ADVERTISEMENT

ಪ್ರಜಾವಾಣಿ ಸಾಧಕರು–2023 ಪ್ರಶಸ್ತಿ ಪ್ರದಾನ: ಸಾಧಕರ ಸಿರಿ, ಗೌರವದ ಗರಿ

ವಿವಿಧ ಕ್ಷೇತ್ರಗಳ 23 ಮಂದಿಗೆ ‘ಪ್ರಜಾವಾಣಿ ಸಾಧಕರು–2023’ ಪುರಸ್ಕಾರ

ಪ್ರಜಾವಾಣಿ ವಿಶೇಷ
Published 24 ಫೆಬ್ರುವರಿ 2023, 22:15 IST
Last Updated 24 ಫೆಬ್ರುವರಿ 2023, 22:15 IST
ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಪ್ರಜಾವಾಣಿ ಸಾಧಕರು-–2023' ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. (ನಿಂತವರಲ್ಲಿ ಎಡದಿಂದ) ರೂಮಿ ಹರೀಶ್, ಬಿ.ಎನ್. ವಿಸ್ಮಯಾ, ಪ್ರಾರ್ಥನಾ ಭಟ್, ಸಿ.ಎಸ್‌. ಷಡಾಕ್ಷರಿ, ಟಿ.ಎನ್. ಸೀತಾರಾಂ, ರವೀಂದ್ರ ಭಟ್ಟ, ಉಮಾಶಂಕರ್ ಅಪಾಲಿ, ಅನೀಶ್‌ ಗೌಡ, ರವಿಕುಮಾರ್ ಕಂಚನಹಳ್ಳಿ, ಮಾಲಾ ರಂಗಸ್ವಾಮಿ, ರಾಧಾಮಣಿ ಎಂ.ವಿ. (ಹಿಂದಿನ ಸಾಲಿನಲ್ಲಿ ಕುಳಿತವರು ಎಡದಿಂದ) ಪಲ್ಲವಿ ಗೋಪಿನಾಥ್, ಮಂಜಮ್ಮ ಎಸ್.ಬಾಲಯ್ಯ, ನಹಿದಾ ಜಮ ಜಮ್, ಎಲ್‌.ವೈ.ರಾಜೇಶ್, ರಂಜನಿ ರಾಘವನ್, ಎಚ್‌.ಸಿ.ಚಂದ್ರಶೇಖರ್, ಮುರಳಿ ಮೋಹನ್, (ಮುಂದಿನ ಸಾಲಿನಲ್ಲಿ ಕುಳಿತವರು) ಕೆ.ವಿ.ಗುರುರಾಜ್, ದಾದಾಪೀರ್ ಜೈಮನ್, ರಂಗಸ್ವಾಮಿ ಸಿ. ಅರುಣ್‌ಕುಮಾರ್, ಮಂಸೋರೆ, ಶಿವಲಿಂಗಶೆಟ್ಟಿ, (ಮುಂದಿನ ಸಾಲಿನಲ್ಲಿ ಒಬ್ಬರೇ ಕುಳಿತವರು) ಒ.ಸಿ.ಅನುಷಾ    –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಪ್ರಜಾವಾಣಿ ಸಾಧಕರು-–2023' ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. (ನಿಂತವರಲ್ಲಿ ಎಡದಿಂದ) ರೂಮಿ ಹರೀಶ್, ಬಿ.ಎನ್. ವಿಸ್ಮಯಾ, ಪ್ರಾರ್ಥನಾ ಭಟ್, ಸಿ.ಎಸ್‌. ಷಡಾಕ್ಷರಿ, ಟಿ.ಎನ್. ಸೀತಾರಾಂ, ರವೀಂದ್ರ ಭಟ್ಟ, ಉಮಾಶಂಕರ್ ಅಪಾಲಿ, ಅನೀಶ್‌ ಗೌಡ, ರವಿಕುಮಾರ್ ಕಂಚನಹಳ್ಳಿ, ಮಾಲಾ ರಂಗಸ್ವಾಮಿ, ರಾಧಾಮಣಿ ಎಂ.ವಿ. (ಹಿಂದಿನ ಸಾಲಿನಲ್ಲಿ ಕುಳಿತವರು ಎಡದಿಂದ) ಪಲ್ಲವಿ ಗೋಪಿನಾಥ್, ಮಂಜಮ್ಮ ಎಸ್.ಬಾಲಯ್ಯ, ನಹಿದಾ ಜಮ ಜಮ್, ಎಲ್‌.ವೈ.ರಾಜೇಶ್, ರಂಜನಿ ರಾಘವನ್, ಎಚ್‌.ಸಿ.ಚಂದ್ರಶೇಖರ್, ಮುರಳಿ ಮೋಹನ್, (ಮುಂದಿನ ಸಾಲಿನಲ್ಲಿ ಕುಳಿತವರು) ಕೆ.ವಿ.ಗುರುರಾಜ್, ದಾದಾಪೀರ್ ಜೈಮನ್, ರಂಗಸ್ವಾಮಿ ಸಿ. ಅರುಣ್‌ಕುಮಾರ್, ಮಂಸೋರೆ, ಶಿವಲಿಂಗಶೆಟ್ಟಿ, (ಮುಂದಿನ ಸಾಲಿನಲ್ಲಿ ಒಬ್ಬರೇ ಕುಳಿತವರು) ಒ.ಸಿ.ಅನುಷಾ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಲ್ಲಿ ಸೇರಿದ್ದವರ ಮೊಗದಲ್ಲಿ ಹೊಸ ಉಲ್ಲಾಸ, ಹೃದಯದಲ್ಲಿ ಧನ್ಯತಾ ಭಾವ ಮೂಡಿತ್ತು. ಎಲೆಮರೆ ಕಾಯಿಯಾಗಿ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿರುವ ಸಾಧಕರು ಸ್ಫೂರ್ತಿಯ ಚಿಲುಮೆಯಾಗಿದ್ದರು.

