ADVERTISEMENT

ದಿಢೀರ್‌ ಮೇಲೇರಿ ಇಳಿದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪತನ ಸೂತ್ರಧಾರಿ

ರಮೇಶ್ ಜಾರಕಿಹೊಳಿಯ ಏಳು– ಬೀಳು

ಎಸ್.ರವಿಪ್ರಕಾಶ್
Published 3 ಮಾರ್ಚ್ 2021, 19:44 IST
Last Updated 3 ಮಾರ್ಚ್ 2021, 19:44 IST
   

ಬೆಂಗಳೂರು: ಬಿಜೆಪಿಯ ರಮೇಶ ಜಾರಕಿಹೊಳಿ ಅವರು ರಾಜ್ಯ ರಾಜಕಾರಣದಲ್ಲಿ ರಾಕೆಟ್‌ ವೇಗದಲ್ಲಿ ಏರಿ ಅಷ್ಟೇ ರಭಸದಲ್ಲಿ ಪಾತಾಳಕ್ಕೆ ಕುಸಿದಿದ್ದಾರೆ. ಜೆಡಿಎಸ್‌–ಕಾಂಗ್ರೆಸ್ ಸರ್ಕಾರದ ಪತನದ ಸೂತ್ರಧಾರಿ ಎಂದೇ ಬಿಂಬಿತರಾಗಿರುವ ರಮೇಶ ಅವರು ಸಚಿವರಾಗಿ ಒಂದು ವರ್ಷದಲ್ಲೇ ಲೈಂಗಿಕ ಹಗರಣದ ಆರೋಪದ ಮೇಲೆ ನಿರ್ಗಮಿಸಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಟ್ಟಿಗೆದ್ದು ಮೈತ್ರಿ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದರು. ಬೆಳಗಾವಿ ರಾಜಕಾರಣದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಡಿ.ಕೆ.ಶಿವಕುಮಾರ್ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂಬುದು ರಮೇಶ ಅವರ ಸಿಟ್ಟಿಗೆ ಕಾರಣವಾಗಿತ್ತು. ಮೈತ್ರಿ ಸರ್ಕಾರ ಪತನಕ್ಕೆ ಹಲವು ಬಾರಿ ಪ್ರಯತ್ನ ನಡೆಸಿದ್ದರೂ ಕೈಗೂಡಿರಲಿಲ್ಲ.

ಸಿದ್ದರಾಮಯ್ಯ ಸರ್ಕಾರದಲ್ಲಿ ಸಣ್ಣ ಕೈಗಾರಿಕೆಗಳ ಸಚಿವರಾಗಿದ್ದ ರಮೇಶ ಅವರಿಗೆ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಪೌರಾಡಳಿತ ಖಾತೆ ಸಿಕ್ಕಿತ್ತು. ಸಚಿವ ಸ್ಥಾನ ಸಿಕ್ಕಿದ್ದರೂ ತಮ್ಮ ಕಚೇರಿಗೆ ಒಂದು ದಿನವೂ ಸರಿಯಾಗಿ ಹೋಗಿರಲಿಲ್ಲ. ಸಚಿವ ಸಂಪುಟ ಸಭೆಗಳಿಗೆ ಗೈರಾಗಿದ್ದರು. ತಮ್ಮ ಬಹುತೇಕ ಸಮಯವನ್ನು ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಟೀಕಿಸುವುದರಲ್ಲೇ ಸಮಯ ವ್ಯಯಮಾಡಿದರು ಎಂಬ ಟೀಕೆಗೆ ಗುರಿಯಾದರು.

ADVERTISEMENT

2019ರ ಜೂನ್‌ನಲ್ಲಿ ಕಾಂಗ್ರೆಸ್‌ನ 15 ಶಾಸಕರು ಮತ್ತು ಜೆಡಿಎಸ್‌ನ ಇಬ್ಬರು ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹೋದಾಗ ಅದರ ನೇತೃತ್ವವನ್ನು ಜಾರಕಿಹೊಳಿಯೇ ವಹಿಸಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ತಮ್ಮ ಜತೆ ಬಂದವರಿಗೆ ಉಪಚುನಾವಣೆಯಲ್ಲಿ ಟಿಕೆಟ್‌ ಕೊಡಿಸುವ ಮತ್ತು ಸಚಿವ ಸ್ಥಾನಕ್ಕಾಗಿ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮಂತ್ರಿ ಮಂಡಲ ಸೇರ್ಪಡೆ ವೇಳೆ ತಮಗೆ ಜಲಸಂಪನ್ಮೂಲ ಖಾತೆ ನೀಡುವುದರ ಜತೆಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ನೀಡಬೇಕು ಎಂದು ಪಟ್ಟು ಹಿಡಿದ್ದರು. ಮುಖ್ಯಮಂತ್ರಿ ಯಡಿ
ಯೂರಪ್ಪ ಬೇರೆ ದಾರಿ ಇಲ್ಲದೇ ಅವರ ಬೇಡಿಕೆಗೆ ಮಣಿಯಲೇಬೇಕಾಯಿತು.

