‌ನ ಸಂಪರ್ಕದಿಂದ ಉಗ್ರಗಾಮಿ ಚಟುವಟಿಕೆಯತ್ತ ಹೆಜ್ಜೆ ಹಾಕಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

2008ರ ಜುಲೈನಲ್ಲಿ ನಗರದ 9 ಸ್ಥಳಗಳಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಬಂಧಿತ ಟಿ. ನಜೀರ್‌ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಇದ್ದಾನೆ. ಆತನಿಗೆ ಜೈಲಿನಲ್ಲಿ ಪ್ರತ್ಯೇಕ ಬ್ಯಾರಕ್‌ ನೀಡಲಾಗಿತ್ತು. ಇದೇ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ (ಪಿಡಿಪಿ) ಅಧ್ಯಕ್ಷ ಅಬ್ದುಲ್‌ ನಾಸಿರ್ ಮದನಿ ಸಹಚರನೇ ನಜೀರ್‌.

2017ರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್‌ ಹಾಗೂ ಆತನ ಗುಂಪಿನ ಸದಸ್ಯರು ನಜೀರ್‌ ಸಂಪರ್ಕಕ್ಕೆ ಬಂದಿದ್ದರು. ಜೈಲಿನೊಳಗೆ ಊಟ, ಕಾಫಿ ಹಾಗೂ ಕೆಲಸದ ಸಮಯದಲ್ಲಿ ಒಟ್ಟಿಗೆ ಸೇರುತ್ತಿದ್ದರು. ಆ ಸಮಯದಲ್ಲಿ ನಜೀರ್ ಎಲ್ಲರಿಗೂ ಉಗ್ರ ಕೃತ್ಯಕ್ಕೆ ಪ್ರೇರೇಪಿಸುತ್ತಿದ್ದ. ಬಾಂಬ್‌ ಸ್ಫೋಟ, ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದ’ ಎಂದು ತನಿಖಾಧಿಖಾರಿಗಳು ತಿಳಿಸಿದ್ದಾರೆ.

ADVERTISEMENT

ಇದನ್ನೂ ಓದಿ: ಉಗ್ರರ ಟಾರ್ಗೆಟ್ ಬೆಂಗಳೂರು: ಸ್ಫೋಟಕ, ಶಸ್ತ್ರಾಸ್ತ್ರ ಸಹಿತ ಐವರು ಶಂಕಿತ ಉಗ್ರರ ಬಂಧನ

ಅಪರಾಧಿಗಳ ಮನಪರಿವರ್ತನೆಯಾಗಬೇಕಿದ್ದ ಜೈಲನ್ನು ಈ ಶಂಕಿತರು ಉಗ್ರ ಚಟುವಟಿಕೆ ನಡೆಸುವ ತರಬೇತಿ ಸ್ಥಳವಾಗಿ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

‘2008ರಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ್ಕೆ ಲಷ್ಕರ್‌–ಎ–ತೊಯ್ಬಾ (ಎಲ್‌ಇಟಿ) ಸಂಘಟನೆ ಮುಖಂಡ ನಜೀರ್‌ ಸಂಚು ನಡೆಸಿದ್ದ. ಅದೇ ಮಾದರಿಯಲ್ಲಿ ನಗರದ ಆಯ್ದ ಜನದಟ್ಟಣೆ ಪ್ರದೇಶಗಳಲ್ಲಿ ಸ್ಪೋಟ ನಡೆಸುವಂತೆ ಐವರನ್ನು ಮನಪರಿವರ್ತನೆ ಮಾಡಿದ್ದ. ಇವರನ್ನೂ ತನ್ನ ಸಂಘಟನೆಗೆ ಸೇರುವಂತೆ ತಿಳಿಸಿದ್ದ. ಹೊರಬಂದ ಮೇಲೂ ಆತ ಹೇಳಿದಂತೆಯೇ ಶಂಕಿತರು ಯೋಜನೆ ರೂಪಿಸುತ್ತಿದ್ದರು.’

‘ಕೊಲೆ ಪ್ರಕರಣದಲ್ಲಿ ಬಂಧಿಸಿದ್ದ 21 ಮಂದಿ ಜಾಮೀನನ ಮೇಲೆ ಬಿಡುಗಡೆಗೊಂಡಿದ್ದರು. ಜುನೈದ್‌ ವಿದೇಶಕ್ಕೆ ತೆರಳಿದ ಮೇಲೆ ಸುಹೇಲ್‌ ತಂಡದ ನೇತೃತ್ವ ವಹಿಸಿಕೊಂಡಿದ್ದ. ಆರ್‌.ಟಿ.ನಗರದ ಬಾಡಿಗೆ ಮನೆಗೆ ಉಳಿದವರನ್ನೂ ಕರೆಸಿಕೊಂಡು ಸಭೆ ನಡೆಸುತ್ತಿದ್ದ. ಅದೇ ಮನೆಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಪೂರೈಕೆಯಾಗುತ್ತಿದ್ದವು. ಅಲ್ಲದೇ ಬೆಂಗಳೂರಿನಲ್ಲಿ ಸದ್ಯದಲ್ಲೇ ದೊಡ್ಡ ಕೃತ್ಯ ಎಸಗುವಂತೆ ಜುನೈದ್‌ ಸೂಚನೆ ನೀಡಿದ್ದ. ಅದರಂತೆ ಐವರು ಕಾರ್ಯ ಪ್ರವೃತ್ತರಾಗಿದ್ದರು. ಬಿಡುಗಡೆಯಾಗಿರುವ ಉಳಿದ 16 ಮಂದಿಯ ಪಾತ್ರದ ಕುರಿತೂ ತನಿಖೆ ಮುಂದುವರಿದಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯು ಶಸ್ತ್ರಾಸ್ತ್ರಗಳ ಪೂರೈಕೆಯ ಜತೆಗೆ ಆರ್ಥಿಕ ನೆರವು ನೀಡಿರುವ ಮಾಹಿತಿಯಿದೆ’ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಬೆಂಗಳೂರು | ಆರ್‌.ಟಿ.ನಗರದ ಸುಹೇಲ್ ಮನೆಯಲ್ಲಿ ಸೇರುತ್ತಿದ್ದ ಶಂಕಿತರು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ

