ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಸರ್ಕಾರಿ ಸ್ಥಳಗಳಲ್ಲಿ ನಡೆಸುವ ಚಟುವಟಿಕೆಗಳಿಗೆ ನಿಷೇಧ ಹೇರುವ ಕುರಿತಂತೆ ಬಿಜೆಪಿ– ಕಾಂಗ್ರೆಸ್ ನಾಯಕರ ಮಧ್ಯೆ ವಾಗ್ವಾದ ಆರಂಭವಾಗಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದು, ರಾಜಕೀಯ ಕಲಹಕ್ಕೆ ಕಾರಣವಾಗಿದೆ
ನಿರ್ಬಂಧಕ್ಕೆ ತಮಿಳುನಾಡು ಮಾದರಿ: ಸಿ.ಎಂ
‘ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ಸರ್ಕಾರ ಕೈಗೊಂಡ ಕ್ರಮವನ್ನು ಪರಿಶೀಲಿಸಿ, ಪರಿಗಣಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ’ ಎಂದರು.
ನಿಷೇಧಿಸಿ ಎಂದಿಲ್ಲ: ಪ್ರಿಯಾಂಕ್
‘ಆರ್ಎಸ್ಎಸ್ ನಿಷೇಧ ಮಾಡಿ ಎಂದು ನಾನು ಎಲ್ಲಿ ಹೇಳಿದ್ದೇನೆ. ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ಬೇಡ ಅಂದಿದ್ದೇನೆ ಅಷ್ಟೇ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ನಾನು ಒಬ್ಬ ಹಿಂದೂ. ಹಿಂದೂ ಧರ್ಮದ ವಿರೋಧಿ ಅಲ್ಲ. ನಾನು ಆರ್‌ಎಸ್‌ಎಸ್ ವಿರೋಧಿ’ ಎಂದರು.
‘ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ? ಅವರ ಮಾಹಿತಿ ತೆಗೆಯಿರಿ. ದಲಿತ, ಹಿಂದುಳಿದ ಸಂಘಟನೆಯವರು ದೊಣ್ಣೆ ಹಿಡಿದು ಓಡಾಡಿದರೆ ಒಪ್ಪುತ್ತಾರಾ? ಶಾಲೆಗಳಲ್ಲಿ ಆರ್‌ಎಸ್‌ಎಸ್‌ನಿಂದ ನಡೆಯುತ್ತಿರುವ ಬ್ರೈನ್ ವಾಷಿಂಗ್ ನಿಲ್ಲಬೇಕು’ ಎಂದ ಅವರು, ‘ಅತ್ಯಂತ ರಹಸ್ಯ ಸಂಘಟನೆ ಆರ್‌ಎಸ್‌ಎಸ್. ಬಿಜೆಪಿ ಅದರ ಕೈಗೊಂಬೆ. ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಶೂನ್ಯ. ಧರ್ಮ ಇಲ್ಲದೆ ಆರ್‌ಎಸ್‌ಎಸ್ ಶೂನ್ಯ’ ಎಂದರು.
‘ಆರ್ಎಸ್ಎಸ್ ಅನ್ನು ನೆಹರೂ, ಇಂದಿರಾ ಗಾಂಧಿಯಿಂದಲೇ ಬ್ಯಾನ್ ಮಾಡಲಾಗಲಿಲ್ಲ’ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸರ್ದಾರ್ ಪಟೇಲ್ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ್ಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ ಎಂದು ಆಗ ಆರ್‌ಎಸ್‌ಎಸ್‌ನವರು ಕ್ಷಮೆ ಕೋರಿದ್ದರು. ಹೀಗಾಗಿ ನಿಷೇಧ ತೆರವು ಮಾಡಲಾಗಿತ್ತು. ಇದು ವಿಷಕಾರಿ ಎಂದು ನೆಹರೂ ಅವರಿಗೆ ಪಟೇಲರು ಪತ್ರ ಬರೆದಿದ್ದರು. ಬಿಜೆಪಿಯವರು ಈಗ ಪಟೇಲರ ಪ್ರತಿಮೆ ನಿರ್ಮಿಸಿದ್ದಾರೆ’ ಎಂದು ಹೇಳಿದರು.
