ADVERTISEMENT

ಮಂತ್ರಿಗಳ ಚಿತಾವಣೆ ಇಲ್ಲದೆ ಭ್ರಷ್ಟಾಚಾರ ನಡೆಯಲು ಅಸಾಧ್ಯ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜುಲೈ 2022, 10:44 IST
Last Updated 5 ಜುಲೈ 2022, 10:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ.

‘ರಾಜ್ಯದಲ್ಲಿ ಒಂದೇ ದಿನ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಬಂಧನವಾಗಿರುವುದು ಬಿಜೆಪಿ ಆಡಳಿತದ ಅವಧಿಯನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ಘಟನೆ. ಶೇ 40ರಷ್ಟು ಕಮಿಷನ್ ಭ್ರಷ್ಟಾಚಾರದ ಸರ್ಕಾರದಲ್ಲಿ ಸೂತ್ರಧಾರಿಗಳನ್ನು ಉಳಿಸಲು ಪಾತ್ರಧಾರಿಗಳನ್ನು ಮಾತ್ರ ಬಂಧಿಸಲಾಗುತ್ತಿದೆ. ಮಂತ್ರಿಗಳ ಚಿತಾವಣೆ ಇಲ್ಲದೆ ಉನ್ನತ ಮಟ್ಟದ ಭ್ರಷ್ಟಾಚಾರ ನಡೆಯಲು ಅಸಾಧ್ಯ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇಂದಿನ ದಿನಪತ್ರಿಕೆಯ ತುಂಬೆಲ್ಲಾ ಈ ರಾಜ್ಯದ ಭ್ರಷ್ಟಾಚಾರದ ಸುದ್ದಿಗಳೇ. ನೇಮಕ ವಿಭಾಗದ ಪೊಲೀಸ್ ಮುಖ್ಯಸ್ಥರೇ ಅರೆಸ್ಟ್, ಲಂಚ: ಜಿಲ್ಲಾಧಿಕಾರಿ ಬಂಧನ, ಅಕ್ರಮ ಪ್ರಶ್ನಿಸಿದ ಜಡ್ಜ್‌ಗೇ ಬೆದರಿಕೆ, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ಆಡಳಿತ ಹೇಗೆ ಹಳ್ಳ ಹಿಡಿಯುತ್ತದೆ ಎಂಬುದಕ್ಕೆ ಇದು ಸಾಕ್ಷಿ. ನಾ ಖಾವೂಂಗಾ.. ನಾ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

‘ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ನೈತಿಕತೆ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ರಾಜೀನಾಮೆ ಕೊಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

‘ಪಿಎಸ್‌ಐ ನೇಮಕಾತಿಯಲ್ಲಿ ನಡೆದ ಅಕ್ರಮದಿಂದಾಗಿ ಇಡೀ ಭಾರತದ ಇತಿಹಾಸದಲ್ಲಿ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ. ಇದರಿಂದಾಗಿ ಕರ್ನಾಟಕದ ಆಡಳಿತ, ಗೌರವಕ್ಕೆ ಮಸಿ ಬಳಿದಂತಾಗಿದೆ. ನ್ಯಾಯಾಲಯ ಸಾಮಾನ್ಯ ಜನರ ರಕ್ಷಣೆಗೆ ಬಂದಿದೆ. ಆದರೆ, ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ನ್ಯಾಯಾಧೀಶರ ಸ್ಥಾನಕ್ಕೆ ಕಂಟಕ ಬರುವ ರೀತಿ ನ್ಯಾಯಾಧೀಶರು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರು ಅಧಿಕಾರಿಗಳ ಬಂಧನವಾಗಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಓದಿ...

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.