ಕ್ರೀಡೆ, ಆಡಳಿತ, ನವೋದ್ಯಮ, ಸಮಾಜ ಸೇವೆ, ವಿಜ್ಞಾನ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ತಮ್ಮನ್ನು ಗುರುತಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿ
ದರು.

ನಗರದ ಕಬ್ಬನ್ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶಿಷ್ಟ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದಿರುವ 23 ಮಂದಿಗೆ ‘ಪ್ರಜಾವಾಣಿ ಸಾಧಕರು–2023’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ADVERTISEMENT

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಮೈಸೂರು ಸ್ಯಾಂಡಲ್), ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ ಇವರ ಮಾತುಗಳು ಸಹ ಸ್ಫೂರ್ತಿಯ ಸೆಲೆಯಾಗಿದ್ದವು.

ಬೆನ್ನುಹುರಿ ಸಮಸ್ಯೆ ಮೀರಿಯೂ ಶಿಕ್ಷಣ–ಕ್ರೀಡಾಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಒ.ಸಿ. ಅನುಷಾ ವ್ಹೀಲ್‌ ಚೇರ್‌ನಲ್ಲಿ ಬಂದಿದ್ದರು. ಪ್ಯಾರಾ ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ಅನುಷಾ ಅವರನ್ನು ಗಣ್ಯರು ವೇದಿಕೆಯಿಂದ ಕೆಳಗಿಳಿದು ಬಂದು ಗೌರವಿಸಿದರು. ಸಭಿಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ, ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶಕ ಟಿ.ಎನ್. ಸೀತಾರಾಂ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್‌ ಅಪಾಲಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಸಾಧಕರನ್ನು ಗೌರವಿಸಿದರು.

