ಬೆಂಗಳೂರು: ನಟಿ ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದ ಬೆನ್ನು ಹತ್ತಿರುವ ಮೂರು ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕಸ್ಟಮ್ಸ್ ಇಲಾಖೆ, ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ರಾಜತಾಂತ್ರಿಕ ಕಚೇರಿಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಿವೆ.
ಈ ಜಾಲಕ್ಕೆ ನೆರವು ನೀಡುವಲ್ಲಿ ಯಾರ ಪಾತ್ರವಿದೆ ಎಂಬುದನ್ನು ಭೇದಿಸಲು, ರೆವೆನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಸಿಬಿಐ ಮಾತ್ರ ಈ ಪ್ರಕರಣದ ತನಿಖೆ ನಡೆಸುತ್ತಿದ್ದವು. ಜಾರಿ ನಿರ್ದೇಶ
ನಾಲಯವೂ (ಇ.ಡಿ) ಗುರುವಾರದಿಂದ ತನಿಖೆ ಆರಂಭಿಸಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ 15 ಕಡೆ ಶೋಧ ನಡೆಸಿದೆ.
ಅಧಿಕಾರಿ, ಸಿಬ್ಬಂದಿಗೆ ಸಂಬಂಧಿಸಿದ ಮನೆ, ಕಚೇರಿಗಳ ಶೋಧ ನಡೆಸಿದ ಸಿಬಿಐ ಹಾಗೂ ಇ.ಡಿ ಅಧಿಕಾರಿಗಳ ತಂಡಗಳು, ರನ್ಯಾರಾವ್, ಅವರ ಪತಿ ಜತಿನ್ ಹುಕ್ಕೇರಿ ಹಾಗೂ ರನ್ಯಾ ಸ್ನೇಹಿತ ತರುಣ್ ರಾಜು ಅವರ ಮನೆ, ಕಚೇರಿಗಳಲ್ಲಿ ಶೋಧ ನಡೆಸಿವೆ.
ನಾಲ್ಕೂ ಪ್ರಕರಣಗಳಿಂದ ಒಟ್ಟು 38.98 ಕೆ.ಜಿ.ಯಷ್ಟು ಚಿನ್ನವನ್ನು ವಶಕ್ಕೆ ಪಡೆದಿದೆ.
‘ಈ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಸಲು ಸಹಕಾರ ನೀಡಿ’ ಎಂದು ಡಿಆರ್‌ಐ, ಸಿಬಿಐಗೆ ಪತ್ರ ಬರೆದಿತ್ತು. ಸಿಬಿಐ ಈ ದಿಕ್ಕಿನಲ್ಲಿ ತನಿಖೆ ಆರಂಭಿಸಿದೆ. ಮುಂಬೈ ಮತ್ತು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ಟಮ್ಸ್ ಅಧಿಕಾರಿಗಳಿಗೆ ಸಮನ್ಸ್ ನೀಡಿ, ವಿಚಾರಣೆ ನಡೆಸಿದೆ.
‘ಕಸ್ಟಮ್ಸ್ ಅಧಿಕಾರಿಗಳ ನೆರವು ಇಲ್ಲದೆ ಇಷ್ಟು ದೊಡ್ಡಮಟ್ಟದ ಕಳ್ಳಸಾಗಣೆ ಸಾಧ್ಯವಿಲ್ಲ. 2024ರಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದರು. ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಯೋಜಿತರಾದ ಇತರ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಕಳ್ಳಸಾಗಣೆಗೆ ನೆರವು ನೀಡಿರುವ ಬಗ್ಗೆ ಸುಳಿವು ದೊರೆತಿದೆ’ ಎಂದು ಮೂಲಗಳು ತಿಳಿಸಿವೆ.
‘ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳೂ ಇದೇ ರೀತಿ ನೆರವು ನೀಡಿರುವ ಶಂಕೆ ಇದೆ. ಇವರು ಕಳ್ಳಸಾಗಣೆ ಜಾಲದ ಭಾಗವಾಗಿದ್ದಾರೆಯೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದಿವೆ.
‘ಜತೆಗೆ ಭಾರತದ ಕೆಲವು ರಾಜತಾಂತ್ರಿಕ ಅಧಿಕಾರಿಗಳು, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ರಾಜತಾಂತ್ರಿಕ ಕಚೇರಿಗಳ ಸಿಬ್ಬಂದಿಯೂ ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ. ದುಬೈ ಮತ್ತು ಅಬುಧಾಬಿಗೆ ಪದೇ ಪದೇ ಒಂದೆರಡು ದಿನಗಳ ಕಿರು ಪ್ರವಾಸ ಕೈಗೊಂಡ ಅಧಿಕಾರಿ–ಸಿಬ್ಬಂದಿಯ ಪ್ರವಾಸದ ವಿವರ ಕಲೆ ಹಾಕಲಾಗುತ್ತಿದೆ’ ಎಂದು ಮಾಹಿತಿ ನೀಡಿವೆ.
ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ಅಧಿಕಾರಿಗಳು ಮತ್ತೊಂದು ದಿಕ್ಕಿನಲ್ಲಿ ತನಿಖೆ ಆರಂಭಿಸಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಲ್ಲಿನ ಕಸ್ಟಮ್ಸ್ ಅಧಿಕಾರಿಗಳು, ಬಂಧಿತ ಆರೋಪಿಗಳು, ಶಂಕಿತರು, ಉದ್ಯಮಿಗಳು, ಚಿನ್ನಾಭರಣ ವ್ಯಾಪಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಗುರುವಾರ ಶೋಧ ನಡೆಸಿದ್ದಾರೆ.
