ಬಂಧನ
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ರಾಜಸ್ಥಾನದಿಂದ ದಾವಣಗೆರೆಗೆ ಮಾದಕವಸ್ತು ಪೂರೈಸುತ್ತಿದ್ದ ಪ್ರಕರಣದಲ್ಲಿ ಇಲ್ಲಿನ ವಿದ್ಯಾನಗರ ಠಾಣೆ ಪೊಲೀಸರು ಭಾನುವಾರ ರಾತ್ರಿ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆಯಲ್ಲಿ ನೆಲೆಸಿದ್ದ ರಾಜಸ್ಥಾನದ ಜೋದ್‌ಪುರ ಮೂಲದ ಪರಶುರಾಮ್ ಅಲಿಯಾಸ್ ಪಾರಸ್ (37), ತಮಿಳುನಾಡಿನ ಕೃಷ್ಣಮೂರ್ತಿ ಸಿಂಗಾರಾಮ್ (44) ಹಾಗೂ ದಾವಣಗೆರೆ ತಾಲ್ಲೂಕಿನ ಜರಿಕಟ್ಟೆಯ ಎಂ.ಮಂಜುನಾಥ ಅಲಿಯಾಸ್ ದೋನಿ (38) ಹಾಗೂ ತುರ್ಚಘಟ್ಟದ ಅನ್ವರ್ ಬಾಷಾ (50) ಬಂಧಿತರು. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 8ಕ್ಕೆ ಏರಿಕೆಯಾಗಿದೆ. ಆರೋಪಿಗಳಿಂದ ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
‘ಬಂಧಿತರು ಅನೇಕ ವರ್ಷಗಳಿಂದ ಸಿಂಥೆಟಿಕ್ ಡ್ರಗ್ಸ್ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ಇದೆ. ಬಂಧಿತರು ಇಲ್ಲಿನ ಯುವಜನತೆಗೆ ಡ್ರಗ್ಸ್ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಆದರೂ, ಈ ಬಗ್ಗೆ ತನಿಖೆ ನಡೆಸುತ್ತೇವೆ. ತಲೆ ಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಪೊಲೀಸರು ಡಿಸೆಂಬರ್ 22ರಂದು ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ, ರಾಜಸ್ಥಾನದ ಜೋಧಪುರದ ರಾಮ್ ಸ್ವರೂಪ್ (33), ಧೋಲಾರಾಮ್ (36) ಹಾಗೂ ದಾವಣಗೆರೆಯ ದೇವಕಿಶನ್ (35) ಅವರನ್ನು ಬಂಧಿಸಿದ್ದರು. ಆರೋಪಿಗಳಿಂದ ₹ 10 ಲಕ್ಷ ಮೌಲ್ಯದ ಮಾದಕವಸ್ತು ಹಾಗೂ ₹ 1 ಲಕ್ಷ ನಗದು ಜಪ್ತಿ ಮಾಡಿದ್ದರು. ಬಂಧಿತರಲ್ಲಿ ಕೆಲವರು ರಾಜಕಾರಣಿಗಳಿಗೆ ಆಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.