ADVERTISEMENT

ಸಂಘ ಪರಿವಾರ ನಿಯಂತ್ರಿತ ಕೇಂದ್ರ ಸರ್ಕಾರದಿಂದ ನಾರಾಯಣ ಗುರುಗಳ ಅಪಮಾನ: ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 9:08 IST
Last Updated 16 ಜನವರಿ 2022, 9:08 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಬೆಂಗಳೂರು: ‘ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಗೆ ಕೇರಳ ರಾಜ್ಯ ಕಳುಹಿಸಿದ್ದ ತನ್ನ ನೆಲದ ಹೆಮ್ಮೆಯನ್ನು ಪ್ರತಿಬಿಂಬಿಸುವ ಕ್ರಾಂತಿಕಾರಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸುವ ಮೂಲಕ ದೇಶದ ಶೋಷಿತ ಸಮಾಜಕ್ಕೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ‘ಕೇಂದ್ರ ಸರ್ಕಾರ ತಕ್ಷಣ ತನ್ನ ತಪ್ಪಿಗೆ ಕ್ಷಮೆ ಕೋರುವ ಜೊತೆಗೆ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಮೆರವಣಿಗೆಯಲ್ಲಿ ಸೇರ್ಪಡೆಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರ್, ಮಹಾತ್ಮಾಗಾಂಧಿ ಮತ್ತು ಭಾರತಕ್ಕೆ ಸಂವಿಧಾನ ನೀಡಿದ ಬಿ. ಆರ್. ಅಂಬೇಡ್ಕರ್ ಅವರಿಂದ ಗೌರವಿಸಲ್ಪಟ್ಟ ನಾರಾಯಣ ಗುರುಗಳನ್ನು ಸಂಘ ಪರಿವಾರ ನಿಯಂತ್ರಿತ ಕೇಂದ್ರ ಸರ್ಕಾರ ಅಪಮಾನಿಸಿರುವುದು ಖಂಡನೀಯ‘ ಎಂದಿದ್ದಾರೆ.

‘ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ದೇಶದ ಸಾಂಸ್ಕೃತಿಕ, ಧಾರ್ಮಿಕ ಐತಿಹಾಸಿಕ, ಅಭಿವೃದ್ದಿ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಬಿಂಬಿಸುವ ಸ್ತಬ್ದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಅದಕ್ಕೆ ರಾಜ್ಯಗಳು ತಮ್ಮ ನೆಲದ ಹೆಮ್ಮೆಯನ್ನು ಪ್ರತಿಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಳುಹಿಸುವ ಪರಿಪಾಠವಿದೆ. ಅದರಂತೆ ಕೇರಳ ರಾಜ್ಯ ಸ್ತಬ್ಧ ಚಿತ್ರವನ್ನು ಕಳುಹಿಸಿದೆ. ಆದರೆ, ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸುವ ಮೂಲಕ, ಭಾರತದ ಚಾರಿತ್ರಿಕ, ಮಹತ್ವದ ಕ್ರಾಂತಿಕಾರಿ ಸಮಾಜ ಸುಧಾರಕನಿಗೆ ಅಪಮಾನಿಸಿದೆ. ಜೊತೆಗೆ ಶೋಷಣೆ, ಮಹಿಳಾ ಅಸಮಾನತೆ, ಜಾತಿ ಪ್ರತಿಪಾದನೆಯನ್ನು ಪರೋಕ್ಷವಾಗಿ ಉತ್ತೇಜಿಸಿದಂತಾಗಿದೆ’ ಎಂದು ಕಿಡಿಕಾರಿದ್ದಾರೆ.

‘ನಾರಾಯಣ ಗುರುಗಳು ಕೇರಳ ರಾಜ್ಯದವರು ಎಂಬುದಕ್ಕೆ ದಾಖಲೆ ಲಭ್ಯವಿದೆ. ಅಲ್ಲದೆ, ಶತಮಾನಗಳ ಹಿಂದಿನ ಅವರ ಸಮಾಜ ಸುಧಾರಣೆಯ ಬಗ್ಗೆ ನೂರಾರು ದಾಖಲೆಗಳು ಲಭ್ಯವಿವೆ. ಶೋಷಣೆ, ಜಾತೀಯತೆ, ಅಸಮಾನತೆ ಕೆಳವರ್ಗದವರ ಅಪಮಾನಿಸುವುದರ ವಿರುದ್ದ ಸಿಡಿದು ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿದ್ದಲ್ಲದೆ ಸಮಾಜದಲ್ಲಿ ಸಮಾನತೆಗಾಗಿ ಬದುಕಿನುದ್ದಕ್ಕೂ ನಾರಾಯಣ ಗುರುಗಳು ಶ್ರಮಿಸಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

‘ನಾರಾಯಣ ಗುರುಗಳ ಕ್ರಾಂತಿಕಾರಿ ಸುಧಾರಣೆಯ ಮಾಹಿತಿ ತಿಳಿದಂಥ ಮಹಾತ್ಮಾಗಾಂಧಿ, ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿ ನಾರಾಯಣಗುರುಗಳ ವೈಕಂ ಹೋರಾಟವನ್ನು ಬೆಂಬಲಿಸಿದ್ದರು. ಅವರ ಸ್ತಬ್ದ ಚಿತ್ರವನ್ನು ತಿರಸ್ಕರಿಸುವ ಮೂಲಕ ಸಮ ಸಮಾಜದ ಹೋರಾಟಗಾರನಿಗೆ ಕೇಂದ್ರ ಬಿಜೆಪಿ ಸರ್ಕಾರ ರಚಿಸಿರುವ ಆಯ್ಕೆ ಸಮಿತಿ ಅಪಮಾನ ಮಾಡಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.