ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಕಾಮಗಾರಿಗಳ ಅನುಷ್ಠಾನದಲ್ಲಿ ಲೋಪ ಅಥವಾ ವಿಳಂಬವಾದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾದೀತು’ ಎಂದು ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಎಂಜಿನಿಯರ್‌ಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಆರ್‌ಐಡಿಎಲ್ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಗಳು ಅನುಷ್ಠಾನಗೊಳ್ಳದಿರುವುದಕ್ಕೆ ತೀವ್ರ ಅತೖಪ್ತಿ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯ ಜಿಲ್ಲೆಗಳಿಂದ ಸಭೆಗೆ ಬಂದಿದ್ದ ಕೆಆರ್‌ಐಡಿಎಲ್ ಎಂಜಿನಿಯರ್‌ಗಳ ಜೊತೆ ಚರ್ಚೆ ನಡೆಸಿದ ಸಚಿವರು, ‘ಎಂಜಿನಿಯರ್‌ಗಳು ಬದ್ಧತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸದಿದ್ದರೆ ಕಠಿಣ ಕ್ರಮ ಖಚಿತ’ ಎಂದರು.
ಗ್ರಾಮೀಣ ನೀರು ಸರಬರಾಜು ಇಲಾಖೆಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಾಮೂಹಿಕ ಶೌಚಾಲಯಗಳ ನಿರ್ಮಾಣದಲ್ಲಿ ಆಗಿರುವ ವಿಳಂಬದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ‘ಮೇ ಮೊದಲ ವಾರದಲ್ಲಿ ಶೌಚಗೃಹಗಳನ್ನು ನಿರ್ಮಿಸಿ ಬಳಕೆಗೆ ಸಿದ್ಧಪಡಿಸದಿದ್ದರೆ ಸಂಬಂಧಿಸಿದ ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗುವುದು’ ಎಂದು ಕಟ್ಟೆಚ್ಚರ ನೀಡಿದರು.
‘ರಸ್ತೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ಬದಲಾಗಿರುವ ತಾಂತ್ರಿಕ ನೈಪುಣ್ಯಗಳನ್ನು ಬಳಸಿಕೊಂಡು ಪರಿಸರಸ್ನೇಹಿ ಸಾಮಗ್ರಿಗಳನ್ನು ಬಳಸಿಕೊಳ್ಳಲು ಕೆಆರ್‌ಐಡಿಎಲ್ ಚಿಂತಿಸಬೇಕು. ಅಗತ್ಯಬಿದ್ದರೆ ತಜ್ಞರ ಸಮಿತಿ ರಚಿಸಿ ಮಾರ್ಗದರ್ಶನ ಪಡೆಯಬೇಕು’ ಎಂದು ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಮೀರ್ ಶುಕ್ಲಾ ಮತ್ತು ಕೆಕೆಆರ್‌ಡಿಬಿ ಕಾರ್ಯದರ್ಶಿ ನಳಿನ್ ಅತುಲ್ ವಿಡಿಯೊ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದರು. ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ರಾಜೇಶ್ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.