ಆರ್‌ಎಸ್‌ಎಸ್ ಫ್ಯಾಸಿಸ್ಟ್ ಸಂಘಟನೆ: ದಿನೇಶ್ ಗುಂಡೂರಾವ್
‘ಆರ್‌ಎಸ್‌ಎಸ್ ಒಂದು ರಾಜಕೀಯ, ಫ್ಯಾಸಿಸ್ಟ್ ಸಂಘಟನೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಸಮರ್ಥಿಸಿದ ಅವರು, ‘ಸರ್ಕಾರಿ ಜಾಗವನ್ನು ಆರ್‌ಎಸ್‌ಎಸ್ ಉಪಯೋಗಿಸುವುದು ಸರಿಯಲ್ಲ. ಬೇಕಾದರೆ ಅವರು ಖಾಸಗಿ ಜಾಗವನ್ನು ಉಪಯೋಗ ಮಾಡಿಕೊಳ್ಳಲಿ’ ಎಂದರು.
‘ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಚಟುವಟಿಕೆ ನಡೆಸಲು ಆರ್‌ಎಸ್‌ಎಸ್‌ಗೆ ಅವಕಾಶ ನೀಡಬಾರದು. ಕೇಂದ್ರ ಸರ್ಕಾರ ಕೂಡ ಅಧಿಕಾರಿಗಳಿಗೆ ಆರ್‌ಎಸ್ಎಸ್ ಸದಸ್ಯರಾಗಲು ಅವಕಾಶ ಕೊಡಬಾರದು’ ಎಂದರು.
‘ಆರ್‌ಎಸ್‌ಎಸ್ ರಾಜಕೀಯದಲ್ಲಿ ನೇರವಾಗಿ ಭಾಗಿಯಾಗಿರುವುದು ಸಾರ್ವಜನಿಕರಿಗೂ ಗೊತ್ತಿದೆ. ಆರ್‌ಎಸ್‌ಎಸ್, ಬಿಜೆಪಿ, ಬಜರಂಗದಳ, ಎಬಿವಿಪಿ ಎಲ್ಲವೂ ರಾಜಕೀಯ ಸಂಸ್ಥೆಗಳು. ಸಚಿವರ ಬದಲಾವಣೆ, ಸರ್ಕಾರ ತೆಗೆಯುವುದರಲ್ಲಿ ಇವರ ಪಾತ್ರವಿದೆ’ ಎಂದು ದೂರಿದರು.
‘ದ್ವೇಷ, ಕೋಮುಗಲಭೆ ಮಾಡುವುದೇ ಆರ್‌ಎಸ್‌ಎಸ್ ಸಿದ್ದಾಂತ. ಆರ್‌ಎಸ್‌ಎಸ್‌ನವರು ಏನಾದರೂ ತ್ಯಾಗ ಮಾಡಿದ್ದಾರಾ.. ಏನೂ ಇಲ್ಲ’ ಎಂದೂ ಹೇಳಿದರು.
ಜನ ನಿಮಗೆ ಅಧಿಕಾರ ಕೊಟ್ಟಿರುವುದು ಬರೀ ರಾಜಕಾರಣ ಮಾಡುವುದಕ್ಕೆ ಅಲ್ಲ. ಆರ್‌ಎಸ್ಎಸ್ ಬಗ್ಗೆ ಟೀಕಿಸುವ ನಿಮ್ಮ ಖಯಾಲಿ ಬಿಟ್ಟು, ನಿಮಗೆ ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಿಆರ್.ಅಶೋಕ, ವಿರೋಧ ಪಕ್ಷದ ನಾಯಕ
ಆರ್‌ಎಸ್‌ಎಸ್ ಚಟುವಟಿಕೆಗೆ ನಿರ್ಬಂಧ ಹೇರುವ ವಿಚಾರ ಗೃಹ ಇಲಾಖೆಗೆ ಬಂದರೆ ಅದರ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ಮಾಡುತ್ತೇವೆಜಿ. ಪರಮೇಶ್ವರ, ಗೃಹ ಸಚಿವ
ಆರ್‌ಎಸ್‌ಎಸ್ ಅಲ್ಲ, ಬಿಜೆಪಿ ಎದುರಿಸಿ: ಕಾರಜೋಳ
‘ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ. ಆರ್‌ಎಸ್‌ಎಸ್ ನೇತಾರ ಮೋಹನ್ ಭಾಗವತ್ ಅವರು ರಾಜಕಾರಣಿಯಲ್ಲ. ನೀವು ಎದುರಿಸಬೇಕಾಗಿರುವುದು ಬಿಜೆಪಿಯನ್ನೇ ಹೊರತು ಆರ್‌ಎಸ್‌ಎಸ್ ಅನ್ನು ಅಲ್ಲ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ನೀವು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಸಿ. ಅದನ್ನು ಬಿಟ್ಟು ಜನರಲ್ಲಿ ಸುಳ್ಳು ಮಾಹಿತಿಗಳನ್ನು ಹೇಳಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಆರ್‌ಎಸ್‌ಎಸ್ ಟೀಕೆ ಮಾಡುವುದನ್ನು ದೇಶದ 140 ಕೋಟಿ ಜನ ಸಹಿಸುವುದಿಲ್ಲ’ ಎಂದರು.
