ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ಕಸದ ತೊಟ್ಟಿಗೆ ಮೊಬೈಲ್ ಎಸೆದ!

ಸಂತೋಷ ಜಿಗಳಿಕೊಪ್ಪ
Published 7 ಆಗಸ್ಟ್ 2022, 22:45 IST
Last Updated 7 ಆಗಸ್ಟ್ 2022, 22:45 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಮಧ್ಯವರ್ತಿಯಾಗಿದ್ದ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಇನ್‌ಸ್ಪೆಕ್ಟರ್ ಬಸವರಾಜ ಗುರುವ (32) ಬಿಬಿಎಂಪಿ ಕಸದ ತೊಟ್ಟಿಗೆ ಮೊಬೈಲ್ ಫೋನ್ ಎಸೆದು ಸಾಕ್ಷ್ಯನಾಶ ಮಾಡಿರುವುದು ಪತ್ತೆಯಾಗಿದೆ.

ನೇಮಕಾತಿ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು 32ನೇ ಆರೋಪಿ ಆಗಿರುವ ಬಸವರಾಜ ಗುರುವ ಅವರ ಈ ಕೃತ್ಯದ ಬಗ್ಗೆ ಉಲ್ಲೇಖಿಸಿದ್ದಾರೆ.

‘ಪರಪ್ಪನ ಅಗ್ರಹಾರ ವೈಷ್ಣವಿ ಲೇಔಟ್‌ ನಿವಾಸಿ ಬಸವರಾಜ, ತುಮಕೂರು ಜಿಲ್ಲೆಯ ಕೆಎಸ್‌ಆರ್‌ಪಿ ಘಟಕದಲ್ಲಿ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ (ಆರ್‌ಪಿಐ) ಆಗಿದ್ದ. ಪ್ರಕರಣದ ಆರೋಪಿಯೂ ಆಗಿರುವ ಆರ್‌ಪಿಐ ಎಸ್‌.ಬಿ.ಮಧು ಜೊತೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು, ಲಕ್ಷಾಂತರ ರೂಪಾಯಿ ಕಮಿಷನ್ ಪಡೆದಿದ್ದ’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

ADVERTISEMENT

‘ಅಭ್ಯರ್ಥಿಗಳಾದ ಎಚ್‌.ಆರ್.ಪ್ರವೀಣ್‌ಕುಮಾರ್ ಹಾಗೂ ರಚನಾ ಹನುಮಂತ ಅವರಿಂದ ಹಣ ಪಡೆದಿದ್ದ ಬಸವರಾಜ, ಅದನ್ನೇ ಮಧು ಮೂಲಕ ಎಫ್‌ಡಿಎ ಹರ್ಷನಿಗೆ ಕೊಟ್ಟು ಒಎಂಆರ್ ಪ್ರತಿ ತಿದ್ದಿಸಿದ್ದ. ಇಬ್ಬರೂ ಅಭ್ಯರ್ಥಿಗಳಿಗೆ ರ‍್ಯಾಂಕ್ ಸಹ ಬಂದಿತ್ತು.’

‘ಆರೋಪಿ ಬಸವರಾಜ, ಮೊಬೈಲ್ ಫೋನ್‌ ಮೂಲಕ ಇತರೆ ಆರೋಪಿಗಳನ್ನು ಸಂಪರ್ಕಿಸುತ್ತಿದ್ದ. ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ಇತರೆ ಸಾಕ್ಷ್ಯಗಳು ಮೊಬೈಲ್‌ನಲ್ಲಿದ್ದವು. ಪ್ರಕರಣ ದಾಖಲಾಗುತ್ತಿದ್ದಂತೆ ಬೆಂಗಳೂರಿನ ದೀಪಾಂಜಲಿ ನಗರ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬಿಬಿಎಂಪಿ ಕಸದ ತೊಟ್ಟಿಗೆ ಮೊಬೈಲ್ ಎಸೆದು ಸಾಕ್ಷ್ಯ ನಾಶ ಮಾಡಿದ್ದಾನೆ’ ಎಂದು ಉಲ್ಲೇಖಿಸಲಾಗಿದೆ.

