
ಬೆಂಗಳೂರು: ‘ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದ ಮುಸ್ಲಿಮರಿಗೆ ಕಾಂಗ್ರೆಸ್ ನಾಯಕರೇ ಕೋಗಿಲು ಗ್ರಾಮದಲ್ಲಿ ಮನೆ ಮಾಡಿಕೊಟ್ಟಿದ್ದರು. ಈಗ ರಾಜ್ಯ ಸರ್ಕಾರವೇ ಮನೆ ನಿರ್ಮಿಸಿಕೊಡಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಗಿಲು ಗ್ರಾಮದ ಈ 15 ಎಕರೆ ಜಮೀನಿನ ತುಂಬಾ ಕಲ್ಲು ಬಂಡೆಯಿತ್ತು. ಅಲ್ಲಿ ಕ್ವಾರಿ ನಡೆದಿದ್ದು, 2023ರವರೆಗೆ ಜನವಸತಿ ಇರಲಿಲ್ಲ. ಆದರೆ ಈಚಿನ ಆರು ತಿಂಗಳಲ್ಲಿ ಆ ಜಾಗದಲ್ಲಿ ಮನೆ–ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ವಿವರ ಗೂಗಲ್ ಅರ್ಥ್‌ನ ನಕ್ಷೆಗಳಲ್ಲಿ ದಾಖಲಾಗಿದೆ’ ಎಂದು ನಕ್ಷೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
‘ಕಾಂಗ್ರೆಸ್‌ನ ಸ್ಥಳೀಯ ಮುಖಂಡನೊಬ್ಬ ಪ್ರತಿ ಕುಟುಂಬದಿಂದ ₹4 ಲಕ್ಷದಿಂದ ₹5 ಲಕ್ಷ ಪಡೆದುಕೊಂಡು, ಮನೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾನೆ. ಈ ಎಲ್ಲ ಮಾಹಿತಿ ಸರ್ಕಾರಕ್ಕೆ ಇದೆ. ಕಾಂಗ್ರೆಸ್ ಮುಖಂಡ ಮಾಡಿದ ಅಕ್ರಮಕ್ಕೆ, ಸರ್ಕಾರವು ರಾಜ್ಯದ ಜನರ ತೆರಿಗೆ ಹಣದಿಂದ ಪರಿಹಾರ ಒದಗಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೋಗಿಲು ಗ್ರಾಮದ ಈ ಪ್ರದೇಶದಲ್ಲಿ ಇರುವ ಎಲ್ಲರ ಬಳಿಯೂ ಆಧಾರ್ ಕಾರ್ಡ್‌ಗಳು ಇವೆ. ಅವನ್ನು ಹೇಗೆ ಪಡೆದುಕೊಂಡರು, ದೇಶದ ಯಾವ ಭಾಗದಿಂದ ಅವರು ಬಂದರು ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಸರ್ಕಾರವು ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಇದರಿಂದ ಭೂಮಾಫಿಯಾಕ್ಕೆ ಉತ್ತೇಜನ ದೊರೆಯಲಿದೆ. ಮಾದಕ ವಸ್ತು ಹಾವಳಿ ಹೆಚ್ಚಾಗಲಿದೆ. ಅಕ್ರಮ ವಲಸಿಗರ ಸಮಸ್ಯೆ ತಲೆದೋರಲಿದೆ’ ಎಂದರು.
‘ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಗಾಗಿ ನಿಗದಿ ಮಾಡಲಾದ ಜಾಗದ ಒತ್ತುವರಿ ತೆರವು ಕಾರ್ಯಾಚರಣೆಗೆ ಒಂದೆಡೆ ಕೇರಳ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಕಳವಳ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ಕ್ರಮ ಓಲೈಕೆ ರಾಜಕಾರಣವಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 37 ಲಕ್ಷ ಮಂದಿ ವಸತಿರಹಿತರಿದ್ದಾರೆ. ಅವರಿಗೆ ಮನೆ ನೀಡುವುದನ್ನು ಬಿಟ್ಟು ಅಕ್ರಮ ವಲಸಿಗರಿಗೆ ರಾಜ್ಯ ಸರ್ಕಾರ ವಸತಿ ಕಲ್ಪಿಸಲು ಹೊರಟಿದೆಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.