
ಬೆಂಗಳೂರು: ‘ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು.
‘ಈ ಕಲ್ಲು ತೂರಾಟ ಪೂರ್ವ ನಿಯೋಜಿತ ಕೃತ್ಯ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಈ ಹಿಂದೆ ಮಂಡ್ಯ ಜಿಲ್ಲೆಯಲ್ಲೂ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿ, ಶ್ರೀರಾಮನ ಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ್ದರು. ಇಂತಹ ಮುಸ್ಲಿಂ ಮತಾಂಧರನ್ನು ಬಂಧಿಸಬಾರದು ಎಂದು ಸರ್ಕಾರವೇ ಪೊಲೀಸರಿಗೆ ಸೂಚನೆ ನೀಡಿದಂತಿದೆ’ ಎಂದರು.
‘ಕುಕ್ಕರ್ ಬಾಂಬ್ ಸ್ಫೋಟ ಮಾಡುವವರು ನಮ್ಮ ಬ್ರದರ್‌ಗಳು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರು ನಮ್ಮ ಬಂಧುಗಳು ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರಿಗೆ ಸೂಚಿಸಿರುವ ಕಾರಣ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ’ ಎಂದು ಅಶೋಕ ಟೀಕಿಸಿದರು.
‘ಈ ಹಿಂದೆ ನಡೆದ ಪ್ರಕರಣಗಳಲ್ಲಿ ಕಿಡಿಗೇಡಿಗಳ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದ ಕಾರಣ ಮುಸ್ಲಿಮರು ಪದೇ ಪದೇ ಈ ರೀತಿ ವರ್ತಿಸುತ್ತಿದ್ದಾರೆ. ಇಂತಹ ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಿ, ಜೈಲಿಗೆ ಹಾಕಬೇಕು. ಇಲ್ಲವಾದರೆ ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಮತ್ತು ಮತಕ್ಕಾಗಿ ಓಲೈಕೆ ಮಾಡುತ್ತಿದೆ ಎಂದು ಭಾವಿಸಬೇಕಾಗುತ್ತದೆ’ ಎಂದು ಅಶೋಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.