
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ವಿವಿಧ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ನಗದು ಬಹುಮಾನವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಹಾಸನ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಸಮರ್ಥವಾಗಿ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿದೆ. ಆ ತಂಡಕ್ಕೆ ಒಟ್ಟಾರೇ ₹35 ಲಕ್ಷ ನಗದು ಬಹುಮಾನವನ್ನು ಗೃಹ ಇಲಾಖೆ ಮಂಜೂರು ಮಾಡಿದೆ. ಪ್ರಕರಣದ ಅಪರಾಧಿ ಆಗಿರುವ ಪ್ರಜ್ವಲ್ ರೇವಣ್ಣ ಆಜೀವ ಶಿಕ್ಷೆಗೆ ಗುರಿಯಾಗಿದ್ದಾನೆ.
ಹಾಸನದ ಫಾರ್ಮ್ ಹೌಸ್ ಮತ್ತು ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ನಿವಾಸದಲ್ಲಿ ಬಲವಂತವಾಗಿ ಪ್ರಜ್ವಲ್ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ ಎಂದು ಸಂತ್ರಸ್ತೆ ದೂರು ನೀಡಿದ್ದರು. ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀರಪುರ ಹಾಗೂ ಸಿಐಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವು ಎಸ್ಐಟಿ ರಚಿಸಿತ್ತು. ತನಿಖಾ ತಂಡವು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ದೋಷಾರೋಪಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಜೀವ ಶಿಕ್ಷೆ ಹಾಗೂ ₹11.60 ಲಕ್ಷ ದಂಡ ವಿಧಿಸಿತ್ತು.
ಇತರೆ ಬಹುಮಾನಗಳು: ಡಿಜಿ ಮತ್ತು ಐಜಿಪಿ ದರ್ಜೆಯ ಅಧಿಕಾರಿಗಳಿಗೆ ತಲಾ ₹ 20 ಸಾವಿರದಂತೆ ಒಟ್ಟು ₹25 ಲಕ್ಷ, ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ ಅಧಿಕಾರಿಗಳಿಗೆ ತಲಾ ₹8 ಸಾವಿರದಂತೆ ಒಟ್ಟು 3 ಲಕ್ಷ, ಇಲಾಖೆಯ ಇತರೆ ಅಧಿಕಾರಿ – ಸಿಬ್ಬಂದಿಗೆ ತಲಾ ₹5 ಸಾವಿರದಂತೆ ಒಟ್ಟು ₹2 ಲಕ್ಷ, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಲಾ ₹5 ಸಾವಿರದಂತೆ ಒಟ್ಟು 1 ಲಕ್ಷ ನಗದನ್ನು ಗೃಹ ಇಲಾಖೆ ಮಂಜೂರು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.