ADVERTISEMENT

ಇದೇ 25 ರಿಂದ ಮುಂಗಾರು ಚುರುಕು?

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 18:30 IST
Last Updated 22 ಜೂನ್ 2020, 18:30 IST
ಮಳೆ- ಸಾಂದರ್ಭಿಕ ಚಿತ್ರ
ಮಳೆ- ಸಾಂದರ್ಭಿಕ ಚಿತ್ರ   

ಬೆಂಗಳೂರು: ಇದೇ 25ರಿಂದ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 24ರವರೆಗೆ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ. 2.8ರಿಂದ 3.3 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುವ ಸಂಭವವಿದ್ದು, ಮೀನುಗಾರರು ಮಂಗಳವಾರ ಕಡಲಿಗೆ ಇಳಿಯದಂತೆ ಸೂಚಿಸಿದೆ.

25ರಿಂದ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಐದು ದಿನಗಳವರೆಗೆ ಸಾಧಾರಣ ಮಳೆಯಾಗಲಿದೆ.

ADVERTISEMENT

ಜೂನ್ ಮೊದಲ ವಾರದಲ್ಲಿ ಮುಂಗಾರು ಅಬ್ಬರಿಸಿದರೂ ಕರಾವಳಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಲಿಲ್ಲ. ಜುಲೈ ಮೊದಲ ವಾರದಲ್ಲಿ ಮುಂಗಾರು ಮತ್ತೆ ಚುರುಕುಗೊಳ್ಳಲಿದೆ ಎಂದು ಕೃಷಿ ಹವಾಮಾನ ತಜ್ಞರು ನಿರೀಕ್ಷಿಸಿದ್ದರು. ಆದರೆ, ಜುಲೈಗೂ ಮುನ್ನವೇ ಮುಂಗಾರು ಬಿರುಸುಗೊಳ್ಳುವ ಸಾಧ್ಯತೆ ಇದೆ.

ಕದ್ರಾ ಹಾಗೂ ಸುಬ್ರಹ್ಮಣ್ಯದಲ್ಲಿ ಸೋಮವಾರ 9 ಸೆಂ.ಮೀ. ಗರಿಷ್ಠ ಮಳೆಯಾಗಿದೆ. ಕೊಲ್ಲೂರು 8, ಕಾರ್ಕಳ 7, ಪುತ್ತೂರು, ಬೆಳ್ತಂಗಡಿ 6, ಸುಳ್ಯ, ಧರ್ಮಸ್ಥಳ, ಭಾಗಮಂಡಲ, ಬೆಂಗಳೂರು, ತಿಪಟೂರು 5, ಕುಂದಾಪುರ 4, ಮೂಡುಬಿದ್ರೆ, ಗೋಕರ್ಣ, ಅಂಕೋಲಾ, ಮಡಿಕೇರಿ, ಮಂಗಳೂರು, ಉಡುಪಿ, ವಿರಾಜಪೇಟೆ, ಶೃಂಗೇರಿ, ಕುಣಿಗಲ್‍ನಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ರಾಯಚೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಮಡಿಕೇರಿಯಲ್ಲಿ 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ರಾಜ್ಯದ ವಿವಿಧೆಡೆ ಉತ್ತಮ ಮಳೆ

ರಾಜ್ಯದ ಕರಾವಳಿಯಲ್ಲಿ ಮುಂಗಾರು ಚುರುಕಾಗಿದೆ. ಮಲೆನಾಡು ಭಾಗದಲ್ಲಿಯೂ ಹದವಾದ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟ ಸಾಲಿನಲ್ಲಿರುವ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಹೆಚ್ಚು ಮಳೆಯಾಗಿದೆ. ನೇತ್ರಾವತಿ, ಕುಮಾರಧಾರಾ ಸೇರಿ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹದವಾಗಿ ಸುರಿದಿದೆ. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಭಾನುವಾರ ರಾತ್ರಿಯೂ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿತ್ತು.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಕೊಪ್ಪಳ ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಕಲಬುರ್ಗಿ ನಗರದಲ್ಲಿ ಸಂಜೆ ಕೆಲಹೊತ್ತು ಮಳೆ ಸುರಿಯಿತು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬೊಗರಿಬೈದಲ್ಲಿ ಅಘನಾಶಿನಿ ನದಿ ನೀರಿನ ರಭಸಕ್ಕೆ ಬೊಗರಿಬೈಲ ಗ್ರಾಮದ ಪ್ರವಾಹ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗೆ ಗುಡ್ಡವನ್ನು ಕತ್ತರಿಸಿದ ಕೆಲವು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಣ್ಣು ಕುಸಿತವಾಗುತ್ತಿದೆ.

ಹೊಸಪೇಟೆಯಲ್ಲಿ ಸೋಮವಾರ ಸಂಜೆ ಒಂದು ಗಂಟೆ ಎಡೆಬಿಡದೆ ಮಳೆ ಸುರಿಯಿತು. ವಿಜಯಪುರದ ತಾಳಿಕೋಟೆ ಪಟ್ಟಣದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.