
ಕಡತ
(ಸಾಂದರ್ಭಿಕ ಚಿತ್ರ)
ಬೆಳಗಾವಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ 310 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ನೇರ ಪರೀಕ್ಷೆ ನಡೆಸಿದ ನಂತರ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, 256 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಜತೆಗೆ, ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಯಾವುದೇ ಪದವಿ ಕಾಲೇಜಿನಲ್ಲಿ 15 ವರ್ಷಗಳ ಬೋಧನಾನುಭವ ಹೊಂದಿರಬೇಕು. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಐದು ವರ್ಷಗಳ ನಂತರ ಪ್ರಾಂಶುಪಾಲರ ಸ್ಥಾನ ತ್ಯಜಿಸಿ, ಹಿಂದೆ ತಾವು ಕಾರ್ಯನಿರ್ವಹಿಸುತ್ತಿದ್ದ ಕರ್ತವ್ಯಕ್ಕೆ ಮರಳಬೇಕು ಎಂಬ ನಿಯಮ ರೂಪಿಸಲಾಗಿತ್ತು. ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸಿತ್ತು.
15 ವರ್ಷಗಳಿಂದ ಪ್ರಾಂಶುಪಾಲರ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗಳೇ ನಡೆದಿರಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ 2023ರ ಜುಲೈ 30ರಂದು ಪರೀಕ್ಷೆ ನಡೆಸಲಾಗಿತ್ತು.
‘ಎಂಜಿನಿಯರಿಂಗ್ ಸೇರಿದಂತೆ ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪೂರ್ಣಕಾಲಿಕ ಬೋಧಕರಾಗಿ ಕೆಲಸ ಮಾಡಿದ ಅನುಭವವಿಲ್ಲ. ಬಹಳಷ್ಟು ಅಧ್ಯಾಪಕರು ಒಂದೇ ಕಾಲೇಜಿಗೆ ಸೀಮಿತವಾಗಿಲ್ಲ. ಒಂದೇ ವೃತ್ತಿಯನ್ನು ನಂಬಿಕೊಂಡಿಲ್ಲ. ಅಂಥವರು ಪ್ರಾಂಶುಪಾಲರ ಹುದ್ದೆಗೆ ಆಯ್ಕೆಯಾದರೆ ಐದು ವರ್ಷಗಳ ನಂತರ ಏನು ಮಾಡಬೇಕು ಎನ್ನುವ ಅತಂತ್ರ ಸ್ಥಿತಿಯನ್ನು ಉನ್ನತ ಶಿಕ್ಷಣ ಇಲಾಖೆ ಸೃಷ್ಟಿಸಿದೆ’ ಎಂದು ಹಲವು ಅಧ್ಯಾಪಕರು, ಶಿಕ್ಷಣ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.
‘ಎಂಜಿನಿಯರಿಂಗ್ ಸೇರಿ ಇತರೆ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡಿದವರು ಆಯ್ಕೆಯಾದರೆ ನಿಯಮದಂತೆ ಅವರು ವಾರಕ್ಕೆ ಆರು ಗಂಟೆ ಯಾವ ವಿಷಯ ಬೋಧಿಸಲು ಸಾಧ್ಯ? ಇಲಾಖೆಯ ಒಳಗಿನವರ ಸೇವಾ ಜ್ಯೇಷ್ಠತೆಗೂ ಧಕ್ಕೆಯಾಗುತ್ತದೆ. ವಯೋಮಿತಿ ಇಲ್ಲದಿರುವುದರಿಂದ, ಆಯ್ಕೆಯಾದವರು ಒಂದೇ ತಿಂಗಳಿಗೆ ನಿವೃತ್ತರಾದರೆ ಮತ್ತೆ ಪ್ರಭಾರ ಅನಿವಾರ್ಯವಾಗುತ್ತದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು’ ಎಂದು ಕೋರಿ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರು ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಿದ್ದರು.
ಕಾನೂನು ಸಲಹೆ ಪಡೆದ ನಂತರ ಉನ್ನತ ಶಿಕ್ಷಣ ಇಲಾಖೆ ಖಾಸಗಿ ಕಾಲೇಜುಗಳ ಅಭ್ಯರ್ಥಿಗಳನ್ನು ಕೈಬಿಟ್ಟು, ಪರೀಕ್ಷೆ ಬರೆದಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರನ್ನು ಮಾತ್ರ ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಆಯ್ಕೆಯಾದ ಹಲವರು ನಿವೃತ್ತಿ
ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಯ ಆಯ್ಕೆ ಪಟ್ಟಿಯಲ್ಲಿ ಇರುವ ಹಲವರು ಈಗಾಗಲೇ ನಿವೃತ್ತರಾಗಿದ್ದಾರೆ. ಶೇ 25ರಷ್ಟು ಅಭ್ಯರ್ಥಿಗಳ ಸೇವಾ ಅವಧಿ ಒಂದು ವರ್ಷದ ಒಳಗಿದೆ.