ಹಾದಿ ಬದಲಿಸಿದ ಜಾರಕಿಹೊಳಿ: ಸಚಿವರಾಗಿ ಆರು ತಿಂಗಳು ಕಳೆಯುತ್ತಲೇ ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಮುಖ್ಯಮಂತ್ರಿಯವರಿಗೆ ಇರಿಸುಮುರಿಸು ಉಂಟು ಮಾಡಿದ್ದರು. ಸಚಿವ ಸಂಪುಟ ವಿಸ್ತರಣೆಗಾಗಿ ಇಂತಹ ಸಭೆಗಳನ್ನು ನಡೆಸಿ ಒತ್ತಡ ತಂತ್ರ ಅನುಸರಿಸಿದ್ದರು. ಈ ಬಗ್ಗೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಹುದ್ದೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಬಿಂಬಿಸುವ ಕೆಲಸವನ್ನು ಸದ್ದಿಲ್ಲದೇ ಮಾಡಿದ್ದರು. ದೆಹಲಿಯಲ್ಲಿ ಜೋಷಿ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದರು. ಈಗ ಬಹಿರಂಗವಾಗಿರುವ ಸಿ.ಡಿಯಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟ ಮತ್ತು ಪ್ರಲ್ಹಾದ ಜೋಷಿ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ ಎಂದು ಮೂಲಗಳು ಹೇಳಿವೆ.

ಅದೇ ಸಿ.ಡಿಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ ಎಂದು ಹೊಗಳಿದ್ದಾರೆ. ಈ ವ್ಯಕ್ತಿ ಎಲ್ಲೆಲ್ಲಿ ರಾಜಕೀಯದ ಸೂಕ್ಷ್ಮತೆಯನ್ನು ಚರ್ಚಿಸುತ್ತಾರೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಲೈಂಗಿಕ ಹಗರಣಗಳಲ್ಲಿ ಸಿಲುಕಿ ಪುನಃ ರಾಜಕೀಯ ಭವಿಷ್ಯ ಕಂಡುಕೊಂಡವರು ವಿರಳ. ಈ ಹಿಂದೆ ಹರತಾಳು ಹಾಲಪ್ಪ ಅವರು ಇಂತಹದ್ದೇ ಆರೋಪಕ್ಕೆ ಗುರಿಯಾಗಿದ್ದರು ಬಳಿಕ ಕ್ಲಿನ್ ಚಿಟ್‌ ಪಡೆದರು. ಸಿದ್ದರಾಮಯ್ಯ ಅವಧಿಯಲ್ಲಿ ಲೈಂಗಿಕ ಹಗರಣದಲ್ಲಿ ರಾಜೀನಾಮೆ ನೀಡಿದ್ದ ಎಚ್‌.ವೈ.ಮೇಟಿಗೆ ಕಾಂಗ್ರೆಸ್‌ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಿತು, ಆದರೆ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಜಾರಕಿಹೊಳಿ ರಾಜಕೀಯವಾಗಿ ಮೂಲೆಗುಂಪಾಗಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ರಾಜಕೀಯ ಪಿತೂರಿ

ಮೈಸೂರು: ‘ರಮೇಶ್‌ ಜಾರಕಿಹೊಳಿ ಬಹಳ ದೈವಭಕ್ತ, ಸಮಾಜಕ್ಕೆ ಹೆದರುವ ವ್ಯಕ್ತಿ. ಮೇಲ್ನೋಟಕ್ಕೆ ಇದೊಂದು ರಾಜಕೀಯ ಪಿತೂರಿ ಎನಿಸುತ್ತಿದೆ. ಸತ್ಯ ಹೊರಗೆ ಬರುವವರೆಗೆ ಕಾಯೋಣ’ ಎಂದು ಸಚಿವ ಸಿ.ಪಿ.ಯೋಗೇಶ್ವರ್‌ ಬುಧವಾರ ಇಲ್ಲಿ ತಿಳಿಸಿದರು.

‘ರಮೇಶ್‌ ಜೊತೆ ನಾನು ಕೂಡ ಮಾತನಾಡಿದ್ದೇನೆ. ಯಾರೋ ದುರುದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಹೇಳುತ್ತಿದ್ದಾರೆ. ನೈತಿಕವಾಗಿ ಅವರಿಗೆ ನಾನೂ ಬೆಂಬಲ ಕೊಡುತ್ತೇನೆ. ಊಹಾಪೋಹದ ಮೇಲೆ ಮಾತನಾಡುವುದಿಲ್ಲ. ಸಿ.ಡಿ ನೈಜವೋ, ನಕಲಿಯೋ ನನಗೆ ಗೊತ್ತಿಲ್ಲ’ ಎಂದರು.

ವಿಚಾರಣೆ ನಡೆಯಲಿ: ‘ತಪ್ಪು ಮಾಡಿಲ್ಲ ಎಂಬುದಾಗಿ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹೀಗಾಗಿ, ವಿಚಾರಣೆ ನಡೆಯಲಿ. ತಕ್ಷಣವೇ ನಿರ್ಧಾರಕ್ಕೆ ಬರುವುದು ಸರಿಯಲ್ಲ’‌ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ತನಿಖೆ ನಡೆಯಲಿ: ‘ಸತ್ಯ ಏನೆಂಬುದು ರಮೇಶ್‌ ಜಾರಕಿಹೊಳಿ ಅವರಿಗೆ ಗೊತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಸರಿಯಾದ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.