ಕುಲೇಂ–ಕ್ಯಾಸಲ್‌ರಾಕ್ ನಿಲ್ದಾಣಗಳ ಮಧ್ಯೆ ಹಳಿಗಳ ಮೇಲೆ ಕುಸಿದಿರುವ ಬಂಡೆಗಳು
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ತಿನೈಘಾಟ್‌ನಿಂದ ಗೋವಾದ ಕರಂ ಜೋಲ್ ವರೆಗಿನ ರೈಲು ಮಾರ್ಗವನ್ನು ಜೋಡಿ ಮಾರ್ಗವಾಗಿ ಮಾರ್ಪಡಿಸುವ ನೈಋತ್ಯ ರೈಲ್ವೆಯ ಹೊಸ ಪ್ರಸ್ತಾವಕ್ಕೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಅನುಮತಿ ನಿರಾಕರಿಸಿದ್ದರೂ ಉದ್ದೇಶಿತ ಯೋಜನೆ ಬಗ್ಗೆ ಪರಿಶೀಲನೆ ನಡೆಸಿ ವರದಿ ಪಡೆಯಲು ಕರ್ನಾಟಕ ವನ್ಯಜೀವಿ ಮಂಡಳಿ ತಾಂತ್ರಿಕ ಸಮಿತಿಯೊಂದನ್ನು ರಚಿಸಿದೆ.
ಇತ್ತೀಚೆಗೆ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯ ನಡಾವಳಿ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ಯೋಜನೆಗೆ ಹಸಿರು ನಿಶಾನೆ ನೀಡಿದರೆ 5,413 ಮರಗಳು ಹನನವಾಗುತ್ತವೆ. ಅಪರೂಪದ ವನ್ಯಜೀವಿಗಳ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎನ್ನಲಾಗುತ್ತಿದೆ.
ಈ ರೈಲು ಮಾರ್ಗ ತಿನೈಘಾಟ್‌ನಿಂದ ಕ್ಯಾಸಲ್‌ರಾಕ್ ಮೂಲಕ ಗೋವಾದ ಕರಂಜೋಲ್ ತಲುಪುತ್ತದೆ. 2022 ರಲ್ಲಿ ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿದ್ದ ಹಸಿರು ನಿಶಾನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಆ ಬಳಿಕ ಯೋಜನೆ ನನೆಗುದಿಯಲ್ಲಿತ್ತು.
ಇದೀಗ ಮತ್ತೆ ನೈಋತ್ಯ ರೈಲ್ವೆ ಮತ್ತು ರೈಲ್ವೆ ವಿಕಾಸ್ ನಿಗಮವು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿವೆ. 8.8 ಕಿ.ಮೀ ದೂರದ ಜೋಡಿ ಮಾರ್ಗದ ನಿರ್ಮಾಣಕ್ಕೆ 9.564 ಹೆಕ್ಟೇರ್ ಭೂಮಿಯ ಅಗತ್ಯವಿದೆ ಎಂದು ಹೇಳಿದೆ. ಈ ಪ್ರದೇಶವು ದಾಂಡೇಲಿ ವನ್ಯಜೀವಿಧಾಮ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕ್ಯಾಸಲ್ ರಾಕ್ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುತ್ತದೆ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಡಿಸಿಎಫ್ ಉದ್ದೇಶಿತ ಯೋಜನೆಯ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸಿ, ಯೋಜನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದಾರೆ.
ಆದರೆ, ಪಟ್ಟು ಬಿಡದ ರೈಲ್ವೆ ವಿಕಾಸ್ ನಿಗಮದ ಮುಖ್ಯ ಯೋಜನಾ ಮ್ಯಾನೇಜರ್ ಅವರು ಯೋಜನೆಯ ಮಾಹಿತಿ ಮತ್ತು ಉದ್ದೇಶಿತ ಉಪಶಮನ ಕ್ರಮಗಳ ಬಗ್ಗೆ ವಿವರಗಳನ್ನು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಸಾದರ ಪಡಿಸಿದ್ದರು. ಆದರೆ, ಸಮಿತಿಯ ಸದಸ್ಯೆ ವೈಶಾಲಿ ಕುಲಕರ್ಣಿ ಅವರು ರೈಲ್ವೆ ಪ್ರಸ್ತಾವದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ಸಾವನ್ನು ತಪ್ಪಿಸಲು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸಭೆಯಲ್ಲಿ ಹೇಳಿಕೆ ನೀಡಿದ ಸದಸ್ಯ ಕಾರ್ಯದರ್ಶಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮರಗಳು ಹನನವಾಗುತ್ತವೆ. ಅಲ್ಲದೇ, ಡಿಸಿಎಫ್ ಅವರು ಯೋಜನೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದಾರೆ. ಆದ್ದರಿಂದ ಯೋಜನೆಯ ಸಾಧ್ಯತೆ ಮತ್ತು ಪರಿಣಾಮಗಳ ಬಗ್ಗೆ ನಿರ್ಣಯಿಸಲು ತಾಂತ್ರಿಕ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದ್ದರು. ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ತಾಂತ್ರಿಕ ಸಮಿತಿಯ ನೇತೃತ್ವವನ್ನು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಹಿಸಲಿದ್ದಾರೆ. ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ, ಡಿಸಿಎಫ್ ಮತ್ತು ಕಾಳಿ ಹುಲಿ ಸಂರಕ್ಷಿತದ ನಿರ್ದೇಶಕ ಮತ್ತು ರೈಲ್ವೆ ವಿಕಾಸ್ ನಿಗಮದ ಮುಖ್ಯ ಯೋಜನಾ ನಿರ್ದೇಶಕರು ಸದಸ್ಯರಾಗಿದ್ದಾರೆ.
