ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ: ಎಡಿಜಿಪಿ–ಡಿವೈಎಸ್ಪಿ ಮುಖಾಮುಖಿ ವಿಚಾರಣೆ

ತನಿಖೆ ಚುರುಕು l ಅಮ್ರಿತ್ ಪೌಲ್ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 27 ಮೇ 2022, 3:40 IST
Last Updated 27 ಮೇ 2022, 3:40 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಪೊಲೀಸ್ ನೇಮಕಾತಿ ವಿಭಾಗದ ಎಡಿ ಜಿಪಿ ಆಗಿದ್ದ ಅಮ್ರಿತ್ ಪೌಲ್ ಅವರನ್ನು ಗುರುವಾರವೂ ವಿಚಾರಣೆ ನಡೆಸಿದರು.

ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಇತರೆ ನೌಕರರನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಬಂಧಿಸಿ ದ್ದಾರೆ. ಇವರ ಜೊತೆಗಿನ ಒಡನಾಟದ ಬಗ್ಗೆ ಎಡಿಜಿಪಿ ಅವರಿಂದ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.

ವಿಚಾರಣೆಗಾಗಿ ಕಸ್ಟಡಿಗೆ ಪಡೆದಿ ರುವ ಶಾಂತಕುಮಾರ್ ಹಾಗೂ ಎಡಿ ಜಿಪಿ ಅಮ್ರಿತ್ ಪೌಲ್ ಅವರನ್ನು ಮುಖಾಮುಖಿಯಾಗಿ ಕೂರಿಸಿ ಕೆಲ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಪಡೆದರು. ಇಬ್ಬರ ಹೇಳಿಕೆಯನ್ನೂ ವಿಡಿಯೊ ಚಿತ್ರೀ ಕರಣ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ.

ADVERTISEMENT

‘ಅಮ್ರಿತ್ ಪೌಲ್ ಅಧೀನದಲ್ಲಿ ಶಾಂತಕುಮಾರ್ ಹಾಗೂ ಇತರೆ ಆರೋಪಿಗಳು ಕೆಲಸ ಮಾಡು ತ್ತಿದ್ದರು. ಅವರೆಲ್ಲರೂ ಈಗಾಗಲೇ ತಪ್ಪೊಪ್ಪಿಗೆ ನೀಡಿದ್ದು, ಪ್ರಕರಣದಲ್ಲಿ ಎಡಿಜಿಪಿ ಪಾತ್ರವೇನು ಎಂಬುದನ್ನು ಪುರಾವೆ ಸಮೇತ ಪತ್ತೆ ಮಾಡಬೇಕಿದೆ. ಹೀಗಾಗಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ತನಿಖೆ ವೇಳೆ ದೊರೆತ ಪುರಾವೆ ಆಧರಿಸಿ ಅಮ್ರಿತ್ ಪೌಲ್ ಅವರಿಗೆ ನೋಟಿಸ್ ನೀಡಲಾಗಿತ್ತು. ಕಾರ್ಲಟನ್‌ ಕಟ್ಟಡದ ಸಿಐಡಿ ಕಚೇರಿಯಲ್ಲಿ ಬುಧವಾರ ಸಂಜೆ 4 ಗಂಟೆಯಿಂದ ರಾತ್ರಿ 7.30ರವರೆಗೆ ವಿಚಾರಣೆ ನಡೆಸಿ ವಾಪಸ್ ಕಳುಹಿಸಲಾಗಿತ್ತು.’

‘ಗುರುವಾರ ಬೆಳಿಗ್ಗೆಯೂ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಎರಡನೇ ಬಾರಿ ವಿಚಾರಣೆ ನಡೆಸಿ, ವಾಪಸ್‌ ಕಳುಹಿಸಲಾಗಿದೆ. ಅಗತ್ಯವಿದ್ದರೆ, ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಾಗುತ್ತಿದ್ದಂತೆ ಅಮ್ರಿತ್ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಎಡಿಜಿಪಿ ಆಗಿ ಸರ್ಕಾರ ವರ್ಗಾವಣೆ ಮಾಡಿತ್ತು.

ಶಾಂತಕುಮಾರ್ ನ್ಯಾಯಾಂಗ ಬಂಧನಕ್ಕೆ: ಸಿಐಡಿ ಕಸ್ಟಡಿ ಅವಧಿ ಮುಗಿದಿದ್ದರಿಂದ ಶಾಂತಕುಮಾರ್ ಅವರನ್ನು ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶ, ಶಾಂತಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.