ADVERTISEMENT

ಪ್ರಜ್ವಲ್‌ಗೆ ಯುವ ಜೆಡಿಎಸ್‌ ಅಧ್ಯಕ್ಷ ಸ್ಥಾನ?

ಜೆಡಿಎಸ್‌ಗೆ ಸೋಲು: ಆತ್ಮಾವಲೋಕನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:30 IST
Last Updated 10 ಡಿಸೆಂಬರ್ 2019, 20:30 IST
   

ಬೆಂಗಳೂರು: ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಹೀನಾಯ ಸೋಲು ಉಂಟಾದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರ ಪದ್ಮನಾಭನಗರದ ಮನೆಯಲ್ಲಿ ಮಂಗಳವಾರ ಆತ್ಮಾವಲೋಕನ ಸಭೆ ನಡೆಯಿತು.

ಪಕ್ಷದ ಯುವ ಘಟಕಕ್ಕೆ ಪ್ರಜ್ವಲ್‌ ರೇವಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸುಳಿವು ಸಹಸಭೆಯಲ್ಲಿ ದೊರೆಯಿತು. ಸಭೆಗೂ ಮೊದಲಾಗಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ದೇವೇಗೌಡರೊಂದಿಗೆ ಸುಮಾರು ಅರ್ಧ ಗಂಟೆ ಸಮಾಲೋಚನೆ ನಡೆಸಿದರು.

ಬಳಿಕ ನಡೆದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಘಟಕದ ಅದ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಪಾಲ್ಗೊಂಡು ಪಕ್ಷದ ಭದ್ರ ಕೋಟೆಗಳೇ ಛಿದ್ರವಾದ ಕುರಿತು ಆತ್ಮಾವಲೋಕನ ನಡೆಸಿದರು ಎಂದು ಹೇಳಲಾಗಿದೆ.

ADVERTISEMENT

‘ನಮಗೆ 3ರಿಂದ 4 ಸ್ಥಾನ ಗೆಲ್ಲುವ ವಿಶ್ವಾಸ ಇತ್ತು. ಕೆ.ಆರ್‌.ಪೇಟೆಯಲ್ಲಿ ಅತಿಯಾದ ಆತ್ಮವಿಶ್ವಾಸವೇ ನಮ್ಮನ್ನು ಸೋಲಿನತ್ತ ಕೊಂಡೊಯ್ದಿರಬೇಕು, ಅಭ್ಯರ್ಥಿಯ ಆಯ್ಕೆ ವಿಚಾರವೂ ಅಲ್ಲಿ ಸೋಲಿಗೆ ಇನ್ನೊಂದು ಕಾರಣವಾಗಿರಬಹುದು’ ಎಂದು ಎಚ್‌.ಕೆ.ಕುಮಾರಸ್ವಾಮಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಸಂಸದ ಪ್ರಜ್ವಲ್‌ ಸಹ ಮನೆಗೆ ಬಂದರು. ‘ಕೆ.ಆರ್‌.‍ಪೇಟೆಯಲ್ಲಿ ಜೆಡಿಎಸ್‌ನ ಮತಗಳು ಎಲ್ಲೂ ಹೋಗಿಲ್ಲ, ಆದರೆ ಕಾಂಗ್ರೆಸ್‌ನ ಮತಗಳು ಬಿಜೆಪಿಗೆ ಹೋಗಿವೆ’ ಎಂದು ಪ್ರಜ್ವಲ್ ಅಭಿಪ್ರಾಯ ಪಟ್ಟರು. ‘ದೇವೇಗೌಡರು ವಹಿಸುವ ಯಾವುದೇ ಜವಾಬ್ದಾರಿಯನ್ನೂ ನಿಭಾ ಯಿಸಲು ನಾನು ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.