ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡಿದವರ ಗುರುತು ಪತ್ತೆ

ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 19:10 IST
Last Updated 11 ನವೆಂಬರ್ 2025, 19:10 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡಿದವರ ಗುರುತು ಪತ್ತೆ ಮಾಡಲಾಗಿದ್ದು, ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜೈಲರ್ ಗೋಪಿನಾಥ್ ಅವರ ದೂರಿನ ಮೇರೆಗೆ ಕಾರ್ತಿಕ್, ಧನಂಜಯ್, ಮಂಜುನಾಥ್, ಬಿ.ಚರಣ್‌ ರಾವ್ ವಿರುದ್ಧ ಜೈಲು ನಿಯಮಗಳ ಉಲ್ಲಂಘನೆ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.   

ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಕಾರ್ತಿಕ್‌ ಹೊರತು ಪಡಿಸಿ ಇತರೆ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ADVERTISEMENT

ಮಾದನಾಯಕನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕಾರ್ತಿಕ್  ಒಂದು ವರ್ಷದಿಂದ ಜೈಲಿನಲ್ಲಿದ್ದು, ಜತೆಗೆ ಇತರೆ ಆರೋಪಿಗಳು ಇದ್ದರು. ಆದರೆ, ಮಂಜುನಾಥ್‌, ಧನಂಜಯ್‌, ಚರಣ್‌ರಾವ್‌ ಈಗಾಗಲೇ ಬಿಡುಗಡೆಯಾಗಿದ್ದಾರೆ. ಈ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅವರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಕೋರಲಾಗಿದೆ. ಅವರಿಂದ ಬಂದ ಮಾಹಿತಿ ಆಧರಿಸಿ ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಿಗೆ ಮೊಬೈಲ್‌ಗಳು ಸಿಕ್ಕಿದ್ದು ಹೇಗೆ? ಯಾವಾಗ ಚಿತ್ರೀಕರಿಸಲಾಯಿತು? ಕೊಟ್ಟವರು ಯಾರು? ಮಾಧ್ಯಮಗಳಿಗೆ ವಿಡಿಯೊಗಳನ್ನು ಹರಿಬಿಟ್ಟವರು ಯಾರು? ಎಂಬುದರ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜೈಲರ್ ಗೋಪಿನಾಥ್ ದೂರಿನಲ್ಲಿ ತಿಳಿಸಿದ್ದಾರೆ. 

ಕೈದಿಗಳೇ ವಿಡಿಯೊ ಮಾಡಿ ಹೊರಬಿಟ್ಟಿದ್ದಾರೆ ಎಂಬ ಸಂಶಯದ ಮೇಲೆ ಕೆಲ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಡಿಯೊ ತುಣುಕುಗಳ ಬಗ್ಗೆ ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.

ಬ್ಯಾರಕ್‌ನ 7 ಮತ್ತು 8ನೇ ಕೊಠಡಿಯಲ್ಲಿ ವಿಚಾರಣಾಧೀನ ಕೈದಿಗಳು ಮದ್ಯದ ಬಾಟಲ್ ಇಟ್ಟುಕೊಂಡು ಪಾರ್ಟಿ ಹಾಗೂ ನೃತ್ಯ ಮಾಡಿರುವ 1 ನಿಮಿಷ 44 ಸೆಕೆಂಡಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಅತ್ಯಾಚಾರ, ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್‌ ಮೊಬೈಲ್ ಬಳಕೆ ಮಾಡಿರುವ ಸಂಬಂಧವೂ ಮೂರು ಎನ್‌ಸಿಆರ್‌  ದಾಖಲಾಗಿದೆ. 

ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಕೈದಿಗಳಿಗೆ ವಿಶೇಷ ಸೌಲಭ್ಯ, ಮೊಬೈಲ್‌ ಬಳಕೆಗೆ ಅವಕಾಶ ನೀಡಿದ್ದ ಪ್ರಕರಣದಲ್ಲಿ ಜೈಲಿನ ಸೂಪರಿಂಟೆಂಡೆಂಟ್ ಇಮಾಮ್‌ಸಾಬ್‌ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಿದ್ದು, ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

ಜೈಲಿನ ಘಟನೆಗೆ ಸಂಬಂಧಿಸಿದಂತೆ ಒಂದು ಎಫ್ಐಆರ್ ದಾಖಲಾಗಿದೆ. ಅವಶ್ಯಕತೆಯಿದ್ದರೆ ಮತ್ತೊಂದು ಎಫ್ಐಆರ್ ದಾಖಲಿಸಿಕೊಳ್ಳಲಾಗುವುದು.
– ಸೀಮಾಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.