ಹಣ
ನವದೆಹಲಿ: ಆಹಾರ ಸಂಸ್ಕರಣಾ ವಲಯವನ್ನು ಉತ್ತೇಜಿಸಲು ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಗೆ (ಪಿಎಂಕೆಎಸ್‌ವೈ) 15ನೇ ಹಣಕಾಸು ಆಯೋಗದಡಿ ₹1,920 ಕೋಟಿ ಹೆಚ್ಚುವರಿ ಮೊತ್ತ ಸೇರಿದಂತೆ ₹6,520 ಕೋಟಿ ವ್ಯಯ ಮಾಡಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಈ ಹಣಕಾಸು ವರ್ಷದಲ್ಲಿ ನೀಡಲಾಗುವ ಹೆಚ್ಚುವರಿ ಹಣವನ್ನು 50 ಬಹು-ಉತ್ಪನ್ನ ಆಹಾರ ಉತ್ತೇಜನ ಘಟಕಗಳು ಮತ್ತು 100 ಆಹಾರ ಪರೀಕ್ಷಾ ಪ್ರಯೋಗಾಲಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2017ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯನ್ನು 2025-26ರ ಆರ್ಥಿಕ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಯಿಂದ ಆಹಾರ ಮಾದರಿಗಳ ಪರೀಕ್ಷೆ ಸುಲಲಿತವಾಗಲಿದೆ ಎಂದರು.
ಎನ್‌ಸಿಡಿಸಿಗೆ ₹2 ಸಾವಿರ ಕೋಟಿ:
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ (ಎನ್‌ಸಿಡಿಸಿ) ನಾಲ್ಕು ವರ್ಷಗಳ ಕಾಲ ₹2,000 ಕೋಟಿ ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ. ಈ ಹಣಕಾಸಿನ ನೆರವಿನೊಂದಿಗೆ, ನಿಗಮವು ಮತ್ತಷ್ಟು ಸಾಲ ನೀಡಲು ಹೆಚ್ಚುವರಿಯಾಗಿ ₹20,000 ಕೋಟಿ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಈ ತೀರ್ಮಾನದಿಂದ ಡೇರಿ, ಜಾನುವಾರು, ಮೀನುಗಾರಿಕೆ, ಸಕ್ಕರೆ, ಜವಳಿ, ಆಹಾರ ಸಂಸ್ಕರಣೆ, ಸಂಗ್ರಹಣೆ ಮತ್ತು ಶೀತಲೀಕರಣದಂತಹ ವಿವಿಧ ವಲಯಗಳ 13,288 ಸಹಕಾರ ಸಂಘಗಳ 2.9 ಕೋಟಿ ಸದಸ್ಯರಿಗೆ ಅನುಕೂಲವಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.