ನಜೀರ್‌ ವಶಕ್ಕೆ: ನ್ಯಾಯಾಲಯದ ಅನುಮತಿಗೆ ಪಡೆದು ಕಾರಾಗೃಹದಲ್ಲಿರುವ ನಜೀರ್‌ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದೆ. ಯಾವ ಸ್ಥಳದಲ್ಲಿ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂಬುದನ್ನು ತನಿಖೆಯಿಂದ ತಿಳಿಯಬೇಕಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದರು.

ಎನ್‌ಐಎ ತನಿಖೆ ಸಾಧ್ಯತೆ: ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸರು, ಎನ್‌ಐಎ ಅಧಿಕಾರಿಗಳಿಗೂ ಪ್ರಕರಣದ ಮಾಹಿತಿ ನೀಡಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಬಾಡಿಗೆ ಮನೆಗೆ: ಒಂದೂವರೆ ತಿಂಗಳ ಹಿಂದಷ್ಟೇ ಸೈಯದ್ ಸುಹೇಲ್‌ ಆರ್‌.ಟಿ.ನಗರದ ಕನಕ ಬಡಾವಣೆ ಮಸೀದಿಯೊಂದರ ಪಕ್ಕದ ಮನೆಯನ್ನು ಬಾಡಿಗೆ ಪಡೆದುಕೊಂಡು ನೆಲೆಸಿದ್ದ. ಪೋಷಕರೂ ಜೊತೆಗಿದ್ದರು. ‘ಮನೆ ಬಾಡಿಗೆಗೆ ಇರುವ ಫಲಕ ನೋಡಿ ಸುಹೇಲ್‌ ಪತ್ನಿ ಬಂದಿದ್ದರು. ನಾವು ಬಡವರು ಪತಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಮನೆಗೆ ಮುಂಗಡ ಪಾವತಿಸಲು ಹಣ ಇಲ್ಲ. ಎರಡು ತಿಂಗಳಲ್ಲಿ ಮುಂಗಡ ಹಣ ಕೊಡುವುದಾಗಿ ಕೇಳಿಕೊಂಡಿದ್ದರು. ಅವರ ಗೋಳಾಟವು ನನಗೆ ಕಣ್ಣೀರು ತರಿಸಿತ್ತು. ಪುಟ್ಟ ಮಕ್ಕಳಿದ್ದರು. ಮಾನವೀಯತೆಯಿಂದ ಮನೆ ನೀಡಿದ್ದೆ. ಅವರ ಸಂಚು ಗೊತ್ತಿರಲಿಲ್ಲ’ ಎಂದು ಮನೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ‘ಎರಡು ತಿಂಗಳಲ್ಲಿ ಮುಂಗಡ ಹಣ ನೀಡುವಂತೆ ಹೇಳಿದ್ದೆ. ಹಣ ನೀಡದಿದ್ದರೆ ಮನೆ ಖಾಲಿ ಮಾಡುವಂತೆಯೂ ಸೂಚಿಸಿದ್ದೆ. ಎರಡನೇ ಮಹಡಿಯಲ್ಲಿ ಮನೆ ಇತ್ತು. ಹೀಗಾಗಿ ಅಲ್ಲಿಗೆ ಯಾರು ಬರುತ್ತಿದ್ದರು ಎಂಬುದು ಗೊತ್ತಿಲ್ಲ’ ಎಂದು ಕಣ್ಣೀರು ಹಾಕಿದರು.

ರಾಜ್ಯದಲ್ಲಿ ಕಟ್ಟೆಚ್ಚರ: ಹಲವೆಡೆ ತಪಾಸಣೆ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗೃಹ ಇಲಾಖೆ ಸೂಚನೆ ನೀಡಿದ್ದು ನಗರದ ಮೆಜೆಸ್ಟಿಕ್‌ ವಿಧಾನಸೌಧ ಹೈಕೋರ್ಟ್‌ ರೈಲು ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಬಂದೋಬಸ್ತ್‌ ಹೆಚ್ಚಿಸಲಾಗಿದೆ. ಸೂಕ್ಷ್ಮಪ್ರದೇಶದಲ್ಲಿ ಬಾಂಬ್‌ ಪತ್ತೆದಳ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ವಿಜಯಪುರ ಜಿಲ್ಲಾ ಪೊಲೀಸರು ರೈಲು ನಿಲ್ದಾಣ ಸೇರಿದಂತೆ ಸೂಕ್ಷ್ಮಪ್ರದೇಶದಲ್ಲಿ ತಪಾಸಣೆ ನಡೆಸಿದ್ದಾರೆ.

ಶಂಕಿತ ಉಗ್ರ ಸೈಯದ್ ಸುಹೈಲ್ ಖಾನ್ ವಾಸಿಸುತ್ತಿದ್ದ ಬಾಡಿಗೆ ಮನೆ (ನೀಲಿ ಬಣ್ಣದ ಮನೆಯ 2ನೇ ಮಹಡಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.