ಬೆಂಗಳೂರು: ‘ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಇತರ ಮುಖಂಡರ ಜೊತೆ ಚರ್ಚಿಸಿದ ಬಳಿಕ ರಾಹುಲ್ ಗಾಂಧಿ ಭಾಗವಹಿಸಲಿರುವ ಆಗಸ್ಟ್ 5ರ ಕಾರ್ಯಕ್ರಮದ ಸ್ವರೂಪ ಹಾಗೂ ಸ್ಥಳದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸುರ್ಜೇವಾಲಾ ಅವರು ಶಾಸಕರು, ವಿಧಾನ ಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜೊತೆ ಗುರುವಾರ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಕೂಡಾ ಭಾಗವಹಿಸಲಿದ್ದಾರೆ’ ಎಂದರು.
‘ಕಾರ್ಯಕ್ರಮಕ್ಕೆ ಕೆಲವು ಸ್ಥಳಗಳನ್ನು ನಾವು ಸೂಚಿಸಿದ್ದೇವೆ. ಸುರ್ಜೇವಾಲಾ ಅವರು ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲ ಕ್ಷೇತ್ರಗಳಿಂದ ಜನ ಬರಬೇಕು. ಈ ಸಂಬಂಧ ಆಗಸ್ಟ್ 3ರ ಒಳಗೆ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ಮಾಡಬೇಕು. ತಮ್ಮ ಕ್ಷೇತ್ರಗಳಲ್ಲಿ ಶಾಸಕರು ಸಭೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ’ ಎಂದರು.
‘ರಾಹುಲ್ ಉಪಸ್ಥಿತಿಯಲ್ಲಿ ರ‍್ಯಾಲಿಯೊ, ಸಮಾವೇಶವೊ’ ಎಂಬ ಪ್ರಶ್ನೆಗೆ, ‘ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ತಾಂತ್ರಿಕ ಅಂಶಗಳಿವೆ. ನ್ಯಾಯಾಲಯದ ಕೆಲವು ಷರತ್ತುಗಳಿವೆ. ಅವುಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಪಕ್ಷದ ನಾಯಕರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.