ಈ ಯೋಜನೆಯ ಕಾರ್ಯಗತಗೊಳಿಸಲು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಜತೆ ಚರ್ಚೆ ನಡೆಸಿದ್ದಾರೆ. ಆದರೆ, ಪಾಟೀಲ ಅವರ ಪುತ್ರ ಧ್ರುವ ಎಂ. ಪಾಟೀಲ ಅವರು ವನ್ಯಜೀವಿ ಮಂಡಳಿಯಲ್ಲಿ ಸದಸ್ಯ ಆಗಿರುವುದರಿಂದ, ಇದು ಹಿತಾಸಕ್ತಿಯ ಸಂಘರ್ಷ ಆಗುವುದಿಲ್ಲವೇ ಎಂದು ಪರಿಸರ ತಜ್ಞರು ಪ್ರಶ್ನಿಸಿದ್ದಾರೆ.
ಡಿಸಿಎಫ್ ವರದಿಯಲ್ಲೇನಿದೆ?
ಉದ್ದೇಶಿತ ಯೋಜನೆ ಪಶ್ಚಿಮಘಟ್ಟದ ಒಳಗೆ ಬರಲಿದ್ದು, ಇದು ಭಾರತದ ಜೀವಿವೈವಿಧ್ಯದ ತಾಣವಾಗಿದೆ. ಅಲ್ಲದೇ, ಈ ಪ್ರದೇಶದಲ್ಲಿ ಆಗಿಂದ್ದಾಗೆ ಭೂಕುಸಿತ ಸಂಭವಿಸುತ್ತಲೇ ಇರುತ್ತದೆ. ಈಗಿರುವ ಕಳೆದ ಕೆಲವು ವರ್ಷಗಳಿಂದ ರೈಲು ಹಳಿಗಳ ಸಮೀಪವೇ ಭೂಕುಸಿತ ಸಂಭವಿಸಿದೆ. ಈಗಿರುವ ಹಳಿಯ ಮೇಲೆ ರೈಲುಗಳು ಸಂಚಾರದಿಂದ ಸಾಕಷ್ಟು ವನ್ಯಜೀವಿಗಳು ಸಾವನ್ನಪ್ಪಿವೆ. ಈ ವಿಷಯವನ್ನು ಈ ಹಿಂದೆ ರೈಲ್ವೆ ಇಲಾಖೆಯ ಗಮನಕ್ಕೆ ತಂದಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರಸ್ತಾವಿತ ಯೋಜನೆಯಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 5413 ಮರಗಳ ಹನನವಾಗುತ್ತದೆ. ಆದ್ದರಿಂದ ಜೋಡಿ ಮಾರ್ಗ ಪ್ರಸ್ತಾವನೆಗೆ ಶಿಫಾರಸು ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಫ್ ತಮ್ಮ ವರದಿಯಲ್ಲಿ ಪ್ರತಿಪಾದಿಸಿದ್ದಾರೆ.
ಅರಣ್ಯ ಹಾಗೂ ವನ್ಯಜೀವಿ ಕಾಯ್ದೆಗಳ ಕಟ್ಟುನಿಟ್ಟಿನ ನಿಬಂಧನೆಗಳ ಕಾರಣದಿಂದ ಅರಣ್ಯ ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಲಾಗದೆ ಕ್ಯಾಸಲ್ ರಾಕ್ ವನ್ಯಜೀವಿ ವಲಯದಿಂದ 58 ಕುಟುಂಬಗಳು ಸೇರಿ ಕಾಳಿ ಹುಲಿ ಮೀಸಲು ವ್ಯಾಪ್ತಿಯಿಂದ 600 ಕ್ಕೂ ಹೆಚ್ಚಿನ ಕುಟುಂಬಗಳನ್ನು ಸ್ಥಳಾಂತರಿಸಿ ಹುಲಿಗಳಿಗೆ ಮಾನವ ಚಟುವಟಿಕೆ ರಹಿತ ಪ್ರದೇಶಗಳನ್ನು ನಿರ್ಮಿಸಿದ್ದೇವೆಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಇದೀಗ ಇದೇ ಅರಣ್ಯ ಪ್ರದೇಶದಲ್ಲಿ ರೈಲ್ವೆ ದ್ವಿಪಥ ಕಾಮಗಾರಿಗೆ ಹಸಿರು ನಿಶಾನೆ ತೋರಲು ಸರ್ಕಾರ ಹೊರಟಿರುವುದು ಸರಿಯಲ್ಲಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.