‘ಸ್ಫೂರ್ತಿ ಮೂಡಿಸಿದ ಸಾಧಕರ ಸಾಧನೆ’

‘ಪ್ರಜಾವಾಣಿ ಗುರುತಿಸಿರುವ ಎಲ್ಲ ಸಾಧಕರ ಸಾಧನೆ ದೊಡ್ಡದು. ಇವರು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇನ್ನೊಬ್ಬರಿಗೂ ಬೆಳಕಾಗಿದ್ದಾರೆ’ ಎಂದು ಧಾರಾವಾಹಿ ಹಾಗೂ ಸಿನಿಮಾ ನಿರ್ದೇಶಕ ಟಿ.ಎನ್. ಸೀತಾರಾಂ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಪರೂಪದ ಸಾಧನೆಯನ್ನು ಈ ಸಾಧಕರು ಮಾಡಿದ್ದಾರೆ. ಬದುಕಿನಲ್ಲಿ ಎಂತಹ ಕಷ್ಟಗಳು ಬಂದರೂ ನಾವು ಅಧೀರರಾಗಬಾರದು ಮತ್ತು ಧೈರ್ಯದಿಂದ ಸವಾಲುಗಳನ್ನು ಎದುರಿಸಬೇಕು ಎನ್ನುವುದನ್ನು ಈ ಸಾಧಕರು ತೋರಿಸಿಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

‘ಕರ್ನಾಟಕದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಇದೆ. ಸಿನಿಮಾ ನಿರ್ದೇಶಕ ಮಂಸೋರೆ ಅಂತಹವರು ಕನ್ನಡಕ್ಕಾಗಿಯೂ ಹೋರಾಟ ನಡೆಸುತ್ತಿದ್ದಾರೆ. ವಿಭಿನ್ನ ಚಲನಚಿತ್ರಗಳ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಹೊಸತನ ಮೂಡಿಸಿರುವ ಮಂಸೋರೆ ಅವರು ಚಿಕ್ಕವರಾದರೂ ನನ್ನ ಗುರು’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಪ್ರಜಾವಾಣಿ ಜತೆಗಿನ ನನ್ನ ನಂಟು ಹಳೆಯದು. ಪ್ರಜಾವಾಣಿ ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ನನಗೆ ಮತ್ತು ಲಂಕೇಶ್‌ ಅವರಿಗೆ ಬಹುಮಾನ ದೊರೆತಿತ್ತು’ ಎಂದು ನೆನಪಿಸಿಕೊಂಡರು.

‘ಮಹಿಳೆಯರನ್ನು ಗೌರವಿಸುವುದು ಧರ್ಮ’

‘ದೇಶದಲ್ಲಿ ಪುರಷರಿಗೆ ಸರಿಸಮಾನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಅವರನ್ನು ಗೌರವಿಸಬೇಕಾದದ್ದು ನಮ್ಮ ಧರ್ಮ. ಪ್ರಧಾನಿ ನರೇಂದ್ರ ಮೋದಿ ಅವರು ಜನಸಂಖ್ಯೆಯನ್ನು ವರವಾಗಿ ತೆಗೆದುಕೊಂಡಿದ್ದಾರೆ. ಅವರು ದುಡಿಯುವ ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣ ಸಾಕಾರಗೊಳಿಸಲು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತರಾಗದೆ, ಹೊರ ಪ್ರಪಂಚಕ್ಕೆ ಬಂದು ಸಾಧನೆ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮಲ್ಲಿ ಕ್ರೀಡೆ, ಸಂಗೀತ, ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿದ್ದಾರೆ. ಅವರನ್ನು ಗುರುತಿಸಿ, ಗೌರವಿಸಬೇಕು. ‘ಪ್ರಜಾವಾಣಿ’ಯು ಅಂತಹ ಉತ್ತಮ ಕೆಲಸ ಮಾಡುತ್ತಿದೆ. ಇಂತಹ ಕಾರ್ಯಕ್ಕೆ ಸದಾ ನಮ್ಮ ಸಹಕಾರ ಇರಲಿದೆ’ ಎಂದು ಹೇಳಿದರು.

‘ಉತ್ತಮ ಕಥೆ ಇದ್ದರೆ ಸಿನಿಮಾ’

