ADVERTISEMENT

ಎಲೆ ಸುರುಳಿ ರೋಗ: ಟೊಮೆಟೊ ಇಳುವರಿ ಕುಸಿತ, ದೇಶದಾದ್ಯಂತ ಬೆಲೆಯಲ್ಲಿ ಭಾರಿ ಹೆಚ್ಚಳ

ಅನಿತಾ ಪೈಲೂರು
Published 3 ಜುಲೈ 2023, 0:28 IST
Last Updated 3 ಜುಲೈ 2023, 0:28 IST
ಗ್ರಾಹಕರು ಟೊಮೆಟೊ ಖರೀದಿಯಲ್ಲಿ ತೊಡಗಿದ್ದರು
ಗ್ರಾಹಕರು ಟೊಮೆಟೊ ಖರೀದಿಯಲ್ಲಿ ತೊಡಗಿದ್ದರು   

ಬೆಂಗಳೂರು: ಎಲೆ ಸುರುಳಿ ರೋಗದಿಂದ ಟೊಮೆಟೊ ಇಳುವರಿಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಬೆಲೆ ಹೆಚ್ಚಾಗಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ದೇಶದಾದ್ಯಂತ ಟೊಮೆಟೊ ಪೂರೈಕೆ ಮಾಡುವ ವಿತರಕರಲ್ಲಿ ಒಂದಾಗಿದ್ದು, ಇಲ್ಲಿನ ಆವಕದಲ್ಲಿ ಕುಸಿತವಾಗಿದೆ.

ಈ ಬಾರಿ ಜೂನ್‌ನಲ್ಲಿ ಎಪಿಎಂಸಿಗೆ 3.2 ಲಕ್ಷ ಕ್ವಿಂಟಲ್‌ ಟೊಮೆಟೊ ಮಾತ್ರ ಬಂದಿದ್ದು, 2022ರ ಜೂನ್‌ನಲ್ಲಿ 5.45 ಕ್ವಿಂಟಲ್‌ ಆವಕವಿತ್ತು. 2021ರಲ್ಲಿ 9.37 ಕ್ವಿಂಟಲ್‌ ಜೂನ್‌ನಲ್ಲೇ ಬಂದಿತ್ತು.

‘ಕೋಲಾರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಎಲೆ ಸುರುಳಿ ರೋಗ ತಗುಲಿದ್ದು, ಟೊಮೆಟೊ ಇಳುವರಿ ಕಡಿಮೆಯಾಗಿದೆ. ಪ್ರತಿ ವರ್ಷ ಸಾಮಾನ್ಯವಾಗಿ 15 ಸುತ್ತು ಹಣ್ಣುಗಳ ಕೊಯ್ಲು ನಡೆಯುತ್ತದೆ. ಆದರೆ, ಈ ಬಾರಿ ರೋಗದಿಂದ ಎಲೆಗಳೆಲ್ಲ ಒಣಗುತ್ತಿರುವುದರಿಂದ ಮೂರರಿಂದ ಐದು ಸುತ್ತು ಮಾತ್ರ ಕೊಯ್ಲು ಮಾಡಲಾಗುತ್ತದೆ’ ಎಂದು ರೈತ ಮಹಿಳೆ ನಳಿನಿ ಗೌಡ ತಿಳಿಸಿದರು.

ADVERTISEMENT

ಮೂರು ಎಕರೆಯಲ್ಲಿ 9 ಸಾವಿರ ಬಾಕ್ಸ್‌ (ಒಂದು ಬಾಕ್ಸ್‌ನಲ್ಲಿ 15 ಕೆ.ಜಿ) ಟೊಮೆಟೊ ಇಳುವರಿಯನ್ನು ನಿರೀಕ್ಷಿಸಲಾಗಿತ್ತು. ಇದೀಗ 1,800 ಬಾಕ್ಸ್‌ನಷ್ಟು ಮಾತ್ರ ಇಳುವರಿಯಾಗಿದೆ. ಸಸಿ ನೆಟ್ಟ 70 ದಿನಗಳಲ್ಲಿ ಹಣ್ಣು ಬಿಡುತ್ತದೆ. 45 ದಿನಗಳಿಗೊಮ್ಮೆ ಕೊಯ್ಲು ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಟೊಮೆಟೊ ಎಲೆ ಸುರುಳಿ ರೋಗದಿಂದ ಕೋಲಾರದ ಹಳ್ಳಿಗಳಲ್ಲಿ ಶೇ 50ರಷ್ಟು ಇಳುವರಿ ಕಡಿಮೆಯಾಗಿದೆ ಎಂದು ಐಸಿಎಆರ್– ಐಐಎಚ್‌ಆರ್‌ ವಿಜ್ಞಾನಿಗಳು ಕ್ಷೇತ್ರ ವೀಕ್ಷಣೆ ನಂತರ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

