
ಬೆಂಗಳೂರು: ‘ಬಾಂಗ್ಲಾ ದೇಶಿಯರು ಕರ್ನಾಟಕಕ್ಕೆ ಹೇಗೆ ಬರುತ್ತಾರೆ? ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡಲೆಕಾಯಿ ತಿನ್ನುತ್ತಿದ್ದಾರಾ?’ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇಶದ ಗಡಿ ಕಾಯುವುದು ರಾಜ್ಯದ ಗೃಹ ಸಚಿವ ಪರಮೇಶ್ವರ ಅವರ ಕೆಲಸವೇ? ಬಿಜೆಪಿ ಅಧಿಕಾರ ಇರುವ ರಾಜ್ಯಗಳನ್ನು ದಾಟಿ ಬಾಂಗ್ಲಾ ದೇಶಿಯರು ಹೇಗೆ ಕರ್ನಾಟಕಕ್ಕೆ ಬರುತ್ತಾರೆ’ ಎಂದೂ ಪ್ರಶ್ನಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮತ್ತೆ ಮರಳುವ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಅವರು ಪಂಚಾಯತ್ ಚುನಾವಣೆ ಮಾಡುತ್ತಾರಾ ಅಥವಾ ಪಾರ್ಲಿಮೆಂಟ್ ಚುನಾವಣೆ ಮಾಡುತ್ತಾರಾ ಎನ್ನುವುದು ಅವರ ಪಕ್ಷಕ್ಕೆ ಸಂಬಂಧಪಟ್ಟಿದ್ದು. ಅದಕ್ಕೂ ನಮಗೂ ಏನು ಸಂಬಂಧ’ ಎಂದರು.
‘ಜೆಡಿಎಸ್ ಈಗಾಗಲೇ ನಿರ್ನಾಮದ ಹಾದಿಯಲ್ಲಿದೆ. ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಭೋಗ್ಯಕ್ಕೆ ಕೊಟ್ಟು ಬಿಟ್ಟಿದ್ದಾರೆ. ಅವರ ಸಂಬಂಧಿಕರೇ ಹೋಗಿ ಬಿಜೆಪಿ ಟಿಕೆಟ್ ತೆಗೆದುಕೊಂಡು ಚುನಾವಣೆಗೆ ನಿಲ್ಲುತ್ತಾರೆಂದರೆ, ಪಕ್ಷ ಎಷ್ಟರ ಮಟ್ಟಿಗೆ ಬೆಳೆಯುತ್ತಿದೆ ಎಂದು ಯೋಚನೆ ಮಾಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.