ಕಾಯಂ ನೇಮಕ ಪ್ರಕ್ರಿಯೆ ಹಲವು ದಶಕಗಳಿಂದಲೂ ನಿಯಮಿತವಾಗಿ ನಡೆದಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಹಲವು ಪ್ರಾಧ್ಯಾಪಕರಿಗೆ 2008–2009ನೇ ಸಾಲಿನಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು. ಒಂದು ಸಾವಿರ ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚಿರುವ ಕಾಲೇಜುಗಳನ್ನು ವಿಂಗಡಿಸಿ ಗ್ರೇಡ್–1 ಹಾಗೂ ಗ್ರೇಡ್–2 ಪ್ರಾಂಶುಪಾಲರು ಎಂದು ಪರಿಗಣಿಸಿ ಬಡ್ತಿಗೆ ಪರಿಗಣಿಸಲಾಗಿತ್ತು. ಅಂದು ಪ್ರಾಂಶುಪಾಲರಾಗಿ ಬಡ್ತಿ ಹೊಂದಿದ್ದ ಎಲ್ಲರೂ ನಿವೃತ್ತರಾಗಿದ್ದಾರೆ. ಆಯಾ ಕಾಲೇಜುಗಳಲ್ಲಿರುವ ಹಿರಿಯ ಪ್ರಾಧ್ಯಾಪಕರೇ ಪ್ರಭಾರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈಗ ಅವರಲ್ಲಿ ಕೆಲವರಿಗೆ ಕಾಯಂ ಪ್ರಾಂಶುಪಾಲರಾಗುವ ಅವಕಾಶ ಸಿಕ್ಕಿದರೂ ಕಾರ್ಯನಿರ್ವಹಣೆ ಅವಧಿ
ಇಲ್ಲವಾಗಿದೆ.
15 ವರ್ಷ ಅನುಭವ ಇಲ್ಲದವರಿಗೂ ಮಣೆ
ಪ್ರಾಂಶುಪಾಲರ ಹುದ್ದೆಗೆ ನೇಮಕವಾಗಲು ಪದವಿ ಕಾಲೇಜುಗಳಲ್ಲಿ 15 ವರ್ಷಗಳ ಸೇವಾನುಭವ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ, 2009ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕರೂ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
‘ಅಧಿಸೂಚನೆ ದಿನಾಂಕ ಪರಿಗಣಿಸಿದರೆ 2009ರಲ್ಲಿ ನೇಮಕವಾದ ಸಹಾಯಕ ಪ್ರಾಧ್ಯಾಪಕರ ಸೇವಾವಧಿ 15 ವರ್ಷ ದಾಟುವುದಿಲ್ಲ. ಆದರೆ, ಬಹುತೇಕರು ಹಿಂದೆ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡಿದ್ದ ನಕಲಿ ದಾಖಲೆ ಸಲ್ಲಿಸಿದ್ದಾರೆ. ಕೆಲವರು ಹೊರ ರಾಜ್ಗಗಳ ವಿಶ್ವವಿದ್ಯಾಲಯಗಳಿಂದ ಪಡೆದ ನಕಲಿ ಪಿ.ಎಚ್‌ಡಿ, ಯುಜಿಸಿ ಗುರುತಿಸಿದ ಪ್ರಕಾಶನಗಳ ನಕಲಿ ಪ್ರಕಟಣೆಗಳನ್ನು ಸಲ್ಲಿಸಿ, ಸ್ಥಾನ ಪಡೆದಿದ್ದಾರೆ’ ಎನ್ನುತ್ತಾರೆ ಅಭ್ಯರ್ಥಿ ರಾಜಪ್ಪ.
ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಭಾರಿ ವಿಳಂಬ ಮಾಡಿದ್ದರಿಂದ ಶೇ 50ರಷ್ಟು ಅರ್ಹ ಅಧ್ಯಾಪಕರು ಅವಕಾಶ ವಂಚಿತರಾಗಿದ್ದಾರೆ. ಆಯ್ಕೆಯಾದ ಬಹುತೇಕರ ಸೇವಾವಧಿ ಕಡಿಮೆಯಿದೆಬಿ.ಸಿ.ದಾದಾಪೀರ್, ನಿವೃತ್ತ ಪ್ರಾಧ್ಯಾಪಕ
ಅಧಿಸೂಚನೆಯ ನಂತರ ನಿಯಮ ಬದಲಿಸಿದ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ಆಯ್ಕೆ ಪಟ್ಟಿ ಪ್ರಕಟಣೆಗೆ ಮುನ್ನ ಸರ್ಕಾರ ಕೇವಿಯಟ್ ಹಾಕಿ, ಅನ್ಯಾಯ ಮಾಡಿದೆಸೋಮನಾಥ್ಸ ಖಾಸಗಿ ಕಾಲೇಜು ಉಪನ್ಯಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.