ADVERTISEMENT

'ಸುಳ್ಳು‌ ಸುದ್ದಿಗಾಗಿ ವಾಕ್ ಸ್ವಾತಂತ್ರ್ಯವಿಲ್ಲ'

ಸಂಪಾದಕರೊಂದಿಗೆ ಸಂವಾದದಲ್ಲಿ ಪ್ರಜಾವಾಣಿ‌ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 9:12 IST
Last Updated 9 ಜನವರಿ 2021, 9:12 IST
   

ಬಳ್ಳಾರಿ:‘ವಾಕ್ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಬಿತ್ತರಿಸುವ, ಸುದ್ದಿಯನ್ನು ತಿರುಚುವ ಮಾಧ್ಯಮಗಳನ್ನು ಓದುಗರು, ವೀಕ್ಷಕರರು ತಿರಸ್ಕರಿಸಿ ಪಾಠ ಕಲಿಸಬೇಕು’ಎಂದು ಪ್ರಜಾವಾಣಿ‌ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪ್ರತಿಪಾದಿಸಿದರು.

ನಗರದಲ್ಲಿ ಶನಿವಾರ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಏರ್ಪಡಿಸಿದ್ದ ‘ಸಂಪಾದಕರೊಂದಿಗೆ ಸಂವಾದ’ದಲ್ಲಿ ಮಾತನಾಡಿದ ಅವರು, ‘ಮಾಧ್ಯಮಗಳಿಗಾಗಿಯೇ ವಿಶೇಷ ಕಾಯ್ದೆಗಳಿಲ್ಲ. ಸಾಮಾನ್ಯ ಜನರಿಗೆ ಇರುವ ವಾಕ್ ಸ್ವಾತಂತ್ರ್ಯವೇ ಪತ್ರಕರ್ತರಿಗೂ ಇದೆಯಷ್ಟೇ. ಆ ಪರಿಮಿತಿಯನ್ನು ಎಲ್ಲ ಮಾಧ್ಯಮಗಳು ಅರಿತು ಮುನ್ನಡೆಯಬೇಕು’ಎಂದರು.

‘ಸುದ್ದಿ ಮಹತ್ವವನ್ನು‌ ಗ್ರಹಿಸಲು ಇತಿಹಾಸ ಗೊತ್ತಿರಲೇಬೇಕು.‌ ಅದನ್ನು‌ ಸರಿಯಾಗಿ ಬರೆಯಲು ಭಾಷೆ ಗೊತ್ತಿರಬೇಕು. ಇತಿಹಾಸದೊಂದಿಗೆ, ಹೋರಾಟಗಳು, ಸಾಹಿತ್ಯ, ಸಂಸ್ಕೃತಿಗಳ ಅರಿವಿರಬೇಕು. ಇಂದು ಕನ್ನಡದಲ್ಲಿ ಸರಿಯಾಗಿ ಬರೆಯಬಲ್ಲ, ಮಾತನಾಡಬಲ್ಲ ಯುವ ಪತ್ರಕರ್ತರ ಸಂಖ್ಯೆ ಕಡಿಮೆ ಇದೆ’ಎಂದು ವಿಷಾದಿಸಿದರು.

ADVERTISEMENT

‘ಬಡವರು, ಸಂತ್ರಸ್ತರ ಪರವಿದ್ದರೆ ಮಾತ್ರ ಮಾಧ್ಯಮಗಳ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಓದುಗರನ್ನು ತೃಪ್ತಿಪಡಿಸುವುದು ಹೇಗೆ ಎಂದು‌ ಕಂಡುಕೊಳ್ಳುವುದೇ ಮಾಧ್ಯಮಗಳ ಮುಂದೆ ಸದ್ಯ ಇರುವ ದೊಡ್ಡ ಸವಾಲು. ಈ ಸವಾಲಿನ ಜೊತೆಗೆ ಮಾಧ್ಯಮ ಕ್ಷೇತ್ರದಲ್ಲೂ ಅಂಗವೈಕಲ್ಯ‌ ಹೆಚ್ಚಾಗಿದೆ’ಎಂದರು.

‘ಭಾಷೆಯೊಂದರ ಕಲಿಕೆಗೂ, ಭಾಷಾ ಮಾಧ್ಯಮದ ಮೂಲಕ ಶಿಕ್ಷಣ ಪಡೆಯುವುದಕ್ಕೂ ವ್ಯತ್ಯಾಸವಿದೆ. ಮಾತೃಭಾಷೆಯಲ್ಲಿ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ’ಎಂದು ಹೇಳಿದರು.

ಸಂವಾದಕ್ಕೆ ಚಾಲನೆ ನೀಡಿದ‌ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ‘ಕನ್ನಡ ಮತ್ತು‌ ಕರ್ನಾಟಕದ ಪ್ರತೀಕವಾಗಿ ಮಾಧ್ಯಮ ಲೋಕದಲ್ಲಿ ಪ್ರಜಾವಾಣಿ ವಿಶ್ವಾಸಾರ್ಹ ಪತ್ರಿಕೆಯಾಗಿ‌ ಪರಿಶ್ರಮ ಮೆರೆದಿದೆ’ಎಂದರು.

‘ನಿಷ್ಪಕ್ಷಪಾತವಾದ ಸಂಪಾದಕೀಯ,‌ ವೈವಿಧ್ಯಮಯವಾದ, ಜನಪರ ಸುದ್ದಿಗಳ ಆಯ್ಕೆ, ವಿಶ್ಲೇಷಣೆ ಲೇಖನಗಳಲ್ಲಿ ಓದುಗ ಸ್ನೇಹಿಯಾದ ವೃತ್ತಿಪರತೆಯನ್ನು ಎಂದಿಗೂ‌ ಬಿಟ್ಟುಕೊಡದ ಪತ್ರಿಕೆ‌ ಪ್ರಜಾವಾಣಿ’ ಎಂದರು.

‘ಸಮಸ್ಯೆಗಳ ಕುರಿತು ಮಾಧ್ಯಮಗಳು ವರದಿ ಪ್ರಕಟಿಸಲಿ ಎಂದು ಕಾಯುವ‌ ಬದಲು ಪರಿಹಾರಕ್ಕಾಗಿ ಆಗ್ರಹಿಸಿ ಯುವಜನರು ಹೋರಾಟ ನಡೆಸಬೇಕು’ಎಂದರು.

ಎಸ್ಎಸ್ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಎಐಡಿಎಸ್ಒ, ಎಐಎಂಎಸ್ ಎಸ್, ತುಂಗಭದ್ರ ರೈತ ಸಂಘ, ಚಾಗನೂರು ಸಿರಿವಾರ ಭೂಸಂರಕ್ಷಣಾ ಹೋರಾಟ ಸಮಿತಿ ಮುಖಂಡರು ಸಂವಾದದಲ್ಲಿ‌ ಪಾಲ್ಗೊಂಡಿದ್ದರು.

ಗುರುತಿಪ್ಪೇರುದ್ರ ಕಾಲೇಜಿನ ಅಧ್ಯಕ್ಷ ಎಸ್.ಎನ್.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಗರಾಜ್, ಪ್ರಕಾಶನದ ಸಿರಿಗೇರಿ ಯರ್ರಿಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.