ADVERTISEMENT

ಜಾಲಿವುಡ್ ಸ್ಟುಡಿಯೊಗೆ ಬೀಗ: ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ -ಡಿಕೆಶಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:42 IST
Last Updated 8 ಅಕ್ಟೋಬರ್ 2025, 7:42 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಬೆಂಗಳೂರು: 'ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೊದಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಉದ್ಯೋಗವೂ ಮುಖ್ಯ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೊ ಅದಕ್ಕೆ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಬಿಗ್ ಬಾಸ್ ಒಂದೇ ಅಲ್ಲ. ಎಲ್ಲ ಮನರಂಜನಾ ಕಾರ್ಯಕ್ರಮಗಳು ನಡೆಯಬೇಕು’ ಎಂದರು.

ADVERTISEMENT

‘ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಅದರ ಆದೇಶದಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ’ ಎಂದರು.

ನಟ್ಟು ಬೋಲ್ಟ್ ಟೈಟ್ ಎಂದು ಜೆಡಿಎಸ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ‘ಎಕ್ಸ್ ’ ಮಾಡಿರುವ ಬಗ್ಗೆ ಕೇಳಿದಾಗ, ‘ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರಾದರೂ ಮಾಡಿಕೊಳ್ಳಲಿ, ಮೇಲಿನಿಂದ ಯಾರನ್ನಾದರೂ ಕರೆದುಕೊಂಡಾದರೂ ಬಂದು ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಈ ವಿಚಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು, ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ (ಕುಮಾರಸ್ವಾಮಿ) ನೆಮ್ಮದಿ, ನಿದ್ದೆ ಹಾಗೂ ಯಾವುದಕ್ಕೂ ಶಕ್ತಿ ಬರುವುದಿಲ್ಲ’ ಎಂದು ಲೇವಡಿ ಮಾಡಿದರು.

ಲಾಲ್‌ಬಾಗ್ ವಿರೂಪಗೊಳ್ಳುವುದಿಲ್ಲ: ‘ಸುರಂಗ ರಸ್ತೆಯಿಂದ ಲಾಲ್ ಬಾಗ್ ವಿರೂಪಗೊಳ್ಳಲಿದೆ’ ಎನ್ನುವ ಬಗ್ಗೆ ಕೇಳಿದಾಗ, 'ಬೆಂಗಳೂರಿನ ಪ್ರಗತಿಗೆ ಸುರಂಗ ರಸ್ತೆ ಮಾಡಲಾಗುತ್ತಿದೆ. ನಾವು ಯಾವುದೇ ರೀತಿಯಲ್ಲೂ ಲಾಲ್ ಬಾಗ್ ಅನ್ನು ವಿರೂಪಗೊಳಿಸಲು ಹೋಗುವುದಿಲ್ಲ. ಲಾಲ್‌ಬಾಗ್‌ಗೆ ಐತಿಹಾಸಿಕ ಮಹತ್ವವಿದೆ. ಅದು ಎಷ್ಟು ಪವಿತ್ರವಾದುದು ಎಂಬುದು ನಮಗೆ ತಿಳಿದಿದೆ. ಮುಂದಿನ ಸೋಮವಾರ ಲಾಲ್ ಬಾಗ್ ಅನ್ನು ಅಧಿಕಾರಿಗಳ ಜೊತೆ ವೀಕ್ಷಣೆ ಮಾಡುತ್ತೇನೆ. ಈ ಕುರಿತು ಯಾರಿಗೂ ಆತಂಕ ಬೇಡ’ ಎಂದರು‌.

ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು: ‘ಸುಪ್ರೀಂಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಘಟನೆ ತಪ್ಪು. ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ನಾವೆಲ್ಲರೂ ಖಂಡಿಸಬೇಕು. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಿವಕುಮಾರ್ ಆಗ್ರಹಿಸಿದರು.

'ಮುಖ್ಯ ನ್ಯಾಯಮೂರ್ತಿಯವರು ತಪ್ಪಿತಸ್ಥನ ವಿರುದ್ಧ ಕ್ರಮ ತೆಗದುಕೊಳ್ಳಬೇಡಿ ಎಂದಿದ್ದಾರೆ. ಆದರೂ ಸುಮೋಟೊ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು' ಎಂದರು.

ಸಚಿವ ಸಂಪುಟ ಪುನರ್ ವಿಸ್ತರಣೆ ಬಗ್ಗೆ ಕೇಳಿದಾಗ, 'ಅದರ ಬಗ್ಗೆ ಗೊತ್ತಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.