ಬೆಂಗಳೂರು: ‘ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ನಿಯಮಾನುಸಾರ ಮತ್ತೆ ವಶಪಡಿಸಿಕೊಳ್ಳಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
1987ರಲ್ಲಿ ವಾಯುಪಡೆಗೆ ಮಂಜೂರು ಮಾಡಿದ್ದ 570 ಎಕರೆ ಭೂಮಿಯಲ್ಲಿ ಅರಣ್ಯ ಎಂದು ಅಧಿಸೂಚನೆ ಹೊರಡಿಸಿರುವ 452 ಎಕರೆ ಭೂಮಿ ಮಂಜೂರಾತಿಯನ್ನು ರದ್ದುಪಡಿಸಿ 2017ರಲ್ಲಿಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೂ ವಾಯುಪಡೆಯ ಅಧಿಕಾರಿಗಳು ಅರಣ್ಯ ತೀರುವಳಿ (ಎಫ್‌ಸಿ) ಅನುಮತಿ ಪಡೆಯದೆ ಮಾರ್ಚ್ 1ರಂದು ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ನಡೆಸದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದ ಬೆನ್ನಲ್ಲೆ ಸಚಿವರು ಈ ನಿರ್ದೇಶನ ನೀಡಿದ್ದಾರೆ.
‘ಸರ್ಕಾರದ 2017ರ ಆದೇಶದ ಅನ್ವಯ ಮ್ಯುಟೇಷನ್ ಆಗಿದ್ದು, ವಾಯುಪಡೆ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಈ ಜಮೀನು ‘ಮೀಸಲು ಅರಣ್ಯ’ ಎಂದು ಫಲಕ ಹಾಕಲಾಗಿದೆ. ಈ ಅರಣ್ಯ ಭೂಮಿಯನ್ನು ತೆರವು ಮಾಡುವಂತೆ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಪ್ರಸ್ತುತ 444.12 ಎಕರೆ ಜಮೀನಿನ ಪೈಕಿ, ಸುಮಾರು 15 ಎಕರೆ ಪ್ರದೇಶದಲ್ಲಿ ವಾಯುಪಡೆ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡು ತರಬೇತಿ ನೀಡುತ್ತಿದೆ. ಸ್ವಲ್ಪ ಜಮೀನಿನಲ್ಲಿ ವಾಯು ಪಡೆಯ ಕಚೇರಿ ಇದೆ. ಉಳಿದ ಭೂಮಿಯು ಅರಣ್ಯ ಸ್ವರೂಪದಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಖಂಡ್ರೆ ಹೇಳಿದ್ದಾರೆ.
‘ಅರಣ್ಯ ಸ್ವರೂಪದಲ್ಲಿರುವ ಜಮೀನು ವಶಕ್ಕೆ ಪಡೆಯಲು ಕಾನೂನು ಕ್ರಮ ಕೈಗೊಳ್ಳಬೇಕು. ತಾನು ಉಪಯೋಗಿಸುತ್ತಿರುವ ಜಮೀನಿಗೆ ಸಂಬಂಧಿಸಿದಂತೆ ಪರ್ವೇಶ್ ಪೋರ್ಟಲ್‌ನಲ್ಲಿ ನಿಯಮಾನುಸಾರ ಅರ್ಜಿ ಹಾಕಿ, ಎಫ್‌ಸಿ ಪಡೆಯುವಂತೆ ವಾಯುಪಡೆಗೆ ಪತ್ರ ಬರೆಯಬೇಕು’ ಎಂದೂ ಅಧಿಕಾರಿಗಳಿಗೆ ಖಂಡ್ರೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.