
ಬೆಂಗಳೂರು: ‘ಶೂನ್ಯ ಪ್ರಸರಣ ಹೊಂದಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಕರ್ನಾಟಕ ಸರ್ಕಾರವು ₹2.9 ಕೋಟಿ ಮೊತ್ತದಷ್ಟು ಜಾಹಿರಾತುಗಳನ್ನು ನೀಡಿ, ಅಕ್ರಮ ಎಸಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಎಷ್ಟು ಪ್ರತಿಗಳು ಮುದ್ರಣವಾಗುತ್ತವೆ? ಯಾರೆಲ್ಲಾ ಅದನ್ನು ಓದುತ್ತಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವ್ಯವಹಾರದ ತನಿಖೆ ನಡೆಯುತ್ತಿದೆ. ಅದರ ಪ್ರವರ್ತಕರಾದ ತಾಯಿ–ಮಗ ಜಾಮೀನಿನ ಮೇಲೆಹೊರಗಿದ್ದಾರೆ. ಅಂತಹ ಪತ್ರಿಕೆಗೆ ಜಾಹಿರಾತು ನೀಡುವುದು ಸರಿಯೇ’ ಎಂದು ಪ್ರಶ್ನಿಸಿದರು.
‘ಅತಿಹೆಚ್ಚು ಪ್ರಸರಣ ಹೊಂದಿರುವ ರಾಷ್ಟ್ರೀಯ ಪತ್ರಿಕೆಗಳನ್ನು ಕಡೆಗಣಿಸಿ 2023–24ರಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ₹1.9 ಕೋಟಿ ಮತ್ತು 2024–25ರಲ್ಲಿ ₹1 ಕೋಟಿ ಮೊತ್ತದ ಜಾಹಿರಾತುಗಳನ್ನು ನೀಡಲಾಗಿದೆ. ಗಾಂಧಿ ಕುಟುಂಬಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವು ನೀಡಿರುವ ಉಡುಗೊರೆ ಇದು’ ಎಂದು ಟೀಕಿಸಿದರು.
ಎಸ್‌ಐಆರ್ ತಡೆಗೆ ಪ್ರತಿಭಟನೆ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ‘ವಿಬಿ–ಜಿ ರಾಮ್–ಜಿ’ ಯೋಜನೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ’ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.
‘ನರೇಗಾ ಯೋಜನೆ ಅಡಿಯಲ್ಲಿ 80ವರ್ಷ, 72 ವರ್ಷದವರಿಗೆ ಕೂಲಿ ಹಣ ಪಾವತಿ ಮಾಡುತ್ತಿದ್ದರು. ಜೆಸಿಬಿಯಲ್ಲಿ ಮಣ್ಣು ಅಗೆಸಿ, ಕೂಲಿಯಾಳುಗಳಿಗೆ ₹20–₹30 ನೀಡುತ್ತಿದ್ದರು. ನರೇಗಾ ಅನುಷ್ಠಾನದ ಎಲ್ಲ ಹಂತದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿತ್ತು. ಅದನ್ನು ತಪ್ಪಿಸುವ ಸಲುವಾಗಿ ‘ವಿಬಿ ಜಿ ರಾಮ್–ಜಿ’ ತರುತ್ತಿದ್ದೇವೆ. ಆದರೆ ಕಾಂಗ್ರೆಸ್‌ನವರಿಗೆ ಪಾರದರ್ಶಕತೆ ಬೇಕಾಗಿಲ್ಲ. ಹೀಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.