ADVERTISEMENT

ಮಂಗಳೂರು ಗೋಲಿಬಾರ್‌: ನ್ಯಾಯಾಂಗ ತನಿಖೆಗೆ ಆಗ್ರಹ

ಪಿಯುಸಿಎಲ್‌ ತಂಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 20:27 IST
Last Updated 2 ಜನವರಿ 2020, 20:27 IST
   

ಮಂಗಳೂರು: ನಗರದಲ್ಲಿ ಡಿ.19 ರಂದು ನಡೆದ ಘಟನೆಯಲ್ಲಿ ಮುಸ್ಲಿಂರನ್ನೇ ಗುರಿಯಾಗಿಸಿ ಪೊಲೀಸರಿಂದ ಅತಿರೇಕದ ವರ್ತನೆಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಂದು ನಡೆದ ಘಟನೆ ಹಾಗೂ ನಂತರ ಘಟನಾವಳಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪಿಯುಸಿಎಲ್ ನೇತೃತ್ವದ ಸತ್ಯಶೋಧನಾ ತಂಡ ಒತ್ತಾಯಿಸಿದೆ.

ಘಟನೆಗೆ ಸಂಬಂಧಿಸಿ ಪಿಯುಸಿಎಲ್ ನೇತೃತ್ವದಲ್ಲಿ ಎರಡು ದಿನಗಳಿಂದ ಪರಿಶೀಲನೆ, ನಡೆಸಿದ ತಂಡವು ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಮಧ್ಯಂತರ ವರದಿ ಬಿಡುಗಡೆ ಮಾಡಿದೆ.

ಪಿಯುಸಿಎಲ್‌ ರಾಜ್ಯ ಘಟಕದ ಅಧ್ಯಕ್ಷ ವೈ.ಎಸ್.ರಾಜೇಂದ್ರ , ಈವರೆಗಿನ ತಮ್ಮ ಅಧ್ಯಯದಲ್ಲಿ ನಗರದಲ್ಲಿ ನಡೆದ ಘಟನೆ, ಪೊಲೀಸ್ ಗೋಲಿಬಾರ್‌, ಪೊಲೀಸರ ಕಾರ್ಯಾಚರಣೆ ಕುರಿತಂತೆ ಸಾಕಷ್ಟು ಶಂಕೆ, ಪ್ರಶ್ನೆಗಳು ಮೂಡಿವೆ. ಹೈಲ್ಯಾಂಡ್ ಆಸ್ಪತ್ರೆಗೆ ಪೊಲೀಸರು ನುಗ್ಗಿದ ಘಟನೆಯನ್ನು ಒಳಗೊಂಡು ಸಮಗ್ರವಾಗಿ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಮಾವೇಶ ಮುಂದಕ್ಕೆ
ಮಂಗಳೂರು:
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರೋಧಿಸಿ ಇದೇ 4ರಂದು ಹಮ್ಮಿಕೊಳ್ಳಲಾಗಿದ್ದ ಸಮಾವೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ದಕ್ಷಿಣ ಕನ್ನಡ, ಉಡುಪಿ ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್‌ ಗುರುವಾರ ಹೇಳಿದರು.

‘ನಗರದ ನೆಹರೂ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲು ಅನುಮತಿ ನೀಡುತ್ತಿಲ್ಲ. ಅಲ್ಲದೇ ಗೃಹ ಸಚಿವರು 10 ದಿನ ಪ್ರತಿಭಟನೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಕಾನೂನು ಹಾಗೂ ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸಿ ಇದೇ 15 ರವರೆಗೆ ಕಾಯುತ್ತೇವೆ. ನಂತರ ಎಲ್ಲ 28 ಸಂಘಟನೆಗಳ ಜತೆಗೆ ಚರ್ಚಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಗರದಲ್ಲಿ ಪ್ರತಿಭಟನೆ ನಡೆಸಲು ₹ 2 ಕೋಟಿ ಮೊತ್ತದ ಬಾಂಡ್ ಹಾಗೂ ಮುಚ್ಚಳಿಕೆ ಪತ್ರ ಕೊಡಲು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ’ ಎಂದ ಅವರು, ‘ಇದೇ 15 ರವರೆಗೆ ಯಾವುದೇ ಸಂಘಟನೆ ಪ್ರತಿಭಟನೆಗೆ ಮುಂದಾದರೆ, ಅದಕ್ಕೆ ನಾವು ಹೊಣೆಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.