ಜಿ. ಪರಮೇಶ್ವರ್, KN ರಾಜಣ್ಣ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಾಮಾನ್ಯ ಕ್ಷೇತ್ರದಲ್ಲಿ ಯಾಕೆ ನಿಲ್ಲಬಾರದು? ಅವರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮೀಸಲು ಕ್ಷೇತ್ರದಿಂದ ಮತ್ತೊಬ್ಬರಿಗೆ ಸಹಾಯ ಆಗುವುದಿಲ್ಲವೇ? ಎಂದು ಶಾಸಕ ಕೆ.ಎನ್.ರಾಜಣ್ಣ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಜಾಗೃತ ಕರ್ನಾಟಕ ಸಂಘಟನೆಯಿಂದ ಆಯೋಜಿಸಿದ್ದ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ– ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಮೀಸಲು ಕ್ಷೇತ್ರ ಬಿಟ್ಟುಕೊಡುವ ಮನಃಸ್ಥಿತಿ ನಮ್ಮಲ್ಲಿ ಬರಬೇಕು. ಎಲ್ಲವನ್ನು ನಾವೇ ಬಳಸಿಕೊಂಡು ಕೂತರೆ ಬೇರೆಯವರು ಎಲ್ಲಿಗೆ ಹೋಗುತ್ತಾರೆ. ನಮ್ಮಲ್ಲಿ ಧೈರ್ಯದ ಕೊರತೆ ಇದ್ದು, ಅದು ಹೋಗಬೇಕು ಎಂದು ಪರಮೇಶ್ವರ ಅವರಿಗೆ ಸಲಹೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಕಾಂತರಾಜು, ಜಯಪ್ರಕಾಶ್ ಹೆಗ್ಡೆ ನೇತೃತ್ವದ ವರದಿ ಜಾರಿ ಮಾಡುವ ಮನಸ್ಥಿತಿ ಹೊಂದಿದ್ದರು. ಆದರೆ ವರದಿ ಜಾರಿಗೊಳಿಸದಂತೆ ಕಾಂಗ್ರೆಸ್ ನಾಯಕರೇ ಅವರ ಮೇಲೆ ಒತ್ತಡ ತಂದರು. ಹೀಗಾಗಿ ಮತ್ತೊಂದು ಸರ್ವೆ ನಡೆಸುವ ನಿರ್ಣಯ ಕೈಗೊಳ್ಳಬೇಕಾಯಿತು. ಈ ವಿಚಾರದಲ್ಲಿ ಅವರು ನಿಸ್ಸಹಾಯಕರಾದರು ಎಂದು ಹೇಳಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಯತೀಂದ್ರ ಸಿದ್ದರಾಮಯ್ಯ ಮುಂದೊಂದು ದಿನ ಮುಖ್ಯಮಂತ್ರಿ ಯಾಕಾಗಬಾರದು? ದೇವೇಗೌಡರಿಗೆ ಕುಮಾರಸ್ವಾಮಿ ಉತ್ತರಾಧಿಕಾರಿ ಆಗಬಹುದು, ಸಿದ್ದರಾಮಯ್ಯಗೆ ಯತೀಂದ್ರ ಉತ್ತರಾಧಿಕಾರಿ ಆದರೆ ತೊಂದರೆ ಏನು? ದೇವೇಗೌಡರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಆಗುವುದಕ್ಕೆ ಅವರ ಹೋರಾಟ ಇದೆ. ಕುಮಾರಸ್ವಾಮಿ ಅವರಿಗೆ ಏನಿದೆ? ಅವರಪ್ಪನ ಹೆಸರಷ್ಟೇ ಬಂಡವಾಳ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.