‘ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ವಿಭಿನ್ನ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದಾರೆ. ಅವರು ಅಚ್ಚುಮೆಚ್ಚಿನ ನಿರ್ದೇಶಕರಾಗಿದ್ದು, ಅವರ ನಿರ್ದೇಶನದ ಧಾರಾವಾಹಿಗಳನ್ನು ನೋಡುತ್ತಾ ಬಂದಿದ್ದೇನೆ. ಅವರ ಧಾರಾವಾಹಿಯಲ್ಲಿ ಗಟ್ಟಿಯಾದ ವಸ್ತುವಿಷಯ ಇರುತ್ತದೆ. ಹೀಗಾಗಿ, ಅವರ ಜತೆಗೆ ಚಲನಚಿತ್ರ ಮಾಡುವ ಬಗ್ಗೆ ಮಾತಾಡಿದ್ದು, ನಾನು ನಿರ್ಮಾಣ ಮಾಡುವುದಾಗಿ ಹೇಳಿದ್ದೇನೆ. ‘ಕಾಂತಾರ’ ಚಿತ್ರದ ರೀತಿಯ ಕಥೆಯನ್ನು ಮಾಡಿಕೊಂಡು ಬರುವಂತೆ ತಿಳಿಸಿದ್ದೇನೆ. ಅವರು ಆ ರೀತಿಯ ಕಥೆ ಮಾಡಿಕೊಂಡು ಬಂದಲ್ಲಿ ಖಂಡಿತವಾಗಿಯೂ ಚಲನಚಿತ್ರ ಮಾಡುತ್ತೇನೆ’ ಎಂದು ಕೆ. ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ನಿರ್ದೇಶಕ ಮಂಸೋರೆ ಅವರನ್ನು ಸನ್ಮಾನಿಸಲಾಯಿತು. ಧಾರಾವಾಹಿ ನಿರ್ದೇಶಕ ಟಿ.ಎನ್‌. ಸೀತಾರಾಂ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕೆಎಸ್‌ಡಿಎಲ್‌ ಅಧ್ಯಕ್ಷ ಮತ್ತು ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಕೆಎಸ್‌ಡಿಎಲ್ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್ ಅಪಾಲಿ ಇದ್ದರು



ಸಾಧಕರ ಪ್ರತಿಕ್ರಿಯೆಗಳು:

ನನ್ನ ಚಿಂತನೆಗಳನ್ನು ತಿದ್ದಿ ತೀಡಿದ್ದರಲ್ಲಿ ‘ಪ್ರಜಾವಾಣಿ’ಯ ಪಾಲು ದೊಡ್ಡದಿದೆ. ನನ್ನ ಮೊದಲ ಸಿನಿಮಾ ‘ಹರಿವು’ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಆಶಾ ಬೆನಕಪ್ಪ ಅವರ ಅಂಕಣ ಬರಹದ ಪ್ರಸಂಗವನ್ನು ಆಧರಿಸಿತ್ತು. ಇದು ನನಗೆ ಸಿನಿಮಾ ಮಾಡಲು ಮತ್ತಷ್ಟು ಪ್ರೋತ್ಸಾಹ ಒದಗಿಸಿತು. ಈಗ ನನ್ನನ್ನು ಗುರುತಿಸಿ, ಗೌರವಿಸಿರುವುದು ಸಂತೋಷವನ್ನುಂಟು ಮಾಡಿದೆ.

- ಮಂಸೋರೆ,‌ ಸಿನಿಮಾ ನಿರ್ದೇಶಕ

****

ಚಿಕ್ಕವನಿಂದಲೂ ಮುಂಜಾನೆ ಚಹಾದ ಜತೆಗೆ ಪತ್ರಿಕೆ ಓದುವ ಹವ್ಯಾಸವಿದೆ. ಈಗಿನ ತಲೆಮಾರಿನವರಲ್ಲಿ ಈ ಹವ್ಯಾಸ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ. ಇವತ್ತು ಪ್ರಶಸ್ತಿ ತೆಗೆದುಕೊಳ್ಳಲು ಅರ್ಜಿ ಹಾಕಿ, ಅದರ ಹಿಂದೆ ಬೀಳಬೇಕಾದ ಪರಿಸ್ಥಿತಿಯಿದೆ. ಆದರೆ, ನಮಗೇ ಗೊತ್ತಿಲ್ಲದ ಹಾಗೆ ಗುರುತಿಸಿ, ಗೌರವಿಸುತ್ತಿರುವುದು ಸಂತಸದ ಸಂಗತಿ.

