ವಿಧಾನಸೌಧ
ಬೆಂಗಳೂರು: ಬಡ್ತಿಗೆ ಅರ್ಹತೆಯನ್ನೇ ಹೊಂದಿರದ ಎಂಟು ಎಂಜಿನಿಯರ್‌ಗಳಿಗೆ ಸ್ವತಂತ್ರ ಪ್ರಭಾರದ ಮೇಲೆ ಆಯಕಟ್ಟಿನ ಹುದ್ದೆಗಳನ್ನು ಲೋಕೋಪಯೋಗಿ ಇಲಾಖೆ ನೀಡಿದೆ.
ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಬಡ್ತಿ ಪಡೆದ ನಾಲ್ವರು ಮುಖ್ಯ ಎಂಜಿನಿಯರ್‌ಗಳು ಕಳೆದ ಐದು ತಿಂಗಳಿನಿಂದ ಸ್ಥಳ ನಿಯೋಜನೆಯ ಆದೇಶಕ್ಕಾಗಿ ಅಲೆದಾಡುತ್ತಿದ್ದರೂ ಅವರಿಗೆ ಹುದ್ದೆ ನೀಡಿಲ್ಲ. ಆದರೆ, ಅಧೀಕ್ಷಕ ಎಂಜಿನಿಯರ್‌ಗಳನ್ನು ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್) 32ರ ಅಡಿ ಸ್ವತಂತ್ರ ಪ್ರಭಾರ ತಾತ್ಕಾಲಿಕ ವ್ಯವಸ್ಥೆಯ ಆಧಾರದ ಮೇಲೆ ಅತ್ಯಂತ ಪ್ರಮುಖ ಜವಾಬ್ದಾರಿ ಹೊಂದಿರುವ ಹುದ್ದೆಗಳಿಗೆ ನೇಮಕ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಮುಖ್ಯ ಎಂಜಿನಿಯರ್ ಹುದ್ದೆಗೆ ಬಡ್ತಿ ಪಡೆದವರಿಗಷ್ಟೇ ಮೀಸಲಾದ ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ದಾವಣಗೆರೆ ಸ್ಮಾರ್ಟ್‌ಸಿಟಿ ಮುಖ್ಯ ಎಂಜಿನಿಯರ್, ರಾಜ್ಯಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕೋಶದ (ಗಣಿ ಮತ್ತು ಭೂ ವಿಜ್ಞಾನ) ಮುಖ್ಯ ಎಂಜಿನಿಯರ್, ಕರ್ನಾಟಕ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸ್ಥಾನ, ಬೆಂಗಳೂರು, ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ (ಕೆಯುಡಬ್ಲ್ಯುಎಸ್‌ಎಂಪಿ) ಟಾಸ್ಕ್ ವ್ಯವಸ್ಥಾಪಕ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯ (ಕೆಯುಐಡಿಎಫ್‌ಸಿ) ಪ್ರಧಾನ ವ್ಯವಸ್ಥಾಪಕ ಹುದ್ದೆಗಳಿಗೆ ಅಧೀಕ್ಷಕ ಎಂಜಿನಿಯರ್‌ಗಳನ್ನು ನೇಮಿಸಿ, ಇಲಾಖೆ ಆದೇಶ ಹೊರಡಿಸಿದೆ.
‘ಕ್ರಮಬದ್ಧ ಮುಂಬಡ್ತಿ ಬದಲಿಗೆ ಮಾಡುವ ತಾತ್ಕಾಲಿಕ ವ್ಯವಸ್ಥೆಯ ಅವಕಾಶಗಳನ್ನು ಕಲ್ಪಿಸಲು, ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅಡಿ ಪ್ರಭಾರ ನೀಡುವ ಒಳದಾರಿ ಇದೆ. ಇದು ಮುಂಬಡ್ತಿಯಲ್ಲ, ಸ್ವತಂತ್ರ ಪ್ರಭಾರದ ಆದೇಶವನ್ನು ಯಾವ ಸಮಯದಲ್ಲಾದರೂ ವಾಪಸ್ ಪಡೆಯಬಹುದು. ಈ ಸ್ಥಾನಗಳ ಕಾರ್ಯನಿರ್ವಹಣೆಯಯನ್ನು ಮುಂಬಡ್ತಿಯ ಜ್ಯೇಷ್ಠತೆಗೂ ಪರಿಗಣಿಸಲಾಗದು. ಬಡ್ತಿ ಪಡೆದ ಮುಖ್ಯ ಎಂಜಿನಿಯರ್‌ಗಳು ಲಭ್ಯವಿದ್ದರೂ ಅವರಿಗೆ ಸ್ಥಳ ನಿಯುಕ್ತಿ ಆದೇಶ ನೀಡದೆ, ಕೆಳ ಹಂತದ ಎಂಜನಿಯರ್‌ಗಳನ್ನು ಸ್ವತಂತ್ರ ಪ್ರಭಾರದ ಮೇಲೆ ನಿಯೋಜಿಸುವ ಮೂಲಕ ಸರ್ಕಾರ ಹುದ್ದೆಗಳನ್ನು ಹರಾಜಿಗಿಟ್ಟಿದೆ’ ಎಂದು ಉನ್ನತಾಧಿಕಾರಿಯೊಬ್ಬರು ದೂರಿದರು.
ಮುಖ್ಯ ಎಂಜಿನಿಯರ್‌ಗಳ ವೇತನ ಶ್ರೇಣಿ ₹1,44,700–₹1,97,200 ಇದೆ. ಈ ವೇತನಶ್ರೇಣಿಯ ಹುದ್ದೆಗಳಿಗೆ ಕೆಳ ಹಂತದವರನ್ನು ನಿಯೋಜಿಸುವ ಜತೆಗೆ, ಆಯಾ ಹುದ್ದೆಗಳ ಪ್ರಭಾರ ಭತ್ಯೆಯನ್ನು ಪಡೆಯುಲು ಅವಕಾಶ ಮಾಡಿಕೊಡುವ ಮೂಲಕ ಸರ್ಕಾರದ ಖಜಾನೆಗೂ ಹೊರೆ ಮಾಡಲಾಗಿದೆ ಎಂದೂ ಅವರು ಆಕ್ಷೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.