ಬೆಂಗಳೂರು: ಬಹು ನಿರೀಕ್ಷಿತ ರಫೇಲ್ ಯುದ್ಧ ವಿಮಾನವನ್ನು ಫ್ರಾನ್ಸ್ ಮಂಗಳವಾರ ಭಾರತಕ್ಕೆ ಹಸ್ತಾಂತರಿಸಿತು. ಭಾರತಕ್ಕೆ ಸಿಕ್ಕ ಮೊದಲ ರಫೇಲ್‌ನ ಚಕ್ರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿಂಬೆಹಣ್ಣು ಇಟ್ಟು, ಹೂ ತೆಂಗಿನ ಕಾಯಿ ಅರ್ಪಿಸಿ, ‘ಓಂ‘ ಎಂದು ಬರೆದು ಆಯುಧ ಪೂಜೆಯನ್ನೂ ನೆರವೇರಿಸಿದರು. ಆದರೆ, ಚಕ್ರಕ್ಕೆ ನಿಂಬೆಹಣ್ಣು ಇಟ್ಟ ಬೆಳವಣಿಗೆ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ.
ರಾಜನಾಥ್ ಸಿಂಗ್ ನಿಂಬೆಹಣ್ಣುಗಳನ್ನಿಟ್ಟು ಪೂಜೆ ನೆರವೇರಿಸಿದ ದೃಶ್ಯ ರಾಷ್ಟ್ರೀಯ, ಅಂತರರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ, ಇತ್ತ ಸಾಮಾಜಿಕ ತಾಣಗಳಲ್ಲಿ ರಾಜನಾಥ್ ಸಿಂಗ್ ಮತ್ತು ನಿಂಬೆಹಣ್ಣು ಟ್ರೋಲ್ ಆಯಿತು. ಅದು ಕರ್ನಾಟಕದಲ್ಲಿ ಸಲ್ಪ ಹೆಚ್ಚಿಗೇ ಆಯಿತು. ಅದಕ್ಕೂ ಕಾರಣಗಳಿವೆ.
ನಿಂಬೆಹಣ್ಣಿನ ವಿಚಾರವಾಗಿ ರಾಜ್ಯದಲ್ಲಿಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ ಅವರನ್ನು ಬಿಜೆಪಿತೀವ್ರವಾಗಿ ಟೀಕಿಸಿ, ಕುಹಕವಾಡಿತ್ತು. ನಿಂಬೆಹಣ್ಣು ರೇವಣ್ಣ ಎಂದೆಲ್ಲ ಅವರನ್ನು ಬಿಜೆಪಿ ಗೇಲಿ ಮಾಡಿತ್ತು.
ಇದೇ ನಿಂಬೆಹಣ್ಣಿನ ವಿಚಾರವಾಗಿ ರೇವಣ್ಣ ಅವರನ್ನು ಒಂದೊಮ್ಮೆ ಬಿಜೆಪಿಯ ಕೆ.ಎಸ್ ಈಶ್ವರಪ್ಪ ಅವರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರೇವಣ್ಣ, ‘ಅವರಿಗೂ ಒಂದು ನಿಂಬೆಹಣ್ಣು ಕೊಡೋಣ ಬಿಡಿ,‘ ಎಂದಿದ್ದರು. ರೇವಣ್ಣರ ಈ ಮಾತಿಗೆ ಪ್ರತಿಯಾಗಿ ಮಾತನಾಡಿದ್ದ ಈಶ್ವರಪ್ಪ, ‘ನನಗೆ ನಿಂಬೆ ಹಣ್ಣು ಕೊಟ್ಟರೆ ನಿಂಬೆ ಹಣ್ಣನ್ನು ಮಾಂಸದೂಟದಲ್ಲಿ ಹಿಂಡಿಕೊಂಡು ರೇವಣ್ಣನ ಸಮೇತ ನುಂಗಿ ಹಾಕ್ತೇನೆ,’ ಎಂದೂ ಹೇಳಿದ್ದರು.
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಸೋತ ನಂತರ ಮಾತನಾಡಿದ್ದ ಹಾಸನದ ಬಿಜೆಪಿ ಮುಖಂಡ ಎ.ಮಂಜು, ‘ಎಚ್.ಡಿ ರೇವಣ್ಣ ಅವರ ನಿಂಬೆಹಣ್ಣು, ಬರಿಗಾಲು ಪೂಜೆ ಫಲಿಸಲಿಲ್ಲ,’ ಎಂದೂ ಕುಹಕವಾಡಿದ್ದರು.
