ADVERTISEMENT

‘ಒಳನೋಟ’ಕ್ಕೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 19:29 IST
Last Updated 24 ಫೆಬ್ರುವರಿ 2019, 19:29 IST
   

ಬೆಂಗಳೂರು: ಭಾನುವಾರ (ಫೆ. 24) ‍ಪ್ರಕಟಗೊಂಡ ಕಾಶ್ಮೀರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ‘ಕಾಶ್ಮೀರ ಉಗ್ರರ ಕುಲುಮೆ’ ಒಳ ನೋಟ ವಿಶೇಷ ವರದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘370ನೇ ವಿಧಿ ರದ್ದಾಗಲಿ’
ಚುನಾವಣಾ ವೇಳೆ ಜನ‍ಪ್ರತಿನಿಧಿಗಳು ಶಾಂತಿಯ ಆಶ್ವಾಸನೆ ಕೊಟ್ಟು ಮತ್ತೆ ಅದೇ ರಾಜಕೀಯ ಚಾಳಿ ಮುಂದುವರಿಸುತ್ತಾರೆ. ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಮತ್ತು ಭಯೋತ್ಪಾದಕರ ಉಪಟಳ ನಿಲ್ಲಲು ಸೇನೆಗೆ ಸಂಪೂರ್ಣ ಅಧಿಕಾರ ನೀಡಬೇಕು ಮತ್ತು 370ನೇ ವಿಧಿ ರದ್ದಾಗಬೇಕು. ಅದಕ್ಕೆ ಬೇಕಾದ ನಿಯಮಗಳನ್ನು ರೂಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ.
-ಮನು ಜಿ.ಎಸ್, ಬೆಂಗಳೂರು

***
‘ಮೂಲ ಸೌಲಭ್ಯಗಳು ವ್ಯರ್ಥ’
ದೇಶದ ಶೇ 1ರಷ್ಟಿಲ್ಲದ ಕಾಶ್ಮೀರದ ಜನರಿಗೆ ಬಜೆಟ್‌ನ ಶೇ 11ರಷ್ಟು ಅನುದಾನ ಮೀಸಲಿರಿಸಲಾಗಿದೆ. ಆದರೆ, ಅಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಯವುದೇ ಹೆಚ್ಚು. ವಿಶೇಷ ಪ್ಯಾಕೇಜು, ಸ್ವಾಯತ್ತತೆ ಕಾಶ್ಮೀರದ ಸಮಸ್ಯೆಗೆ ಪರಿಹಾರದಂತೆ ಕಾಣುತ್ತಿಲ್ಲ. ಪ್ರತ್ಯೇಕತಾವಾದಿಗಳು, ಪಾಕಿಸ್ತಾನ ಪ್ರಚೋದಿತ ಉಗ್ರರೇ ಇದಕ್ಕೆ ಕಾರಣ.
–ಬಾಬು ಶಿರಮೋಜಿ, ಬೆಳಗಾವಿ

ADVERTISEMENT

***
‘ಜನರಿಗೆ ತಿಳಿ ಹೇಳಿ’
ಕಾಶ್ಮೀರಿ ಯುವಜನರ ಮನವೊಲಿಸುವ ಮೂಲಕ ಉಗ್ರರ ಗುಂಪಿಗೆ ಸೇರುವುದನ್ನುಸರ್ಕಾರ ತಪ್ಪಿಸಲು ಪ್ರಯತ್ನಿಸಬೇಕು. ಸ್ಥಳೀಯರ ಸಹಾಯದಿಂದ ಭಯೋತ್ಪಾದಕರು ದೇಶದೊಳಗೆ ನುಸುಳಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಅಲ್ಲಿನ ಜನರಿಗೆ ಅರಿವಾಗುವ ರೀತಿ ತಿಳಿ ಹೇಳಬೇಕು.
–ಪ್ರಕಾಶ್, ಕನಕಪುರ

***
‘ಮೂಲಸೌಕರ್ಯಗಳಿಗೆ ಸ್ಪಂದಿಸಿ’
ಕಾಶ್ಮೀರದ ಜನರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಅದು ಪುಲ್ವಾಮ‌ದ ದಾಳಿಯ ದುರುಂತಕ್ಕೆ ಮೂಲ ಕಾರಣ. ಅಲ್ಲಿನ ಸುತ್ತಮುತ್ತ ಪ್ರದೇಶಗಳ ಜನರ ಜೀವನಕ್ಕೆ ಹಣ ಮತ್ತು ಮೂಲಸೌಕರ್ಯಗಳ ಕೊರತೆ ಹೆಚ್ಚಿದೆ. ಅವುಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಉಗ್ರರ ಜತೆ ಕೈ ಜೋಡಿಸುತ್ತಾರೆ. ಸರ್ಕಾರವು ತಕ್ಕ ಮಟ್ಟಿಗೆ ಒದಗಿಸುವುದರ ಜತೆಗೆ ಮುನ್ನೆಚ್ಚರಿಕೆ ಕ್ರಮವನ್ನೂ ವಹಿಸಬೇಕು.
–ಎನ್.ವಿಜಯ, ಸಾಣಾಪುರ

