
ಬೆಂಗಳೂರು: ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳೂ ಇನ್ನು ಮುಂದೆ ವೆಬ್‌ಕಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಯಲಿವೆ.
2025–26ನೇ ಸಾಲಿನಿಂದ ದ್ವಿತೀಯ ಪಿಯು ಪರೀಕ್ಷೆಯ ಕನಿಷ್ಠ ತೇರ್ಗಡೆ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳ ಅಂಕಗಳು ಕೆಲ ವಿಷಯಗಳಲ್ಲಿ 20 ಹಾಗೂ ಕೆಲ ವಿಷಯಗಳಲ್ಲಿ 30 ಇದೆ. ಲಿಖಿತ ಪರೀಕ್ಷೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಅಂಕ ಪಡೆದರೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುತ್ತಿದ್ದಾರೆ. ಹಾಗಾಗಿ, ಪ್ರಾಯೋಗಿಕ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮುಂದಾಗಿದ್ದು, ಈ ಕುರಿತು ಸುತ್ತೋಲೆ ಹೊರಡಿಸಿದೆ.
ಇದೇ ಜನವರಿ 27ರಿಂದ ಫೆ.14ರವರೆಗೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚಿಸಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯಗೊಳಿಸಿದೆ. ಇಲಾಖೆ ಹಾಗೂ ಮಂಡಳಿಯ ಅಧಿಕಾರಿಗಳು ಕೃತಕ ಬುದ್ಧಿಮತ್ತೆ ಆಧಾರಿತ ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷೆಗಳನ್ನು ವೀಕ್ಷಿಸಲಿದ್ದಾರೆ.
ಆಯಾ ಜಿಲ್ಲೆಯಲ್ಲಿ ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿ ರಚಿಸಲು ಸೂಚಿಸಲಾಗಿದೆ. ವಿಜ್ಞಾನ ವಿಷಯದ ಒಬ್ಬರು ಪ್ರಾಂಶುಪಾಲರು, ಇಬ್ಬರು ಉಪನ್ಯಾಸಕರನ್ನು ಸಮಿತಿಗೆ ನೇಮಕ ಮಾಡಲಾಗುತ್ತದೆ. ಈ ಸಮಿತಿಯು ವೇಳಾಪಟ್ಟಿ ನಿಗದಿ, ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ನೇಮಿಸುತ್ತದೆ. ಬಾಹ್ಯ ಪರೀಕ್ಷಕರ ನೇಮಕದಲ್ಲಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಆದ್ಯತೆ ನೀಡಬೇಕು. ಕೊರತೆಯಾದಲ್ಲಿ ಮಾತ್ರ ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
‘ಪ್ರಾಯೋಗಿಕ ಪರೀಕ್ಷೆಗಳಿಗೆ ಕನಿಷ್ಠ ಅಂಕಗಳ ಮಿತಿಯಿಲ್ಲ. ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು ನೀಡಬಹುದು. ಆದರೆ ಪ್ರಾಯೋಗಿಕ ಪರೀಕ್ಷೆಯಲ್ಲಿ 30 ಅಂಕಗಳನ್ನು ಪಡೆದ ಕೆಲವರು ಲಿಖಿತ ಪರೀಕ್ಷೆಯಲ್ಲಿ 10 ಅಂಕಗಳನ್ನೂ ಪಡೆಯದಿರುವುದು ಮಂಡಳಿ ಗಮನಕ್ಕೆ ಬಂದಿದೆ. ಅಧಿಕ ಫಲಿತಾಂಶ ಪಡೆಯಲು ಎಲ್ಲರಿಗೂ ಹೆಚ್ಚು ಅಂಕಗಳನ್ನು ನೀಡಲಾಗುತ್ತಿದೆ. ಇಂತಹ ಅಕ್ರಮಗಳನ್ನು ತಡೆಯಲು ವೆಬ್ ಕಾಸ್ಟಿಂಗ್ ಕಡ್ಡಾಯ ಮಾಡಲಾಗಿದೆ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.