ADVERTISEMENT

ಉಪಸಭಾಪತಿಯಾಗಿ ಪ್ರಾಣೇಶ್ ಆಯ್ಕೆ; ಚರ್ಚೆಗೆ ಗ್ರಾಸವಾದ ಸಭಾಪತಿ ಜಾತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:00 IST
Last Updated 23 ಡಿಸೆಂಬರ್ 2022, 22:00 IST
ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಆಯ್ಕೆಯಾದ ಎಂ.ಕೆ. ಪ್ರಾಣೇಶ್ ಅವರಿಗೆ ಜೆಡಿಎಸ್ ಸದಸ್ಯ ಭೋಜೇಗೌಡ ಅಭಿನಂದಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಸದಸ್ಯ ಗೋವಿಂದರಾಜ್, ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮತ್ತು ಪ್ರಕಾಶ್ ರಾಥೋಡ್ ಇದ್ದಾರೆ.     –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಆಯ್ಕೆಯಾದ ಎಂ.ಕೆ. ಪ್ರಾಣೇಶ್ ಅವರಿಗೆ ಜೆಡಿಎಸ್ ಸದಸ್ಯ ಭೋಜೇಗೌಡ ಅಭಿನಂದಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಸದಸ್ಯ ಗೋವಿಂದರಾಜ್, ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮತ್ತು ಪ್ರಕಾಶ್ ರಾಥೋಡ್ ಇದ್ದಾರೆ. –ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಅವರು ಎರಡನೇ ಬಾರಿ ಆಯ್ಕೆಯಾದರು. ಶುಕ್ರವಾರ ನಡೆದ ಚುನಾವಣೆಯಲ್ಲಿ ಪ್ರಾಣೇಶ್ ಪರ 39 ಮತಗಳು ಮತ್ತು ವಿರುದ್ಧವಾಗಿ 26 ಮತಗಳು ಚಲಾಯಿಸಲ್ಪಟ್ಟವು.

ಜೆಡಿಎಸ್ ಸದಸ್ಯರು ತಟಸ್ಥರಾಗಿ ಉಳಿದರು. ಕಾಂಗ್ರೆಸ್ ಪಕ್ಷದಿಂದ ಅರವಿಂದ ಕುಮಾರ್ ಅರಳಿ ಅವರು ಸ್ಪರ್ಧಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು.

ಪ್ರಾಣೇಶ್‌ ಅವರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಜವಾಬ್ದಾರಿಯುತ ರಾಜಕಾರಣಿಯಾದ ಎಂ.ಕೆ. ಪ್ರಾಣೇಶ್ ಅವರಿಂದ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬೆಲೆ ಸಿಗಲಿದೆ’ ಎಂದು ಹೇಳಿದರು.

ADVERTISEMENT

‘ಕಳೆದ ಬಾರಿ ಉಪಸಭಾಪತಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಪ್ರಾಣೇಶ್ ಅವರು ತಮ್ಮ ಗಟ್ಟಿ ನಿಲುವನ್ನು ಹಲವಾರು ಬಾರಿ ಪ್ರದರ್ಶಿಸಿದ್ದಾರೆ. ಆ ನಿಲುವಿನಿಂದ ಇಡೀ ಸದನವನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ’ ಎಂದರು.

ಚರ್ಚೆಗೆ ಗ್ರಾಸವಾದ ಸಭಾಪತಿ ಜಾತಿ

ಬೆಳಗಾವಿ: ಉಪಸಭಾಪತಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರು ಕಾಂಗ್ರೆಸ್‌ ಧೋರಣೆಯನ್ನು ಪ್ರಶ್ನಿಸಿ, ಸಭಾಪತಿ ವಿರುದ್ಧ ಏಕೆ ಸ್ಪರ್ಧಿಸಲಿಲ್ಲ ಎಂದು ಕೇಳಿದ ಪ್ರಶ್ನೆ ಚರ್ಚೆಗೆ ಗ್ರಾಸ ಒದಗಿಸಿತು.

ಪ್ರಾಣೇಶ್‌ ಪರ ಸಲ್ಲಿಸಿದ್ದ ಐದು ಪ್ರಸ್ತಾವಗಳನ್ನು ಮತಕ್ಕೆ ಹಾಕುವ ಮುನ್ನ ಮಾತನಾಡಿದ ಭೋಜೇಗೌಡ ಅವರು, ‘ಎರಡು ರಾಷ್ಟ್ರೀಯ ಪಕ್ಷ ಗಳು ಸೌಜನ್ಯಕ್ಕೂ ಸಂಪರ್ಕಿಸಿಲ್ಲ. ಹೀಗಾಗಿ ನಾವು ತಟಸ್ಥರಾಗಿ ಉಳಿಯುತ್ತೇವೆ. ಸಭಾಪತಿ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಹೊರಟ್ಟಿ ಅವರು ಮೇಲ್ವರ್ಗಕ್ಕೆ ಸೇರಿದ್ದಾರೆ ಎನ್ನುವುದು ಮುಖ್ಯವಾಯಿತೇ? ಕಾಂಗ್ರೆಸ್‌ನ ದ್ವಿಮುಖ ನೀತಿ ಮತ್ತೊಮ್ಮೆ ಬಯಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಭಾಪತಿ ಹುದ್ದೆ ಘನತೆಯಿಂದ ಕೂಡಿದ್ದು, ಮೇಲ್ವರ್ಗ ಅಥವಾ ಕೆಳವರ್ಗ ಎನ್ನುವುದು ಸರಿ ಅಲ್ಲ. ಭೋಜೇಗೌಡ ಅವರ ಹೇಳಿಕೆ ಉತ್ತಮ ಅಭಿರುಚಿಯಿಂದ ಕೂಡಿಲ್ಲ‘ ಎಂದರು. ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿ, ‘ಭೋಜೇಗೌಡ ನನಗೆ ಜಾತಿ ಬಣ್ಣ ಹಚ್ಚಬೇಡ. ಸದಸ್ಯನಾಗಿದ್ದ ಸಂದರ್ಭದಲ್ಲಿ ಹಲವರು ನನ್ನನ್ನು ಒಕ್ಕಲಿಗ ಎಂದೇ ಭಾವಿಸಿದ್ದರು’ ಎಂದರು. ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ‘ಕಾಂಗ್ರೆಸ್‌ ಧರ್ಮ, ಜಾತಿ ಮೀರಿ ನಿರ್ಣಯ ಕೈಗೊಳ್ಳುತ್ತಿದೆ. ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ನಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸಬಾರದು ಎಂದು ಹೈಕಮಾಂಡ್‌ ಸೂಚಿಸಿತ್ತು. ಹೊರಟ್ಟಿ ಅವರ ಹಿರಿತನ, ವ್ಯಕ್ತಿತ್ವ ಪರಿಗಣಿಸಿ ಬೆಂಬಲಿಸಿದ್ದೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.