‘ಟೊಮೆಟೊ ಗುಣಮಟ್ಟವೂ ಪ್ರಮುಖವಾಗಿದ್ದು, 72 ಗಂಟೆ ತಾಜಾವಾಗಿ ಉಳಿಯುವ ಹಣ್ಣುಗಳನ್ನು ಮಾತ್ರ ದೂರದ ದೆಹಲಿಯಂತಹ ಪ್ರದೇಶಗಳಿಗೆ ವಿತರಣೆ ಮಾಡಬಹುದು. ಈಗಿನ ಹಣ್ಣುಗಳು 52 ಗಂಟೆಗಳ ನಂತರ ತಮ್ಮ ಗಟ್ಟಿತನವನ್ನು ಕಳೆದುಕೊಳ್ಳುತ್ತಿವೆ.  ಗಾತ್ರ, ಬಣ್ಣ ಮತ್ತು ದೃಢತನದಿಂದ ಹಣ್ಣುಗಳ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. ಹಿಂದಿನ ವರ್ಷಗಳಲ್ಲಿ, ಜೂನ್‌ನಲ್ಲಿ ಸರಾಸರಿ 2.5 ಲಕ್ಷದಿಂದ 3 ಲಕ್ಷ ಬಾಕ್ಸ್‌ಗಳನ್ನು ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ 28 ಟ್ರಕ್‌ ಲೋಡ್‌ಗಳನ್ನು (68,912 ಬಾಕ್ಸ್) ಮಾತ್ರ ದೇಶದ 10 ರಾಜ್ಯಗಳಿಗೆ ಕಳುಹಿಸಲಾಗಿದೆ. ಈ ಎಪಿಎಂಸಿಯಿಂದ ಬಾಂಗ್ಲಾದೇಶ ಹಾಗೂ ಶ್ರೀಲಂಕಾಕ್ಕೂ ಟೊಮೆಟೊ ಸರಬರಾಜು ಮಾಡಲಾಗುತ್ತದೆ’ ಎಂದು ಕೋಲಾರ ಎಪಿಎಂಸಿಯ ಕಾರ್ಯದರ್ಶಿ ವಿಜಯಲಕ್ಷ್ಮಿ ಎನ್‌. ತಿಳಿಸಿದರು.

ಈಗಿರುವ ಬೆಳೆ ಒಣಗುತ್ತಿದ್ದು, ಮುಂದಿನ ಕೊಯ್ಲಿಗೆ 70 ರಿಂದ 100 ದಿನ ಕಾಯಬೇಕಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗಬಹುದು ಎಂದರು.

‘ಬೆಳೆಗಾರರಿಗೆ ಈ ಬಾರಿ ಬೆಳೆಗೆ ವೆಚ್ಚ ಮಾಡಿರುವ ಹಣವೂ ವಾಪಸ್‌ ಬರುವುದಿಲ್ಲ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಸುಮಾರು ₹2.5 ಲಕ್ಷ ವೆಚ್ಚವಾಗುತ್ತದೆ. ವಾರಕ್ಕೆ ಎರಡು ಬಾರಿ ಔಷಧ ಸಿಂಪಡಣೆ ಮಾಡಲಾಗಿದೆ. ರಾಸಾಯನಿಕದ ವೆಚ್ಚ ದುಪ್ಪಟ್ಟಾಗಿರುವುದರಿಂದ ರೈತರ ಹೂಡಿಕೆ ಇನ್ನಷ್ಟು ಹೆಚ್ಚಾಗಿದೆ’ ಎಂದು ರೈತ ಅಬ್ಬಾನಿ ಶಿವಪ್ಪ ಹೇಳಿದರು.

‘ಕೆ.ಸಿ ವ್ಯಾಲಿಯಿಂದ ಸಂಸ್ಕರಣೆಯಾಗದ ನೀರು ಪೂರೈಕೆಯಿಂದ ಕೋಲಾರದ ಭಾಗದಲ್ಲಿ ಟೊಮೆಟೊಗೆ ಕೀಟಬಾಧೆ ಹಾಗೂ ರೋಗ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ. ಆರು ತಿಂಗಳಿಂದ ಎಲೆ ಸುರುಳಿ ರೋಗದಿಂದ ರೈತರಿಗೆ ಸಮಸ್ಯೆ ಉಂಟಾಗುತ್ತಿದೆ’ ಎಂದರು.

ಕಳೆದ ವರ್ಷವೂ ಹೆಚ್ಚಿನ ಮಳೆಯಿಂದಾಗಿ ಹಣ್ಣು ಬಣ್ಣ ಕಳೆದುಕೊಳ್ಳುವ ಜೊತೆಗೆ  ಇಳುವರಿ ಕುಸಿದಿತ್ತು. ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಬಹುತೇಕ ಭಾಗಗಳಲ್ಲಿ ಈ ವರ್ಷ ರೋಗ ಬಾಧಿಸುತ್ತಿದ್ದು, ಶೇ 50ರಷ್ಟು ಬೆಳೆ ನಷ್ಟವಾಗಿದೆ ಎಂದು ತೋಟಕಾರಿಕೆ ಇಲಾಖೆಯ ಕೋಲಾರ ಜಿಲ್ಲೆಯ ಉಪ ನಿರ್ದೇಶಕ ಎಸ್.ಆರ್‌. ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.