ಮೀಸಲಾತಿ(ಸಾಂಕೇತಿಕ ಚಿತ್ರ)
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ಭಿನ್ನ ಕೆನೆಪದರ ನೀತಿ ಅನ್ವಯಿಸುತ್ತಿರುವುದರಿಂದಾಗಿ, ವೇತನದಾರರ ಮಕ್ಕಳು ಅಖಿಲ ಭಾರತ ಹಾಗೂ ರಾಜ್ಯ ಕೋಟಾದಡಿ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವಾಗ ತಾರತಮ್ಯ ಅನುಭವಿಸುತ್ತಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಪಶುವೈದ್ಯಕೀಯ, ಹೋಮಿಯೋಪಥಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್), ಐಐಟಿ ಸೇರಿದಂತೆ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಸುತ್ತದೆ. ನೀಟ್, ಜೆಇಇ ಸೇರಿದಂತೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ಬರೆದು ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೋಷಕರ ವೇತನ ಆದಾಯ ₹8 ಲಕ್ಷಕ್ಕಿಂತ ಹೆಚ್ಚಿದ್ದರೂ ಅಂತಹ ಮಕ್ಕಳಿಗೆ ಅಖಿಲ ಭಾರತ ಕೋಟಾದ ಅಡಿ ಪ್ರವೇಶ ನೀಡಲಾಗುತ್ತದೆ. ಅದೇ ವಿದ್ಯಾರ್ಥಿಗಳು ರಾಜ್ಯದ ಕೋಟಾದಡಿ ಪ್ರವೇಶ ಪಡೆಯುವಾಗ ಕೆನೆಪರದ ನೀತಿ ಅನ್ವಯಿಸಲಾಗುತ್ತಿದೆ.
ರಾಜ್ಯದಲ್ಲಿನ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ–1ಕ್ಕೆ ಕೆನೆಪದರ ಅನ್ವಯವಾಗುವುದಿಲ್ಲ. ಆದರೆ, 2ಎ, 2ಬಿ, 3ಎ, ಮತ್ತು 3ಬಿ ಪ್ರವರ್ಗದಲ್ಲಿ ಬರುವ ಇತರೆ ಹಿಂದುಳಿದ ಜಾತಿಗಳಿಗೆ ಕೆನೆಪದರ ಅನ್ವಯವಾಗುತ್ತದೆ. ಹೀಗಾಗಿ, ₹8 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಪಡೆಯುವ ನೌಕರರ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ವರ್ಗದಡಿಯೇ ಸ್ಪರ್ಧಿಸುವ ಪರಿಸ್ಥಿತಿ ಇದೆ.
‘ನೀಟ್‌ನಲ್ಲಿ ನನ್ನ ಮಗಳು ಅಖಿಲ ಭಾರತ ರ್‍ಯಾಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿದ್ದಾಳೆ. ನಮ್ಮದು ಈಡಿಗ ಸಮುದಾಯ. 7ನೇ ವೇತನ ಆಯೋಗದ ಶಿಫಾರಸಿನ ಅನುಷ್ಠಾನದ ನಂತರ ವಾರ್ಷಿಕ ವೇತನ ₹8 ಲಕ್ಷ ದಾಟಿದೆ. ಕೇಂದ್ರದ ನಿಯಮಗಳ ಪ್ರಕಾರ ಹಿಂದುಳಿದ ವರ್ಗಗಳ ಕೆನೆಪದರಕ್ಕೆ ಕೃಷಿ ಹಾಗೂ ವೇತನ ಆದಾಯ ಪರಿಗಣಿಸುವುದಿಲ್ಲ. ಹಾಗಾಗಿ, ಅಖಿಲ ಭಾರತ ಕೋಟಾದ ಸೀಟುಗಳು ಸುಲಭವಾಗಿ ಸಿಗುತ್ತವೆ. ಆದರೆ, ಅವಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಲು