
ಬೆಂಗಳೂರು: ‘ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತದಿಂದಾಗಿ ರಾಜ್ಯದಲ್ಲಿ ವಿವಿಧ ಸಂಘ– ಸಂಸ್ಥೆಗಳು, ಸಮುದಾಯಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಂದ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ, ಖಾಲಿ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರಿಂದ ಮಾರ್ಚ್ 11ರಿಂದ ಒಪಿಡಿ ಬಂದ್, ₹37 ಸಾವಿರ ಕೋಟಿ ಬಾಕಿ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರಿಂದ ಮಾ.6 ರಂದು ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಯಲಿದೆ’ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳ ಪ್ರತಿಭಟನೆ ನಡೆಯುತ್ತಿದೆ. ಒಳ ಮೀಸಲಾತಿಯಿಂದ ಆಗಿರುವ ಅನ್ಯಾಯ ವಿರುದ್ಧ ಎಸ್‌ಸಿ ಬಲಗೈ ಸಮುದಾಯ ಪ್ರತಿಭಟನೆ ನಡೆಯುತ್ತಿದೆ ಎಂದಿದ್ದಾರೆ.
‘ಬಿಡದಿ ಟೌನ್‌ಶಿಪ್ ಯೋಜನೆ, ಸೆಣಬು ಸಬ್ಸಿಡಿ ಬಂದ್, ಕಬ್ಬು ಬಿಲ್ ಬಾಕಿ ವಿರುದ್ಧ ರೈತರಿಂದ ಬೀದಿಗಿಳಿದು ಪ್ರತಿಭಟನೆ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಫೆಬ್ರುವರಿ 27ರಿಂದ ಕಾರ್ಯಕರ್ತೆಯರಿಂದ ಪ್ರತಿಭಟನೆ ಆರಂಭವಾಗುತ್ತದೆ. ಹೀಗೆ ಸಾಲು ಸಾಲು ಹೋರಾಟಗಳು ನಡೆಯಲಿವೆ. ಸಿದ್ದರಾಮಯ್ಯ ಅವರ ಭ್ರಷ್ಟ ಆಡಳಿತದಲ್ಲಿ ಒಬ್ಬರಾದರೂ ನೆಮ್ಮದಿಯಿಂದ ಇದ್ದಾರಾ? ಸರ್ಕಾರದ ಖಜಾನೆ ಖಾಲಿ ಆಗಿರುವುದಕ್ಕೆ ಈ ಹೋರಾಟಗಳಿಗಿಂತ ಬೇರೆ ಸಾಕ್ಷ್ಯ ಬೇಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.