***
‘ಒಮ್ಮತವಾಗಿ ಬೆಂಬಲಿಸಿ’
ಕಾಶ್ಮೀರಕ್ಕೆ ಕೊಟ್ಟಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಬೇಕು. ಅದಕ್ಕಾಗಿ ರಾಜ್ಯ ಸಭೆಯಲ್ಲಿ ಎಲ್ಲ ಸದಸ್ಯರು ಪಕ್ಷಭೇದ‌ ಮರೆತು ಒಮ್ಮತವಾಗಿ ಬೆಂಬಲಿಸಬೇಕು
–ಶಶಿಕುಮಾರ್ ಕೃಸುಶ, ದೇವನಹಳ್ಳಿ

***
‘ದೇಶದ ರಕ್ಷಣೆ ಎಲ್ಲರ ಹೊಣೆ’
ದುಷ್ಕರ್ಮಿಗಳ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಕಂಡಷ್ಟಕ್ಕೆ ಅದನ್ನು ಮುಸ್ಲಿಂ ಸಂಘಟನೆಗಳು ಎಂಬುದಾಗಿ ಬಿಂಬಿಸುವುದು ತಪ್ಪು. ದೇಶಕ್ಕಾಗಿ ರಕ್ತ ಕೊಟ್ಟವರಲ್ಲಿ ಮುಸ್ಲಿಮರೂ ಇದ್ದಾರೆ. ಭಯೋತ್ಪಾದನೆಗೆ ಧರ್ಮವಿಲ್ಲ. ಭಯೋತ್ಪಾದನೆಗೆ ಧರ್ಮ ಎಂಬ ಬೇಲಿ ಕಟ್ಟದೆ ಎಲ್ಲರೂ ಹೆಗಲುಕೊಟ್ಟು ದೇಶಕ್ಕಾಗಿ ದುಡಿಯೋಣ.
–ಅಬ್ದುಲ್ ರಶೀದ್ ಸಅದಿ ಪದ್ಮುಂಜ, ರಂಜದಕಟ್ಟೆ, ಎಸ್ಸೆಸ್ಸೆಫ್ ಕಾರ್ಯಕರ್ತ

***
‘ಉಗ್ರರ ಉಪದೇಶಕ್ಕೆ ದಾರಿ ತಪ್ಪುತ್ತಿದ್ದಾರೆ’
ಕಾಶ್ಮೀರದ ಸಾವಿರಾರು ಯುವಕರು ಅಲ್ಲಿನ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡು ಉಗ್ರರ ಉಪದೇಶವೇ ಹಿತವೆನಿಸಿ ದಾರಿ ತಪ್ಪುತ್ತಿದ್ದಾರೆ. ಮೊದಲು ಅಲ್ಲಿನ ಮೂಲ ಸಮಸ್ಯೆಯನ್ನು ಬಗೆಹರಿಸಿ, ಅವರ ಸಮಸ್ಯೆಗಳಿಗೆ ತುರ್ತು ಪರಿಹಾರವನ್ನು ಒದಗಿಸಬೇಕಾದ ಅಗತ್ಯವಿದೆ.
–ರಾಜು.ಬಿ. ಲಕ್ಕಂಪುರ, ಜಗಳೂರು

***
‘ಉಗ್ರರಿಗೆ ನೆರವಾಗುವುವರಿಗೆ ಶಿಕ್ಷೆ ಆಗಲಿ’
‌ಕಾಶ್ಮೀರ ಭಾರತಾಂಬೆಯ ಮುಕುಟದ ಹೊನ್ನ ಕಳಸ. ಅದನ್ನು ಉಗ್ರರ ಸ್ವರ್ಗವಾಗಲು ಬಿಡಬಾರದು. ಕೂಡಲೇ ಅಲ್ಲಿಯ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಬಾವುಟ, 370ನೇ ವಿಧಿ ರದ್ದುಪಡಿಸಿ. ಉಗ್ರರಿಗೆ ನೆರವು ನೀಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
–ಎಸ್.ಕಲಾಲ್, ರಾಜನಕೊಳ್ಳುರ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.