ಕುಟುಂಬದಲ್ಲಿ ಸಮ್ಮತಿ ಇಲ್ಲ. ರಾಜ್ಯದ ಕೋಟಾಕ್ಕೆ ಕೆನೆಪದರ ಅನ್ವಯವಾಗುವುದರಿಂದ ಸಾಮಾನ್ಯ ವರ್ಗದಡಿ ಸೀಟು ಸಿಗುವುದು ಕಷ್ಟ. ಕೇಂದ್ರ ಸರ್ಕಾರದ 1993ರ ಅಧಿಸೂಚನೆಯಂತೆ ರಾಜ್ಯವೂ ಕೃಷಿ ಮತ್ತು ವೇತನ ಆದಾಯ ಹೊರಗಿಟ್ಟು ಕೆನೆಪದರ ನೀತಿ ಅನುಸರಿಸಬೇಕು’ ಎನ್ನುತ್ತಾರೆ ಪ್ರೌಢಶಾಲಾ ಶಿಕ್ಷಕ ಎಚ್.ಬಿ. ಧರ್ಮಪ್ಪ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಲ್ಲಿ ಕೆನೆಪದರ ಕುರಿತು ವಿವಿಧ ಆದೇಶಗಳನ್ನು ಹೊರಡಿಸಿವೆ. ಕೇಂದ್ರ ಸರ್ಕಾರ ಕೆನೆಪದರ ನೀತಿ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಹಿಂದುಳಿದ ವರ್ಗದ ಕುಟುಂಬಗಳ ವಾರ್ಷಿಕ ಆದಾಯ ಲೆಕ್ಕ ಹಾಕುವಾಗ ಕೃಷಿ ಮತ್ತು ವೇತನ ಪರಿಗಣಿಸದೆ, ವ್ಯಾಪಾರ, ವ್ಯವಹಾರ, ಕೈಗಾರಿಕೆ ಮತ್ತಿತರ ಸಂಪತ್ತಿನ ಆದಾಯಗಳನ್ನು ಪರಿಗಣಿಸಲಾಗುತ್ತದೆ. ಕರ್ನಾಟಕ ಹೊರತುಪಡಿಸಿ, ಇತರ ಬಹುತೇಕ ರಾಜ್ಯಗಳು ಕೇಂದ್ರದ ನಿಯಮಗಳನ್ನೇ ಅಳವಡಿಸಿಕೊಂಡಿವೆ. ಕರ್ನಾಟಕದಲ್ಲಿ ಮಾತ್ರ ವೇತನವನ್ನು ಒಳಗೊಂಡು ವಾರ್ಷಿಕ ಆದಾಯ ಲೆಕ್ಕ ಹಾಕಲಾಗುತ್ತದೆ.
ಸರ್ಕಾರಿ ಕೆಲಸದಲ್ಲಿ ಇದ್ದು ಇತರೆ ಉದ್ಯೋಗ ಅಥವಾ ಉನ್ನತ ಸ್ಥಾನಕ್ಕೆ ನೇಮಕಗೊಳ್ಳುವಾಗ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಅವರು ಪಡೆಯುತ್ತಿರುವ ವೇತನ ಆದಾಯ ಪರಿಗಣಿಸುತ್ತಿಲ್ಲ. ಆದರೆ, ಅವರ ಮಕ್ಕಳ ಶೈಕ್ಷಣಿಕ ಮೀಸಲಾತಿಗೆ ಕೆನೆಪದರ ಅನ್ವಯಿಸಲಾಗುತ್ತಿದೆ.
‘ರಾಜ್ಯ ಸರ್ಕಾರದ ಭಿನ್ನ ನೀತಿಯಿಂದಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರದಲ್ಲಿ
ಕಾರ್ಯನಿರ್ವಹಿಸುತ್ತಿರುವ ಗ್ರೂಪ್- ಬಿ, ಗ್ರೂಪ್-ಸಿ, ಮತ್ತು ಡಿ ದರ್ಜೆಯ ನೌಕರರ ಮಕ್ಕಳು, ಕುಟುಂಬದ ಸದಸ್ಯರು ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ತಾರತಮ್ಯ ಸರಿಪಡಿಸಬೇಕು’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಮುಖಂಡ ಎಸ್.ಕೆ. ಶಿವಾನಂದ್.
₹8 ಲಕ್ಷಕ್ಕಿಂತ ಕಡಿಮೆ ವೇತನವಿದ್ದ ಒಂದು ಲಕ್ಷಕ್ಕೂ ಹೆಚ್ಚು ನೌಕರರ ಆದಾಯ 7ನೇ ವೇತನ ಪರಿಷ್ಕರಣೆಯ ನಂತರ ಹೆಚ್ಚಾಗಿದೆ. ಕೆನೆಪದರ ಮಿತಿಯನ್ನು ₹15 ಲಕ್ಷಕ್ಕೆ ಮರುನಿಗದಿ ಮಾಡಲು ಮನವಿ ಸಲ್ಲಿಸಿದ್ದೇವೆಸಿ.ಎಸ್. ಷಡಾಕ್ಷರಿ, ಅಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.