‘ಕಳ್ಳಸಾಗಣೆ ಮಾಡಿದ ಚಿನ್ನವನ್ನು ಹೇಗೆ ವಿತರಣೆ ಮಾಡಲಾಗಿದೆ ಮತ್ತು ಅದನ್ನು ಸಕ್ರಮಗೊಳಿಸಿಕೊಂಡ ಬಗೆ, ಕಳ್ಳಸಾಗಣೆಯಲ್ಲಿ ಭಾಗಿಯಾದ ವ್ಯಕ್ತಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಹಣ ಹೇಗೆ ಸಂದಾಯವಾಗಿದೆ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಹವಾಲಾ ಜಾಲವನ್ನೂ ಇದಕ್ಕೆ ಬಳಸಿಕೊಂಡಿರುವ ಸುಳಿವು ದೊರೆತಿದ್ದು, ಈ ಸಂಬಂಧವೂ ತನಿಖೆ ನಡೆಸಲಾಗುತ್ತಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.
ತನಿಖೆ ಮುಂದುವರಿಸಿರುವ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಈವರೆಗೆ ಎಷ್ಟು ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ರನ್ಯಾ ರಾವ್, ತರುಣ್ ರಾಜು, ಕಸ್ಟಮ್ಸ್ ಅಧಿಕಾರಿಗಳ ಮನೆಗಳಲ್ಲಿ ಡಿಆರ್‌ಐ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇ.ಡಿ ಸಹ ಈ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.
ತನಿಖೆಗೆ ಆದೇಶಿಸಿದ ಬೆನ್ನಲ್ಲೇ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ರಾಮಚಂದ್ರ ರಾವ್ ಅವರು ರಜೆ ಮೇಲೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ರನ್ಯಾ ರಾವ್ ಅವರು ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರು ಬಳಸಿಕೊಂಡು ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು ಎಂಬ ಆರೋಪವಿದೆ. ಡಿಜಿಪಿ ಪಾತ್ರದ ಕುರಿತು ತನಿಖೆ ನಡೆಸಲು ನೇಮಿಸಿರುವ ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದ ಸಮಿತಿ ವಿಚಾರಣೆಗೆ ನೋಟಿಸ್ ನೀಡುವ ಮುನ್ನವೇ ರಾವ್, ರಜೆ ಮೇಲೆ ತೆರಳಿದ್ದಾರೆ.
ಗೃಹ ಇಲಾಖೆಯು ಡಿಜಿಪಿ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಆದೇಶ ಹೊರಡಿಸುವುದಕ್ಕಾಗಿ ತಯಾರಿ ನಡೆಸಿತ್ತು. ಈ ನಡುವೆಯೇ ರಾವ್ ರಜೆ ಮೇಲೆ ತೆರಳಿದ್ದಾರೆ.
* ಬೆಂಗಳೂರಿನಲ್ಲಿ ಒಬ್ಬ ಕಸ್ಟಮ್ಸ್ ಅಧಿಕಾರಿ, ಇಬ್ಬರು ಸಿಬ್ಬಂದಿಯ ವಿಚಾರಣೆ. ಮುಂಬೈನಲ್ಲಿ ಮೂವರು ಅಧಿಕಾರಿಗಳಿಗೆ ವಿಚಾರಣೆ ಬಿಸಿ
* ಮುಂಬೈ–ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸಮನ್ಸ್
* ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದಲೂ ಮಾಹಿತಿ ಕಲೆ ಹಾಕಿದ ಸಿಬಿಐ, ಇ.ಡಿ
* ಭಾರತೀಯ ರಾಜತಾಂತ್ರಿಕ ಅಧಿಕಾರಿ–ಸಿಬ್ಬಂದಿಯ ವಿದೇಶಿ ಪ್ರವಾಸ ವಿವರ
ಕಲೆ ಹಾಕುತ್ತಿರುವ ತನಿಖಾಧಿಕಾರಿಗಳು
* ಪತಿ ಜತಿನ್ ಹುಕ್ಕೇರಿ ಅವರ ಕ್ರೆಡಿಟ್ ಕಾರ್ಡ್ ಬಳಸಿ ರನ್ಯಾ ರಾವ್, ಮಾರ್ಚ್ 1ರಂದು ದುಬೈಗೆ ಪ್ರಯಾಣಿಸಲು ಎಮಿರೇಟ್ಸ್ ವೆಬ್‌ಸೈಟ್‌ನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿರುವ ಮಾಹಿತಿ ಲಭ್ಯ
* ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜತಿನ್ ವಾಸವಿರುವ ಪ್ರೆಸ್ಟೀಜ್ ಅಕ್ರೊಪೊಸ್ ಫ್ಲ್ಯಾಟ್ ಸೇರಿದಂತೆ 9 ಕಡೆಗಳಲ್ಲಿ ಡಿಆರ್‌ಐ ತಂಡ ಗುರುವಾರ ಶೋಧ ನಡೆಸಿದೆ. ಈ ವೇಳೆ ಹಣಕಾಸು ವಹಿವಾಟು ಕುರಿತ ದಾಖಲೆಗಳ ಪರಿಶೀಲನೆ ಕಾರ್ಯವನ್ನು ತಡರಾತ್ರಿವರೆಗೂ ಅಧಿಕಾರಿಗಳು ನಡೆಸಿದ್ದಾರೆ.
* ಮದುವೆಗೂ ಮುನ್ನ ಹಾಗೂ ನಂತರ ರನ್ಯಾ–ಜತಿನ್ ಕೈಗೊಂಡಿದ್ದ ಪ್ರವಾಸ ಹಾಗೂ ಯಾರ ಜತೆ ನಂಟು ಹೊಂದಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಂಪತಿಯ ಮೊಬೈಲ್ ಕರೆಗಳ ವಿಶ್ಲೇಷಣೆ ನಡೆಯುತ್ತಿದೆ.
* ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈ ತಲುಪಿ, ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.