ADVERTISEMENT

ನೇಮಕಾತಿ ಅಕ್ರಮ: ಆರೋಪಪಟ್ಟಿಯಲ್ಲಿ ಹೆಸರು ಉಲ್ಲೇಖಿಸದಿರಲು ₹70 ಲಕ್ಷ ಲಂಚ?

ಎಇ, ಜೆಇ ನೇಮಕಾತಿ ಅಕ್ರಮ

​ಪ್ರಜಾವಾಣಿ ವಾರ್ತೆ
Published 12 ಮೇ 2022, 2:56 IST
Last Updated 12 ಮೇ 2022, 2:56 IST
   

ಬೆಂಗಳೂರು: ಅಕ್ರಮಗಳಲ್ಲಿ ತನ್ನ ಹೆಸರು ಕೇಳಿಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದ ರುದ್ರಗೌಡ‍ಪಾಟೀಲ ಅಲಿಯಾಸ್‌ ಆರ್‌.ಡಿ.ಪಾಟೀಲ, ಅವರಿಗೆ ಹಣದ ಆಮಿಷ ಒಡ್ಡಿ ಪ್ರಕರಣ ಮುಚ್ಚಿಹಾಕಲು ಮುಂದಾಗುತ್ತಿದ್ದ ಎಂಬುದು ಗೊತ್ತಾಗಿದೆ.

ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯಾಗಿರುವ ಅವರು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ (ಎಇ) ಹಾಗೂ ಕಿರಿಯ ಎಂಜಿನಿಯರ್‌ (ಜೆಇ) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದೆ.

2021ರ ಡಿಸೆಂಬರ್‌ 14 ರಂದು ನಡೆದಿದ್ದಎಇ ಹಾಗೂ ಜೆಇ ನೇಮಕಾತಿ ಪರೀಕ್ಷೆಯಲ್ಲಿ ವೀರಣ್ಣಗೌಡ ಡಿ.ಚಿಕ್ಕೇಗೌಡ ಎಂಬಾತ ‘ವಾಕಿಟಾಕಿ’ ಬಳಸಿ ಉತ್ತರ ಬರೆಯುತ್ತಿದ್ದ. ಆತನನ್ನು ಬಂಧಿಸಿದ್ದ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಆರ್‌.ಡಿ.ಪಾಟೀಲ ಕೂಡ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿತ್ತು.

ADVERTISEMENT

‘ಪ್ರಕರಣದ 7ನೇ ಆರೋಪಿಯಾಗಿರುವ ಪಾಟೀಲ ಅವರು ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರು ಉಲ್ಲೇಖಿಸದಂತೆ ಅಧಿಕಾರಿಗಳಿಗೆ
₹70 ಲಕ್ಷ ಲಂಚ ನೀಡಿದ್ದರು. ಈ ವಿಷಯವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪ್ರಭಾವಿ ವ್ಯಕ್ತಿಗಳು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಷ್ಟೇ ಅಲ್ಲದೇ ಕಾನ್‌ಸ್ಟೆಬಲ್‌ಗಳ ಜೊತೆಗೂ ಇವರು ಉತ್ತಮ ಒಡನಾಟ ಹೊಂದಿದ್ದರು. ಅವರು ಕೇಳಿದಷ್ಟು ಹಣ ಕೊಟ್ಟು ಅಕ್ರಮ ನಡೆಸುತ್ತಿದ್ದರು. ‍ಪ್ರಕರಣ ದಾಖಲಾದರೆ ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿದ್ದರು’ ಎಂದೂ ಹೇಳಿವೆ.

10 ದಿನ ಪೊಲೀಸ್‌ ಸುಪರ್ದಿಗೆ
ಎಇ ಹಾಗೂ ಜೆಇ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ತನಿಖೆ ಚುರುಕುಗೊಳಿಸಿರುವ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿತ ಆರೋಪಿಆರ್‌.ಡಿ.ಪಾಟೀಲ ಅವರನ್ನು ಬುಧವಾರ ತಮ್ಮ ಸುಪರ್ದಿಗೆ ಪಡೆದರು.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ಆರ್‌.ಡಿ.ಪಾಟೀಲ ಅವರನ್ನು ಮಂಗಳವಾರ ಬಾಡಿ ವಾರೆಂಟ್‌ ಮೂಲಕ ಕಲಬುರಗಿಯಲ್ಲಿ ಬಂಧಿಸಿದ್ದ ಪೊಲೀಸರು ಬುಧವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

‘ಪಾಟೀಲ ಅವರಿಂದ ಸಾಕಷ್ಟು ಮಾಹಿತಿ ಕಲೆಹಾಕಬೇಕಿದೆ. ಹೀಗಾಗಿ 14 ದಿನ ಸುಪರ್ದಿಗೆ ನೀಡುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿ ಪುರಸ್ಕರಿಸಿರುವ ನ್ಯಾಯಾಲಯ 10 ದಿನ ವಶಕ್ಕೆ ನೀಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.