ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ ಪ್ರಕಟಿಸಿದೆ.
ಯಾವುದೀ ಪ್ರಕರಣ?:
ಲೋಕಸಭೆಗೆ 2024ರ ಏಪ್ರಿಲ್‌ನಿಂದ ಜೂನ್ ಮಧ್ಯಭಾಗದಲ್ಲಿ ವಿವಿಧ ಹಂತಗಳಲ್ಲಿ ನಡೆದ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಈ ವೇಳೆ ಸಂಸದನಾಗಿದ್ದ ಪ್ರಜ್ವಲ್‌ನದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಹಲವು ವಿಡಿಯೊಗಳು ಹಾಗೂ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದವು. ಈ ವಿಡಿಯೊಗಳ ಪೈಕಿ 48 ವರ್ಷದ ಸಂತ್ರಸ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿಡಿಯೊ ಕೂಡಾ ಬಿತ್ತರಗೊಂಡಿತ್ತು.
ಪ್ರಜ್ವಲ್ ಸ್ವಯಂ ಚಿತ್ರೀಕರಿಸಿದ್ದ ಎನ್ನಲಾದ ಹತ್ತಾರು ಅಶ್ಲೀಲ ವಿಡಿಯೊಗಳು ವ್ಯಾಪಕವಾಗಿ ಬಿತ್ತರಗೊಂಡು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ ಹಾಲಿ ಪ್ರಕರಣದ ಸಂತ್ರಸ್ತೆ, ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು. ಈ ವೇಳೆ ಸಂತ್ರಸ್ತೆಯ ಪುತ್ರ 2024ರ ಮೇ 2ರಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ, ಪ್ರಜ್ವಲ್ ತಂದೆಯೂ ಆಗಿರುವ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಬಂಧಿ ಸತೀಶ್ ಬಾಬಣ್ಣ ವಿರುದ್ಧ ‘ನನ್ನ ತಾಯಿಯ ಅಪಹರಣ ಮಾಡಲಾಗಿದೆ’ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಕ್ರಿಮಿನಲ್ ದೂರು ದಾಖಲಿಸಿಕೊಂಡು ಪ್ರಕರಣವನ್ನು ಭೇದಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ಸಂತ್ರಸ್ತೆಯು ತೋಟದ ಮನೆಯೊಂದರಲ್ಲಿ ಇದ್ದ ಜಾಡನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಸಂತ್ರಸ್ತೆಯು, ‘ಪ್ರಜ್ವಲ್ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಅತ್ಯಾಚಾರ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
ಈ ಸಂಬಂಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 376(2)(ಕೆ), 376(2) (ಎನ್), 354(ಎ)(ಬಿ)(ಸಿ), 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಇ) ಅಡಿ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ಸಕ್ಷಮ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 164ರ ಅಡಿ ಹೇಳಿಕೆ ದಾಖಲು ಮಾಡಿಸಲಾಗಿತ್ತು.
ಅಂದಿನಿಂದ ಇಂದಿನವರೆಗೆ ಏನೇನಾಯ್ತು?
ಏಪ್ರಿಲ್ 2024: ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ವಿಡಿಯೊಗಳಿರುವ ಪೆನ್ ಡ್ರೈವ್ ಹಾಸನದ ತುಂಬೆಲ್ಲಾ ಹರಿದಾಡಿತು
20ನೇ ಏಪ್ರಿಲ್ 2024: ಚುನಾವಣೆ ಸಂದರ್ಭದಲ್ಲೇ ಪ್ರಜ್ವಲ್ ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಲು ಪೆನ್ ಡ್ರೈವ್ ಹಂಚಲಾಗುತ್ತಿದೆ ಎಂದು ಆರೋಪಿಸಿ ಚುನಾವಣಾ ಏಜೆಂಟ್ ಒಬ್ಬರು ಎಫ್‌ಐಆರ್ ದಾಖಲಿಸಿದ್ದರು
26ನೇ ಏಪ್ರಿಲ್ 2024: ಲೋಕಸಭಾ ಚುಣಾವಣೆ ಪೂರ್ಣಗೊಂಡ ಬಳಿಕ, ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಪ್ರಜ್ವಲ್ ವಿದೇಶ ಪ್ರಯಾಣ
27ನೇ ಏಪ್ರಿಲ್ 2024: ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ ರಾಜ್ಯ ಸರ್ಕಾರ
30ನೇ ಏಪ್ರಿಲ್ 2024: ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಜೆಡಿಎಸ್
2ನೇ ಮೇ 2024: ಪ್ರಜ್ವಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು ದಾಖಲು. ರೇವಣ್ಣ ಹೆಸರು ಉಲ್ಲೇಖ.
3ನೇ ಮೇ 2024: ಅಪಹರಣಕ್ಕೊಳಗಾಗಿದ್ದ ದೂರರಾರರನ್ನು ಮೈಸೂರು ಬಳಿಯ ಫಾರ್ಮ್‌ಹೌಸ್ ಬಳಿ ರಕ್ಷಣೆ
4ನೇ ಮೇ 2024: ಅಪಹರಣ ಪ್ರಕರಣದಲ್ಲಿ ರೇವಣ್ಣ ಬಂಧನ
7ನೇ ಮೇ 2024: ಎಸ್‌ಐಟಿ ಎದುರು ಹಾಜರಾಗುವಂತೆ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ
31ನೇ ಮೇ 2024: ಭಾರತಕ್ಕೆ ಬಂದ ಪ್ರಜ್ವಲ್, ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಎಸ್‌ಐಟಿ ತಂಡದಿಂದ ಬಂಧನ
8ನೇ ಸೆಪ್ಟೆಂಬರ್ 2024: ಪ್ರಜ್ವಲ್ ವಿರುದ್ಧ ದೋಷಾರೋಪ ಸಲ್ಲಿಸಿದ ಎಸ್‌ಐಟಿ
2ನೇ ಮೇ 2025: ವಿಚಾರಣೆ ಆರಂಭಿಸಿದ ನ್ಯಾಯಾಲಯ
18ನೇ ಜುಲೈ 2025: ವಿಚಾರಣೆ ಪೂರ್ಣ
1ನೇ ಆಗಸ್ಟ್ 2025: ಪ್ರಜ್ವಲ್ ದೋಷಿ ಎಂದು ಸಾಬೀತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.