ADVERTISEMENT

ಪ್ರಿಯಾಂಕ್‌ ಖರ್ಗೆ, ಸಂತೋಷ್ ಲಾಡ್‌ ಸಾಧನೆ ಕಳಪೆ: ಆರ್. ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 15:33 IST
Last Updated 15 ಡಿಸೆಂಬರ್ 2025, 15:33 IST
<div class="paragraphs"><p>ಆರ್. ಅಶೋಕ</p></div>

ಆರ್. ಅಶೋಕ

   

ಬೆಳಗಾವಿ: ಕಳೆದ ಎಂಟೂವರೆ ತಿಂಗಳಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್ ಲಾಡ್ ಅವರ ಸಾಧನೆ ತೀರಾ ಕಳಪೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಎಂಟು ತಿಂಗಳು:ಶೇ 50 ಅನುದಾನ ವೆಚ್ಚ’ ವಿಶೇಷ ವರದಿಯನ್ನು ಉಲ್ಲೇಖಿಸಿ ‘ಎಕ್ಸ್‌’ನಲ್ಲಿ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘2025–26ನೇ ಆರ್ಥಿಕ ಸಾಲಿನಲ್ಲಿ 8.5 ತಿಂಗಳು ಮುಗಿದಿದ್ದು, ಕೇವಲ 3.5 ತಿಂಗಳು ಬಾಕಿ ಇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಸರ್ಕಾರದ 47 ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ₹4.09 ಲಕ್ಷ ಕೋಟಿಯಲ್ಲಿ ಈವರೆಗೆ ಕೇವಲ ₹2.06 ಲಕ್ಷ ಕೋಟಿ ಅನುದಾನ ವೆಚ್ಚವಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಗೆ ಕೈ–ಗನ್ನಡಿ’ ಎಂದು ಅವರು ಹೇಳಿದ್ದಾರೆ.

‘ವಿಶೇಷವಾಗಿ ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್ ಲಾಡ್ ಅವರ ಇಲಾಖೆಗಳಲ್ಲಿ ಯಾವುದೇ ಸಾಧನೆ ಆಗಿಲ್ಲ. ಐಟಿ–ಬಿಟಿ ಇಲಾಖೆಯಲ್ಲಿ ಕೇವಲ ಶೇ 20, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ 30 ಹಾಗೂ ಕಾರ್ಮಿಕ ಇಲಾಖೆಯಲ್ಲಿ ಕೇವಲ ಶೇ 29ರಷ್ಟು ಮಾತ್ರ ಅನುದಾನ ವೆಚ್ಚವಾಗಿದೆ. ಈ ಇಬ್ಬರೂ ಸಚಿವರು ಅನವಶ್ಯಕ ಹೇಳಿಕೆಗಳು, ಕ್ಷುಲ್ಲಕ ರಾಜಕೀಯ ಮತ್ತು ಕುಚೋದ್ಯದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನಾದರೂ ಈ ನಡವಳಿಕೆಗಳನ್ನು ಬಿಟ್ಟು ತಮ್ಮ ಇಲಾಖೆಗಳ ಕರ್ತವ್ಯ ನಿರ್ವಹಣೆ ಬಗ್ಗೆ ಗಮನಹರಿಸಲಿ’ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.