- ಎಲ್.ವೈ. ರಾಜೇಶ್, ಇನ್‌ಸ್ಪೆಕ್ಟರ್

****

ಕನ್ನಡ ಪತ್ರಿಕೆಗಳನ್ನು ಓದಬೇಕು ಎಂಬ ಪದ್ಧತಿ ನಮ್ಮ ಶಾಲೆಯಲ್ಲಿತ್ತು. ‘ಪ್ರಜಾವಾಣಿ’ ಪತ್ರಿಕೆಯನ್ನು ಗ್ರಂಥಪಾಲಕರು ಓದಿಸುತ್ತಿದ್ದರು. ಇದರಿಂದ ನನ್ನ ಭಾಷೆ ಸ್ಪಷ್ಟವಾಗಿದೆ. ‘ಕನ್ನಡತಿ’ ಧಾರಾವಾಹಿ ಆಯ್ಕೆಗೆ ಹಾಗೂ ಕಥೆಗಳನ್ನು ಬರೆಯಲು ಈ ಭಾಷಾ ಸ್ಪಷ್ಟತೆ ಕಾರಣವಾಗಿರಬಹುದು. ಕನ್ನಡ ಅಕ್ಷರಗಳು ನನ್ನ ಜೀವನದ ಜತೆಗೆ ಹಾಸುಹೊಕ್ಕಾಗಿ ಬಂದಿವೆ.

-ರಂಜನಿ ರಾಘವನ್, ಕಿರುತೆರೆ ನಟಿ

****

ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಹೆಣ್ಣಾಗಿ ಹುಟ್ಟಿ, ಗಂಡಾಗಿ ಪರಿವರ್ತಿತರಾದವರನ್ನೂ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾಜದಲ್ಲಿ ಹಲವು ಸವಾಲುಗಳಿವೆ. ನಾನು ಹೆಣ್ಣಾಗಿ ಹುಟ್ಟಿ, ಗಂಡಾಗಿ ಪರಿವರ್ತನೆ ಯಾಗಿರುವುದರ ಬಗ್ಗೆ ಗರ್ವವಿದೆ. ನಾನು ಬರವಣಿಗೆಗೆ ತೊಡಗಿಕೊಳ್ಳಲು ‘ಪ್ರಜಾವಾಣಿ’ ಸಹಕಾರಿಯಾಗಿದ್ದು, ಭಾಷೆ ಬಳಕೆಯಿಂದಲೂ ಪತ್ರಿಕೆ ಆಪ್ತವಾಗಿದೆ.

- ರೂಮಿ ಹರೀಶ್, ಸಂಗೀತಗಾರ

****

ಸನ್ಮಾನಿತ ಸಾಧಕರು

ಬೆಂಗಳೂರಿನ ಮಂಸೋರೆ (ಸಿನಿಮಾ), ಬಿ.ಎನ್. ವಿಸ್ಮಯಾ, ಪಲ್ಲವಿ ಗೋಪಿನಾಥ್, ಪ್ರಾರ್ಥನಾ ಭಟ್ (ನವೋದ್ಯಮ), ಮಾಲಾ ರಂಗಸ್ವಾಮಿ (ಕ್ರೀಡೆ), ಒ.ಸಿ. ಅನುಷಾ (ಕ್ರೀಡೆ), ಎಲ್‌.ವೈ. ರಾಜೇಶ್ (ಸಮಾಜಸೇವೆ), ಕೆ.ವಿ.ಗುರುರಾಜ್‌ (ವಿಜ್ಞಾನ), ರೂಮಿ ಹರೀಶ್ (ಸಾಮಾಜಿಕ ಹೋರಾಟ), ರಂಜನಿ ರಾಘವನ್ (ಕಿರುತೆರೆ), ದಾದಾಪೀರ್ ಜೈಮನ್ (ಸಾಹಿತ್ಯ), ಅನೀಶ್ ಗೌಡ (ಕ್ರೀಡೆ), ಕೀರ್ತಿ ರಂಗಸ್ವಾಮಿ ಸಿ. (ಕ್ರೀಡೆ) ಹಾಗೂ ಮುರಳಿ ಮೋಹನ್ (ಉದ್ಯಮ) ಅವರನ್ನು ಸನ್ಮಾನಿಸಲಾಯಿತು.

