ADVERTISEMENT

ಕಣ್ಣನ್ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಲ್ಲ: ರಂಗಾಯಣ ನಿರ್ದೇಶಕ ಕಾರ್ಯಪ್ಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 19:45 IST
Last Updated 24 ಮಾರ್ಚ್ 2022, 19:45 IST
ಅಡ್ಡಂಡ ಸಿ. ಕಾರ್ಯಪ್ಪ
ಅಡ್ಡಂಡ ಸಿ. ಕಾರ್ಯಪ್ಪ    

ಕಲಬುರಗಿ: ‘ಚಿಂತಕ ಹಿರೇಮಗಳೂರು ಕಣ್ಣನ್ ಅವರನ್ನು ಮೈಸೂರು ರಂಗಾಯಣಕ್ಕೆ ಕರೆಸಿದ್ದೇ ನಾವು. ಹೀಗಾಗಿ ಅವರು ಹಿಜಾಬ್ ವಿಚಾರದ ಕುರಿತು ಆಡಿದ ಮಾತಿನಿಂದ ರಂಗಾಯಣ ಅಂತರ ಕಾಯ್ದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ’ ಎಂದುಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

‘ತಾಯಿ’ ವಿಷಯವನ್ನಿಟ್ಟುಕೊಂಡು ಮೈಸೂರು ರಂಗಾಯಣದಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರೇಮಗಳೂರು ಕಣ್ಣನ್ ಅವರು ಆಡಿದ ಮಾತು ಈಗ ವಿವಾದಕ್ಕೆ ಗುರಿಯಾಗಿದೆ. ಹೀಗೇ ಮಾತಾಡಿ ಎಂದು ಅವರಿಗೆ ನಾವು ಬರೆದುಕೊಡಲು ಆಗುವುದಿಲ್ಲ. ಅಂದು ಅವರ ಮಾತು ಕೇಳಿ ಸಭಿಕರು ನಕ್ಕಿದ್ದಾರೆ. ಏನೂ ಸಿಗದೇ ಇದ್ದಾಗ ಕೆಲವರು ಇದನ್ನು ವಿವಾದ ಮಾಡಿದ್ದಾರೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಚಕ್ರವರ್ತಿ ಸೂಲಿಬೆಲೆ ಒಬ್ಬ ವಾಗ್ಮಿ. 2–3 ನಾಟಕಗಳನ್ನು ಬರೆದಿದ್ದಾರೆ. ಅವರು ಅಂದು ವಿವಾದವಾಗುವ ಯಾವಮಾತನ್ನೂ ಆಡಲಿಲ್ಲ. ಆಗ ಕೆಲವರಿಗೆ ನಿರಾಸೆಯಾಗಿದೆ. ಹೀಗಾಗಿ, ಕಣ್ಣನ್ ಆಡಿದ ಮಾತನ್ನು ಎಲಾಸ್ಟಿಕ್ ಎಳೆದಂತೆ ಎಳೆಯುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು. ‘ರಂಗಕರ್ಮಿ ಪ್ರಸನ್ನ ಅವರು ಕಣ್ಣನ್ ಹೇಳಿಕೆ ಖಂಡಿಸಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಪ್ರಸನ್ನರ ನಾಟಕಗಳಲ್ಲಿ ಬೈಗುಳಗಳೇ ಇಲ್ಲವೇ? ಆ ಬಗ್ಗೆ ಸಂಶಯವಿದ್ದವರು ಅವರ ‘ದಂಗೆಯ ಮುಂಚಿನ ದಿನಗಳು’ ನಾಟಕವನ್ನು ನೋಡಲಿ’ ಎಂದು ತಿರುಗೇಟು ನೀಡಿದರು.

ADVERTISEMENT

ಅಡ್ಡಂಡ ವಿರುದ್ಧ ಪ್ರತಿಭಟನೆ:ಶಿವರಾಮು
ಮೈಸೂರು:
‘ಬೌನ್ಸರ್ ಹೊಡೆದ ಏಟಿನಿಂದ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಮೃತಪಟ್ಟರು ಎಂಬುದಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಇಲ್ಲವೇ ಈ ಕುರಿತ ದಾಖಲೆ
ಬಿಡುಗಡೆ ಮಾಡಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮುಒತ್ತಾಯಿಸಿದರು.

‘ಕ್ಷಮೆಯಾಚಿಸದಿದ್ದರೆ ರಂಗಾಯಣ ಆವರಣದಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಅಣಕು ಶವಯಾತ್ರೆ ನಡೆಸಲಾಗುವುದು. ಕಾನೂನು ಹೋರಾಟಕ್ಕೂ ಮುಂದಾಗಲಿದ್ದೇವೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಸಂಸ್ಕೃತಿ, ಶಿಸ್ತಿಗೆ ಹೆಸರಾಗಿರುವ ಆರ್‌ಎಸ್‌ಎಸ್ ಕೂಡಲೇ ಕಾರ್ಯಪ್ಪ ಅವರನ್ನು ನಿಯಂತ್ರಿಸಬೇಕು. ಅಸಂಸ್ಕೃತಿಯ ಹೇಳಿಕೆ ನೀಡುವ ಮೂಲಕ ಆರ್‌ಎಸ್‌ಎಸ್‌ಗೆ ಕಾರ್ಯಪ್ಪ ಕಳಂಕ ತಂದಿದ್ದಾರೆ’ ಎಂದು ಹರಿಹಾಯ್ದರು.

‘ಕಾರ್ಯಪ್ಪ ಈ ಹಿಂದೆ ಜೈಲಿಗೆ ಹೋಗಿದ್ದು ಏಕೆ ಎಂಬುದನ್ನು ಅವರೇ ಬಹಿರಂಗಪಡಿಸಬೇಕು. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಪ್ರವೃತ್ತಿಯನ್ನು ಇನ್ನಾದರೂ ಬಿಡಬೇಕು’ ಎಂದರು.

‘ತಾಯಿ ಕುರಿತ ‘ಬಹುರೂಪಿ’ ರಂಗೋತ್ಸವದಲ್ಲಿ ಹಿರೇಮಗಳೂರು ಕಣ್ಣನ್ ಮಹಿಳೆಯರ ಕುರಿತು ಕೀಳಾಗಿ ಮಾತನಾಡಿರುವುದು ಸರಿಯಲ್ಲ‌. ಅಸಹ್ಯ ತರುವ ಹಾಗೂ ಸಮಾಜವನ್ನು ಕುಲಗೆಡಿಸುವ ಹೇಳಿಕೆ ನೀಡಿದ್ದು, ಇಂಥವರು ಸಂಸ್ಕೃತಿ ಚಿಂತಕರೇ’ ಎಂದು ಪ್ರಶ್ನಿಸಿದರು.

ಬಹುರೂಪಿ ರಂಗೋತ್ಸವದ ಸಮಾರೋಪದಲ್ಲಿ ಅಡ್ಡಂಡ ಕಾರ್ಯಪ್ಪ, ‘ಮಾಜಿ ಮುಖ್ಯಮಂತ್ರಿಯ ಮಗ, ವಿದೇಶದಲ್ಲಿ ಬೌನ್ಸರ್‌ನಿಂದ ಪೆಟ್ಟು ತಿಂದು ಮೃತಪಟ್ಟಾಗ ಅವರ ಶ್ರದ್ಧಾಂಜಲಿ ಸಭೆಯನ್ನು ರಂಗಾಯಣದಲ್ಲಿ ಮಾಡಿದಾಗ ಯಾರೂ ವಿರೋಧಿಸಿರಲಿಲ್ಲ ಏಕೆ?’ ಎಂದು ಕೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.