ನಿಂಬೆಹಣ್ಣು ಕರ್ನಾಟಕದಲ್ಲಿ ರಾಜಕೀಯದ ಟೀಕೆಗೆ ಅಸ್ತ್ರ, ಜೆಡಿಎಸ್ ನಾಯಕರನ್ನು ಹಣಿಯಲು ಇರುವ ದಾಳ. ಅದು ಈ ಮಟ್ಟಿಗೆರಾಜಕೀಯ ಮಹತ್ವ ಪಡೆದಿರುವ ಹೊತ್ತಲ್ಲೇ ಕೇಂದ್ರ ಸಚಿವರಾಜನಾಥ್ ಸಿಂಗ್ ಅವರು ನಿಂಬೆಹಣ್ಣಿಟ್ಟು ರಫೇಲ್ ಪೂಜೆ ಮಾಡಿದ್ದು, ಬಿಜೆಪಿ ವಿರುದ್ಧ ನೆಟ್ಟಿಗರು ತಿರುಗಿಬೀಳುವಂತೆ ಮಾಡಿತು.ಕರ್ನಾಟಕದ ಮಂದಿ ಇದೇ ವಿಚಾರವಾಗಿ ಬಿಜೆಪಿ ನಾಯಕರ ವರ್ತನೆ, ರಾಜನಾಥ್ ಸಿಂಗ್ ನಡೆಯನ್ನು ಗೇಲಿ ಮಾಡಿದರು.
ರೇವಣ್ಣ ನಿಂಬೆಹಣ್ಣು ಇಟ್ಟುಕೊಂಡರೆ ತಪ್ಪು ಎನ್ನುವ ಬಿಜೆಪಿ ನಾಯಕರು, ರಾಜನಾಥ್ ಸಿಂಗ್ ರಫೇಲ್ ಪೂಜೆಗೆ ನಿಂಬೆಹಣ್ಣು ಬಳಸಿದ್ದರ ಬಗ್ಗೆ ಏನು ಹೇಳುತ್ತದೆ ಎಂದು ಹಲವರು ಫೇಸ್‌ಬುಕ್, ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರು ಮಾಡಿದರೆ ಅದು ಸಂಪ್ರದಾಯ, ಬೇರೆಯವರು ಮಾಡಿದರೆ ಅದು ತಪ್ಪೇ? ಎಂದು ಇನ್ನೂ ಕೆಲವರು ಪ್ರಶ್ನೆ ಮಾಡಿದ್ದಾರೆ.
ರಫೇಲ್ ಬದಲು ಒಂದು ನಿಂಬೆಹಣ್ಣು ಬಿಸಾಕಿ ನಮ್ಮ ದೇಶದ ಶತ್ರುಗಳನ್ನು ನಾಶಾ ಮಾಡಬಹುದಿತ್ತು ಅಲ್ವಾ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಮಾರ್ಕೆಟ್‌ನಲ್ಲಿ ನಿಂಬೆಹಣ್ಣಿನ ಹವಾ ಜೋರಾಗಿದೆ ಎಂದು ಇನ್ನೂ ಕೆಲವರು ಗೇಲಿ ಮಾಡಿದ್ದಾರೆ.
ಇನ್ನೂ ಈ ಟ್ರೋಲ್‌ಗಳಿಗೆ ಪ್ರತಿಯಾಗಿ ರಾಜನಾಥ್ ಸಿಂಗ್ ಅವರನ್ನು ಸಮರ್ಥಿಸಿದ ಅಭಿಪ್ರಾಯಗಳೂ ವ್ಯಕ್ತವಾಗಿವೆ.
‘ರೇವಣ್ಣ ನಿಂಬೆಹಣ್ಣು ಇಟ್ಟುಕೊಳ್ಳುತ್ತಿದ್ದದ್ದು ಅವರ ಸ್ವಾರ್ಥಕ್ಕಾಗಿ. ಆದರೆ, ರಾಜನಾಥ್ ನಿಂಬೆಹಣ್ಣು ಇಟ್ಟಿದ್ದು ದೇಶಕ್ಕಾಗಿ,’ ಎಂದು ಹಲವರು ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.