‘ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮಕ್ಕಳಿಗೆ ಸರಿಯಾದ ಪಾಠ ಹೇಳಿಕೊಡಬೇಕು. ಯಾವ್ಯಾವುದೋ ಕಾರಣಕ್ಕಾಗಿ ಯಾರ್‍ಯಾರನ್ನೊ ಮೆಚ್ಚಿಸಲು ರಾಷ್ಟ್ರ ಪ್ರೇಮದಿಂದ 100 ವರ್ಷ ನಿಸ್ವಾರ್ಥ ಸೇವೆ ಮಾಡಿದ ಆರ್‌ಎಸ್‌ಎಸ್ ಮತ್ತು ಸ್ವಯಂ ಸೇವಕರನ್ನು ಟೀಕಿಸುವುದು ಸರಿಯಲ್ಲ. ಸಂಘದಲ್ಲಿ ಜಾತಿ, ಧರ್ಮ ಸೇರಿದಂತೆ ಯಾವುದೇ ತಾರತಮ್ಯವಿಲ್ಲ’ ಎಂದು ಹೇಳಿದರು.
‘ಮುಸ್ಲಿಂ ಭಯೋತ್ಪಾದಕರನ್ನು ಟೀಕಿಸಿದ್ದೀರಾ?’
‘ಕಾಂಗ್ರೆಸ್ ಎಂಬ ಅಧಿಕಾರ ಸೃಷ್ಟಿಯ ಫ್ಯಾಕ್ಟರಿ ಹೊರತುಪಡಿಸಿದಂತೆ ನಿಮ್ಮ ಜೀವನದಲ್ಲಿ ಯಾವ ರಾಷ್ಟ್ರ ಭಕ್ತ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ್ದೀರಿ ಎಂದು ಆಧಾರ ಸಹಿತ ಮಾಹಿತಿ ಕೊಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
‘ಹಿಂದೂ ಸಂಘಟನೆಗಳನ್ನು ಹೊರತುಪಡಿಸಿ ನಿಮ್ಮ ರಾಜಕೀಯ ಜೀವನದಲ್ಲಿ ಇತರೆ ಕೋಮುವಾದಿ ಸಂಘಟನೆಗಳ ಬಗ್ಗೆ, ಭಯೋತ್ಪಾದಕತೆಯ ಕುರಿತು, ಮುಸ್ಲಿಂ ಮೂಲಭೂತವಾದಿ ಸಂಸ್ಥೆಗಳ ಕುಕೃತ್ಯಗಳ ಕುರಿತು ಎಂದಾದರೂ ಒಮ್ಮೆಯಾದರೂ ನೀವು ಟೀಕೆ- ಟಿಪ್ಪಣಿ ಮಾಡಿದ್ದೀರಾ’ ಎಂದು ಪ್ರಶ್ನಿಸಿದರು.
ದೇಶದ ಮೇಲೆ ಹಲವು ಬಾರಿ ದಾಳಿ ಮಾಡಿದ್ದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವ ಮುಸ್ಲಿಂ ಭಯೋತ್ಪಾದಕರು ಹಾಗೂ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಚಟುವಟಿಕೆಗಳ ಕುರಿತು ಎಂದಾದರೂ ಟೀಕಿಸಿದ್ದೀರಾ? ಖಂಡಿಸಿದ್ದೀರಾ’ ಎಂದು ಪ್ರಶ್ನಿಸಿದರು.
‘ನಿಮ್ಮ ಕುಟುಂಬದ ಇತಿಹಾಸದತ್ತ ಮೆಲುಕುಹಾಕಿ. ರಜಾಕಾರರ ದಾಳಿಯ ನಡುವೆ ನಿಮ್ಮ ಪೂಜ್ಯ ತಂದೆಯವರು ಹೇಗೆ ಬದುಕುಳಿದರು ಎಂಬುದನ್ನು ಒಮ್ಮೆ ಅವಲೋಕನ ಮಾಡಿ, ಆದಾಗ್ಯೂ ನೀವು ರಜಾಕಾರರು ಹಾಗೂ ರಜಾಕಾರ ಸಂಸ್ಕೃತಿಯನ್ನು ಒಮ್ಮೆಯೂ ಟೀಕಿಸಲಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.