ತುಮಕೂರಿನ ನಹಿದಾ ಜಮ ಜಮ್ (ಆಡಳಿತ), ಮಂಜಮ್ಮ ಎಸ್. ಬಾಲಯ್ಯ (ಮಹಿಳಾ ಸಬಲೀಕರಣ), ಕೋಲಾರದ ರಾಧಾಮಣಿ ಎಂ.ವಿ. (ಸಮಾಜಸೇವೆ), ಬೆಂಗಳೂರು ಗ್ರಾಮಾಂತರದ ಅರುಣ್‌ ಕುಮಾರ್ (ಕಲೆ), ರಾಮನಗರದ ಎಚ್‌.ಸಿ. ಚಂದ್ರಶೇಖರ್ (ಪರಿಸರ ಸಂರಕ್ಷಣೆ), ಶಿವಲಿಂಗ ಶೆಟ್ಟಿ (ಸಮಾಜಸೇವೆ) ಹಾಗೂ ರವಿಕುಮಾರ್ ಕಂಚನಹಳ್ಳಿ (ಮಾಹಿತಿಹಕ್ಕು ಹೋರಾಟ) ಅವರನ್ನು ಗೌರವಿಸಲಾಯಿತು.

ಸಾಧನೆಯ ಹಾದಿಯಲ್ಲಿ ‘ಕೆಎಸ್‌ಡಿಎಲ್‌’

‘ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಈಗ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಈ ವರ್ಷ ₹170 ಕೋಟಿ ನಿವ್ವಳ ಲಾಭವಾಗಲಿದೆ’ ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ಉಮಾಶಂಕರ್‌ ಅಪಾಲಿ ಹೇಳಿದರು.

‘ಕೇವಲ ಒಂಬತ್ತು ತಿಂಗಳಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸಿದೆ. ಈಗಾಗಲೇ ಜನವರಿ ತಿಂಗಳ ಹೊತ್ತಿಗೆ ₹1,140 ಕೋಟಿ ವಹಿವಾಟು ನಡೆಸಿದ್ದು, ಮಾರ್ಚ್‌ 31ರ ವೇಳೆಗೆ ₹1,350 ಕೋಟಿಗೆ ತಲುಪಲಿದೆ’ ಎಂದು ಸಂಸ್ಥೆಯ ಸಾಧನೆಯನ್ನು ಬಿಚ್ಚಿಟ್ಟರು. ಸಾಧಕರ ಕೆಲಸಗಳನ್ನು ಶ್ಲಾಘಿಸಿದರು.

‘ಸಾಧಕರನ್ನು ಗುರುತಿಸುವುದು ಸವಾಲು’

‘ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಾಗಿ ಶಿಫಾರಸು ಮಾಡುವಂತೆ ಕೆಲವರು ದುಂಬಾಲು ಬೀಳುತ್ತಾರೆ. ಇಂತಹ ಅವಧಿಯಲ್ಲಿ ಎಲ್ಲ ಕ್ಷೇತ್ರದ ತೆರೆಮರೆಯ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವುದು ಉತ್ತಮ ಕೆಲಸ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳನ್ನೂ ಗುರುತಿಸಲಾಗಿದೆ. ಇದು ಶ್ಲಾಘನೀಯ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಶಸ್ತಿಗೆ ಸಾಧಕರನ್ನು ಗುರುತಿಸುವುದು ದೊಡ್ಡ ಸವಾಲು. ‘ಪ್ರಜಾವಾಣಿ’ ಯಲ್ಲಿ ಯಾವುದೇ ಆಮಿಷಗಳಿಗೆ ಅವಕಾಶವಿಲ್ಲ. ಎಲ್ಲಿಯೂ ಒಪ್ಪಂದ ಮಾಡಿ ಕೊಳ್ಳದೆ, ವಸ್ತುನಿಷ್ಠ ವರದಿಯನ್ನು ಪತ್ರಿಕೆ ಪ್ರಕಟಿಸುತ್ತಿದೆ. ವಾಸ್ತವದ
ನೆಲೆಗಟ್ಟಿನಲ್ಲಿ ವಿಷಯವನ್ನು ತಿಳಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.