ADVERTISEMENT

ಹೋಟೆಲ್‌ಗೆ ಅವಕಾಶ ಕೊಡದಿದ್ದರೆ ಪಾರ್ಸೆಲ್ ಬಂದ್‌: ಹೋಟೆಲ್‌ ಮಾಲೀಕರ ಸಂಘದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಮೇ 2020, 20:00 IST
Last Updated 20 ಮೇ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಹೋಟೆಲ್‍ಗಳಲ್ಲಿ ಆಹಾರ ಸೇವಿಸಲು ಗ್ರಾಹಕರಿಗೆ ಅನುಮತಿ ನೀಡದಿದ್ದರೆ, ಈವರೆಗೆ ನೀಡುತ್ತಿದ್ದ ಪಾರ್ಸೆಲ್ ಸೇವೆಯನ್ನೂ ಶನಿವಾರದಿಂದ ನಿಲ್ಲಿಸುತ್ತೇವೆ’ ಎಂದು ಹೋಟೆಲ್ ಮಾಲೀಕರು ಎಚ್ಚರಿಸಿದ್ದಾರೆ.

ರಾಜ್ಯ ಸರ್ಕಾರ ಬೀದಿ ಬದಿ ಆಹಾರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದು, ಹೋಟೆಲ್‌ನಲ್ಲಿ ಪೂರೈಕೆ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸಂಘ ಆಕ್ಷೇಪಿಸಿದೆ.

‘ಕೊರೊನಾ ಸೋಂಕು ಹರಡದಂತೆ ಹೋಟೆಲ್‍ಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಿದ್ಧರಿದ್ದೇವೆ. ರಸ್ತೆಬದಿಗಿಂತ ಹೋಟೆಲ್‍ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುತ್ತೇವೆ. ಆದರೂ ಗ್ರಾಹಕರಿಗೆ ಸೇವೆ ಒದಗಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಬೇಸರ ತರಿಸಿದೆ’ ಎನ್ನುತ್ತಾರೆ ಮಾಲೀಕರು.

ADVERTISEMENT

'ಮನೆಯಲ್ಲಿ ಆಹಾರ ತಯಾರಿ ಸಾಧ್ಯವಾಗದವರು ಹಾಗೂ ಕಚೇರಿ ಕೆಲಸಗಳಿಗೆ ಹೋಗುವವರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಬರುತ್ತಾರೆ. ಇವರು ಪಾರ್ಸೆಲ್ ಪಡೆದು ಎಲ್ಲಿ ತಿನ್ನುತ್ತಾರೆ? ಹೋಟೆಲ್ ಒಳಗೆ ಕೂರಲು ಅವಕಾಶ ಸಿಕ್ಕಾಗ ಮಾತ್ರ ಗ್ರಾಹಕರು ಬರುತ್ತಾರೆ' ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ತಿಳಿಸಿದರು.

ಲಾಕ್‍ಡೌನ್‍ನಿಂದ ರಾಜ್ಯದ ಹೋಟೆಲ್ ಕೆಲಸಗಾರರ ಕುಟುಂಬಗಳ ನಿರ್ವಹಣೆ ಕಷ್ಟವಾಗಿದೆ. ಹೋಟೆಲ್‍ಗಳು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತವೆ. ಪ್ರತಿ ತಿಂಗಳು ಬಾಡಿಗೆ ಪಾವತಿ, ಕೆಲಸಗಾರರಿಗೆ ಸಂಬಳ ನೀಡಬೇಕು. ಹೋಟೆಲ್ ಕಾರ್ಮಿಕರಿಗೂ ಸರ್ಕಾರ ಪರಿಹಾರ ನೀಡಬೇಕಿತ್ತು. ಈಗಿನಂತೆ ಪಾರ್ಸೆಲ್ ಸೇವೆ ನೀಡುವುದರಿಂದ ಲಾಭ ಕೈಸೇರುವುದೇ ಇಲ್ಲ' ಎಂದು ಅಳಲು ತೋಡಿಕೊಂಡರು.

'ಹೋಟೆಲ್ ಹಾಗೂ ರೆಸ್ಟೋರೆಂಟ್‍ಗಳಲ್ಲಿ ಆಹಾರ ಸೇವನೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ. ಶುಕ್ರವಾರದೊಳಗೆ ಈ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಸೇವೆಗೆ ಅನುಮತಿ ನೀಡದಿದ್ದರೆ ಶನಿವಾರದಿಂದಲೇ ಪಾರ್ಸೆಲ್ ಸೇವೆ ಸ್ಥಗಿತಗೊಳಿಸಲು ಹೋಟೆಲ್ ಮಾಲೀಕರೆಲ್ಲ ಒಮ್ಮತದಿಂದ ನಿರ್ಧರಿಸಿದ್ದೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.