ADVERTISEMENT

ಧರ್ಮಸ್ಥಳ: ಕರ್ತವ್ಯಕ್ಕೆ ಅಡ್ಡಿ; ಆರು ಆರೋಪಿಗಳ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಧರ್ಮಸ್ಥಳ ಪ್ರಕರಣ: ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 12:15 IST
Last Updated 10 ಆಗಸ್ಟ್ 2025, 12:15 IST
<div class="paragraphs"><p>ಆರೋಪಿಗಳು</p></div>

ಆರೋಪಿಗಳು

   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಯೂಟ್ಯೂಬರ್‌ಗಳ ಮೇಲೆ ಬುಧವಾರ ಹಲ್ಲೆ ನಡೆದ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳದ ಪದ್ಮಪ್ರಸಾದ್ (32), ಸುಹಾಸ್ (22), ಶಶಿಧರ್(30), ಉಜಿರೆಯ ಕಲಂದರ್ ಪುತ್ತುಮೋನು (42), ಕಳೆಂಜದ ಚೇತನ್ (21), ಕಲ್ಮಂಜದ ಗುರುಪ್ರಸಾದ್ (19) ಬಂಧಿತರು. ಬಂಧಿತರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ADVERTISEMENT

‘ಧರ್ಮಸ್ಥಳ ಗ್ರಾಮದ ಪಾಂಗಾಳ ರಸ್ತೆ ಬಳಿ ಬುಧವಾರ ಸಂಜೆ (ಆ.6) ಯೂಟ್ಯೂಬರ್‌ಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾಗಿತ್ತು. ಹಲ್ಲೆಗೊಳಗಾದ ಯೂಟ್ಯೂಬರ್‌ಗಳನ್ನು ಚಿಕಿತ್ಸೆ ಸಲುವಾಗಿ ಕಳುಹಿಸಿಕೊಟ್ಟಿದ್ದೆ. ಕೆಲ ಹೊತ್ತಿನಲ್ಲಿ ಪುರಂದರ ಗೌಡ, ವಿಠಲ ಗೌಡ, ತನುಷ್ ಶೆಟ್ಟಿ, ಅನಿಲ್, ಮನೋಜ್, ಪ್ರಮೋದ್ ಎಂಬುವರು ಅಕ್ರಮ ಕೂಟ ಕಟ್ಟಿಕೊಂಡು ಅಲ್ಲಿಗೆ ಬಂದಿದ್ದರು. ಬಳಿಕ ಧನಕೀರ್ತಿ ಆರಿಗ, ಅಭಿದೇವ್ ಆರಿಗ, ಪ್ರೀತಂ, ಹರ್ಷಿತ್ ಜೈನ್, ಚಂದನ್ ಕಾಮತ್, ನವೀನ ಕನ್ಯಾಡಿ, ಪ್ರಭಾಕರ, ತುಕಾರಾಮ ಗೌಡ, ರಾಜೇಂದ್ರ ದಾಸ್, ಕಿಶೋರ್, ದಿನೇಶ, ಅಮರ್, ನಿತಿನ್, ಸುರೇಂದ್ರ ಪ್ರಭು, ಮಲ್ಲಿಕ್ ಜೈನ್, ಹರ್ಷ, ಕಾರ್ತಿಕ್, ಪ್ರಕಾಶ್ ಅಲಿಯಾಸ್‌ ಸ್ನೇಕ್ ಪ್ರಕಾಶ್, ಕೃಷ್ಟ, ಸೋಮನಾಥ, ಶೀನಪ್ಪ ಸೇರಿದಂತೆ ಸುಮಾರು 50 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಸ್ಥಳಕ್ಕೆ ಬಂದಿದ್ದರು’ ಎಂದು ಧರ್ಮಸ್ಥಳ ಠಾಣೆಯ ಎಸ್‌.ಐ ಸಮರ್ಥ್‌ ಗಾಣಿಗೇರ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು. ಈ ಸಂಬಂಧ ಒಟ್ಟು 27 ಮಂದಿ ವಿರುದ್ದ ಎಫ್‌ಐಆರ್‌ ದಾಖಲಾಗಿತ್ತು.

‘ಸ್ಥಳದಿಂದ ತೆರಳುವಂತೆ ಸೂಚಿಸಿದರೂ ಕಿವಿಗೊಡದ ಆರೋಪಿಗಳು ಹಲ್ಲೆ ಹಾಗೂ ಬಲಪ್ರಯೋಗದ ಮೂಲಕ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿದ್ದರು. ಅಲ್ಲಿದ್ದ ಎರಡೂ ಗುಂಪುಗಳು ಪರಸ್ಪರ ತಳ್ಳಾಟ ಮತ್ತು ಹಲ್ಲೆಯಲ್ಲಿ ತೊಡಗಿದ್ದವು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಮತ್ತು ಠಾಣೆಯ ಸಿಬ್ಬಂದಿ ಸಹಾಯದಿಂದ ಗುಂಪುಗಳನ್ನು ಚದುರಿಸಿದ್ದೆವು. ಅದಕ್ಕೂ ಲೆಕ್ಕಿಸದೇ ಕೆಲವರು ಇನ್ನಷ್ಟು ಜನರನ್ನು ಕರೆಯಿಸಿ ಗಲಾಟೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಎಸ್.ಐ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.