ಅಭ್ಯರ್ಥಿಗಳಿಂದಲೂ ಮೊಬೈಲ್ ಫೋನ್‌ ನಾಶ: ‘ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳಾದ ಸಿ.ಎಂ.ನಾರಾಯಣ ಹಾಗೂ ಸಿ.ಎಸ್. ನಾಗೇಶ್‌ಗೌಡ ಸಹ ತಮ್ಮ ಮೊಬೈಲ್‌ ಫೋನ್‌ಗಳನ್ನು ನಾಶ ಮಾಡಿದ್ದಾರೆ’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

‘ಕೆಂಗೇರಿ ಹೋಬಳಿಯ ಕೆ.ಗೊಲ್ಲಹಳ್ಳಿ ಬಳಿಯ ಚಿನ್ನಕುರ್ಚಿ ಗ್ರಾಮದ ನಾರಾಯಣ, ಸಿಐಡಿ ಅಧಿಕಾರಿಗಳು ಬಂಧಿಸಬಹುದೆಂಬ ಭಯದಲ್ಲಿದ್ದ. ಮೈಸೂರು ರಸ್ತೆಯ ಗೋಪಾಲನ್‌ ಒಲಿಂಪಿಯಾ ಮಾಲ್‌ ಬಳಿ ಮೊಬೈಲ್ ಫೋನ್‌ ಬಿಸಾಕಿ ಸಾಕ್ಷ್ಯ ನಾಶ ಮಾಡಿದ್ದಾನೆ. ನಾಗೇಶ್‌ಗೌಡ ಸಹ ಸಿಕ್ಕಿಬೀಳುವ ಭಯದಲ್ಲಿ ಇದೇ ಮಾರ್ಗ ಅನುಸರಿಸಿದ್ದಾನೆ’ ಎಂದೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಭ್ಯರ್ಥಿಗಳ ಪೆನ್‌ಗಳು ನಾಶ’

‘ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ, ಡಿವೈಎಸ್ಪಿ ಹಾಗೂ ಇತರೆ ಸಿಬ್ಬಂದಿ, ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಪ್ರತಿ ಖಾಲಿ ಬಿಡುವಂತೆ ಅಭ್ಯರ್ಥಿಗಳಿಗೆ ಸೂಚಿಸಿದ್ದರು. ಅದರಂತೆ ಎಲ್ಲರೂ ಖಾಲಿ ಬಿಟ್ಟಿದ್ದರು. ಅಂಥವರ ಪೆನ್‌ಗಳನ್ನು ಸಂಗ್ರಹಿಸಿದ್ದ ಮಧ್ಯವರ್ತಿಗಳು, ನೇಮಕಾತಿ ವಿಭಾಗದ ಸಿಬ್ಬಂದಿಗೆ ತಲುಪಿಸಿದ್ದರು’ ಎಂಬುವುದು ಆರೋಪ ಪಟ್ಟಿಯಲ್ಲಿದೆ.

‘ಎಫ್‌ಡಿಎಗಳಾದ ಹರ್ಷ ಹಾಗೂ ಶ್ರೀನಿವಾಸ್, ಆಯಾ ಅಭ್ಯರ್ಥಿಗಳ ಪೆನ್‌ಗಳ ಮೂಲಕವೇ ಒಎಂಆರ್ ತಿದ್ದುಪಡಿ ಮಾಡಿದ್ದರು. ಆ ಬಳಿಕ ಎಲ್ಲ ಪೆನ್‌ಗಳನ್ನು ಮುರಿದು ಹಲವೆಡೆ ಎಸೆದು ನಾಶಪಡಿಸಿದ್ದಾರೆ’ ಎಂಬ ಅಂಶವನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಿಸಿಟಿವಿ ದೃಶ್ಯಾವಳಿಗಳೂ ನಾಶ’

‘‍‍ಪೊಲೀಸ್ ನೇಮಕಾತಿ ವಿಭಾಗದ ಭದ್ರತಾ ಕೊಠಡಿ ಹಾಗೂ ಅಕ್ಕ–ಪಕ್ಕದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದೃಶ್ಯಾವಳಿಗಳನ್ನೂ ಸಿಬ್ಬಂದಿ ಅಳಿಸಿ ಹಾಕಿರುವುದು ದೃಢಪಟ್ಟಿದೆ’ ಎಂಬ ಅಂಶ ಆರೋಪ ಪಟ್ಟಿಯಲ್ಲಿದೆ.

‘ಅ.7, 8 ಹಾಗೂ 16 ರಂದು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗಿನ ದೃಶ್ಯಾವಳಿಗಳನ್ನು ಅಳಿಸಿ ಸಾಕ್ಷ್ಯ ನಾಶ ಮಾಡಲಾಗಿದೆ. ಕೆಲ ಕ್ಯಾಮೆರಾಗಳನ್ನು ಕಾರ್ಯನಿರ್ವಹಿಸದಂತೆ ಸ್ಥಗಿತಗೊಳಿಸಿದ್ದರು. ಒಎಂಆರ್ ಪ್ರತಿ ತಿದ್ದುಪಡಿ ಮಾಡಿದ್ದ ಕೃತ್ಯದ ಸುಳಿವು ಸಿಗಬಾರದೆಂದು ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಹಾಗೂ ಸಿಬ್ಬಂದಿ ದೃಶ್ಯಾವಳಿ ಅಳಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.