ADVERTISEMENT

ರಾಮನಗರದಲ್ಲಿ ಮೋಸ ಹೋಗ್ಬಿಟ್ಟೆ: ಬಿಎಸ್‌ವೈ

ಉಪಚುನಾವಣೆ ಸೋಲಿನ ಆತ್ಮಾವಲೋಕನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 19:49 IST
Last Updated 29 ನವೆಂಬರ್ 2018, 19:49 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಯ ನಂಬಿ ಮೋಸ ಹೋಗಿಬಿಟ್ಟೆ. ತಪ್ಪಾಗಿದೆ. ಇನ್ನು ಮುಂದೆ ಹೀಗಾಗುವುದಿಲ್ಲ’. ಇದು ಬಿಜೆ‍ಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮನದಾಳದ ನುಡಿ.

ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ‘ಉತ್ತಮ ಅಭ್ಯರ್ಥಿ ಎಂದು ಕಾಂಗ್ರೆಸ್‌ನಿಂದ ಕರೆದುಕೊಂಡು ಬಂದೆವು. ಸ್ಪರ್ಧೆ ಒಡ್ಡುತ್ತಾರೆ ಎಂದು ಭಾವಿಸಿದೆವು. ಕೊನೆಯ ಕ್ಷಣದಲ್ಲಿ ಕೈಕೊಟ್ಟರು. ಬಳಿಕ ಪಕ್ಷದ ಚಿಹ್ನೆಯಡಿಯೇ ಸ್ಪರ್ಧಿಸಿದೆವು. 16 ಸಾವಿರ ಮತಗಳು ಬಂದವು. ಮುಂದಿನ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡೋಣ’ ಎಂದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಅಂತರದ ಸೋಲಿಗೆ ಮಾಜಿ ಸಚಿವ ಬಿ.ಜನಾರ್ದನ ರೆಡ್ಡಿ ಅವರ ಹೇಳಿಕೆಯೇ ಕಾರಣ ಎಂದು ಹಲವು ಶಾಸಕರು ಬೊಟ್ಟು ಮಾಡಿದರು. ಶಾಸಕ ವಿ.ಸೋಮಣ್ಣ ಅವರ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಯಿತು ಎಂದೂ ಹಲವರು ಅಭಿ‍ಪ್ರಾಯ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ನಾಯಕರು ಇಂತಹ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಪಕ್ಷದ ನಾಯಕರ ನಡುವೆ ಸಾಮರಸ್ಯದ ಕೊರತೆ ಇತ್ತು. ಚುನಾವಣಾ ಉಸ್ತುವಾರಿ ವಹಿಸಿದ್ದವರು ಹೆಚ್ಚಿನ ಜವಾಬ್ದಾರಿ ಹೊರಲಿಲ್ಲ. ಕಾಂಗ್ರೆಸ್‌ ಸಹ ವಾಲ್ಮೀಕಿ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದ್ದು ಪರಿಣಾಮ ಬೀರಿತು. 2004ರ ನಂತರ ಬಳ್ಳಾರಿ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ನಾಯಕರು ಮುಂಚೂಣಿಗೆ ಬರಲಿಲ್ಲ. ಇದು ಸಹ ಮತ ವಿಭಜನೆಗೆ ಕಾರಣವಾಯಿತು. ಮುಂದಿನ ಚುನಾವಣೆ ವೇಳೆ ಈ ತಪ್ಪು ಆಗದಂತೆ ಜಾಗ್ರತೆ ವಹಿಸಬೇಕು’ ಎಂದು ಅಭಿಪ್ರಾಯ ವ್ಯಕ್ತವಾಯಿತು. ‘ಅದೇ ಕಾರಣಕ್ಕೆ ಬಳ್ಳಾರಿ ಕ್ಷೇ‌ತ್ರದ ಹೊಣೆಯನ್ನು ಶಾಸಕ ಜಗದೀಶ ಶೆಟ್ಟರ್ ಅವರಿಗೆ ವಹಿಸಲಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ಶಿವಮೊಗ್ಗ ಕ್ಷೇತ್ರದಲ್ಲೇ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಾಯಕರು ಪ್ರಯತ್ನಿಸಿದರು. 20ಕ್ಕೂ ಅಧಿಕ ನಾಯಕರಿಗೆ ಚುನಾವಣಾ ಹೊಣೆ ನೀಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಕ್ಷೇತ್ರದಲ್ಲಿ ಮೂರು ದಿನ ಠಿಕಾಣಿ ಹೂಡಿದರು. ಇದರಿಂದಾಗಿ, ಯಡಿಯೂರಪ್ಪ ಅವರಿಗೆ ಬೇರೆ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ’ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಮಂಡ್ಯ ಕ್ಷೇತ್ರದಲ್ಲಿ ಪಕ್ಷದ ಸಾಧನೆ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಕಳೆದ ಚುನಾವಣೆಯಲ್ಲಿ ಪಕ್ಷ 80 ಸಾವಿರ ಮತಗಳನ್ನು ಪಡೆದಿತ್ತು. ಈ ಸಲ 2.40 ಲಕ್ಷಕ್ಕೆ ಏರಿದೆ. ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಪ್ರಯತ್ನ ಮಾಡಿದರೆ ಗೆಲುವಿನ ಹತ್ತಿರಕ್ಕೆ ಬರಬಹುದು ಎಂಬ ಚರ್ಚೆಯೂ ನಡೆಯಿತು.

‘ಜಾತಿ ರಾಜಕಾರಣ ಸಹ ಪಕ್ಷದ ಸೋಲಿಗೆ ಕಾರಣ. ಆಡಳಿತ ಪಕ್ಷ ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡಿತ್ತು. ಈ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಸಂಘಟನೆ ಮಾಡಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರು ಸುದ್ದಿಗಾರರಿಗೆ ತಿಳಿಸಿದರು.

10ಕ್ಕೆ ಪ್ರಮುಖರ ಸಭೆ: ಬಿಜೆಪಿ ಪ್ರಮುಖರ ಸಭೆ ಹತ್ತೇ ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಅಲ್ಲಿನ ಉಪಚುನಾವಣಾ ಸೋಲಿನ ಬಗ್ಗೆ ಚರ್ಚೆ ನಡೆಯಲಿಲ್ಲ. ಬಿಬಿಎಂಪಿ ವಿರೋಧ ಪಕ್ಷದ ನಾಯಕನ ಬದಲಾವಣೆ, ಲೋಕಸಭಾ ಚುನಾವಣಾ ಸಿದ್ಧತೆ, ಸಂಘಟನೆಗಳ ಪುನರ್‌ರಚನೆ ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಯಬೇಕಿತ್ತು. ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್‌ 10ರಂದು ಸಂಜೆ ಪ್ರಮುಖರ ಸಭೆ ನಡೆಸಲು ನಿರ್ಧರಿಸಲಾಯಿತು.

ಡಿ.10ಕ್ಕೆ ಪ್ರತಿಭಟನೆ
ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ಡಿ.10ರಂದು ಮಧ್ಯಾಹ್ನ 1 ಲಕ್ಷ ರೈತರನ್ನು ಸೇರಿಸಿ ಭಾರಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.